Telangana Election Result: ಬೆಂಗಳೂರಿಗೆ ತೆಲಂಗಾಣ ಕಾಂಗ್ರೆಸ್ ಶಾಸಕರು ಶಿಫ್ಟ್!
ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿದ್ದು ಮೊದಲ ಬಾರಿಗೆ ತೆಲುಗು ನಾಡಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸದಲ್ಲಿದೆ. ಈಗಾಗಲೇ ಹೈದರಾಬಾದ್‌ನ ಕಾಂಗ್ರೆಸ್ ಕಚೇರಿ ಎದುರು ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮನೆ ಬಳಿ ಕಾರ್ಯಕರ್ತರು ಜಮಾಯಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕಾಂಗ್ರೆಸ್ ಎಂಎಲ್‌ಎಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಚಿಂತಿಸಲಾಗುತ್ತಿದೆ ಎನ್ನಲಾಗಿದೆ.

ತೆಲಂಗಾಣದಲ್ಲಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡುವ ಹೊಸ್ತಿಲಿನಲ್ಲಿ ಇರುವ ಕಾಂಗ್ರೆಸ್, ಯಾವುದೇ ತಪ್ಪಿಗೂ ಅವಕಾಶ ಕೊಡದಿರಲು ನಿರ್ಧರಿಸಿದೆ. ಅತ್ಯಧಿಕ ಅಂತರದಲ್ಲಿ ಕಾಂಗ್ರೆಸ್ ಗೆಲುವು ಕಂಡರೆ ಆಪರೇಷನ್ ಭೀತಿ ಇರುವುದಿಲ್ಲ, ಇಲ್ಲವಾದಲ್ಲಿ ಪಕ್ಷಾಂತರ ಆಗುವ ಸಾಧ್ಯತೆಗಳಿದ್ದು ಇದನ್ನು ತಪ್ಪಿಸಲು ನಾಯಕರು ಚಿಂತಿಸುತ್ತಿದ್ದಾರೆ.
ಅಖಾಡಕ್ಕೆ ಡಿ.ಕೆ. ಶಿವಕುಮಾರ್
ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಹೈದರಾಬಾದ್‌ನಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅವರಿಗೆ ರಾಜ್ಯದ ಹಲವು ಸಚಿವರು ಕೂಡ ಜೊತೆಯಾಗಿದ್ದಾರೆ. ಒಂದು ವೇಳೆ ಪರಿಸ್ಥಿತಿ ಕೈ ಮೀರುವಂತಿದ್ದರೆ ಕೂಡಲೇ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನ ಹೊರ ಭಾಗದಲ್ಲಿ ಈಗಾಗಲೇ ಬಸ್‌ಗಳನ್ನು ಸಿದ್ಧವಾಗಿ ಇರಿಸಲಾಗಿದೆ. 70 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದರೆ ಶಾಸಕರನ್ನು ಬೆಂಗಳೂರಿಗೆ ಕರೆತರುವುದು ಪಕ್ಕಾ ಎನ್ನಲಾಗಿದೆ.
ಒಂದು ವೇಳೆ ಕಾಂಗ್ರೆಸ್ ಏನಾದರೂ 70-80 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಆಪರೇಷನ್ ಭೀತಿ ಇಲ್ಲವಾಗಲಿದೆ. ಆಗ ಕಾಂಗ್ರೆಸ್ ಸರ್ಕಾರ ರಚನೆಯತ್ತ ಗಮನ ಹರಿಸಲಿದೆ. ರೇವಂತ್ ರೆಡ್ಡಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಹುತೇಕ ಅವರೇ ತೆಲಂಗಾಣ ಸಿಎಂ ಆಗುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ರಾಜಕೀಯದ ಪ್ರಭಾವ ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಹೆಚ್ಚಾಗಿದೆ. ಕರ್ನಾಟಕದ ಬಹುತೇಕ ಸಚಿವರು ಕೂಡ ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಈಗ ಸರ್ಕಾರ ರಚನೆವರೆಗೂ ಡಿ.ಕೆ. ಶಿವಕುಮಾರ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಡಿ.ಕೆ. ಶಿವಕುಮಾರ್ ಈಗಾಗಲೇ ತೆಲಂಗಾಣದ ಪರಿಸ್ಥಿತಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ನೋಡಿಕೊಂಡು ಶಾಸಕರನ್ನು ಶಿಫ್ಟ್ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications