'ಬ್ಲೂ ವೇಲ್' ಪೆಡಂಭೂತಕ್ಕೆ ಮಧ್ಯಪ್ರದೇಶದಲ್ಲಿ ಮತ್ತೊಂದು ಬಲಿ
ಮಧ್ಯಪ್ರದೇಶದಲ್ಲಿ ಬ್ಲೂ ವೇಲ್ ಗೇಮ್ ಗೆ ಸಾತ್ವಿಕ್ ಎಂಬ ವಿದ್ಯಾರ್ಥಿ ಬಲಿ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ವಿದ್ಯಾರ್ಥಿ. ಆದರೆ, ಬ್ಲೂ ವೇಲ್ ಕಾರಣವನ್ನು ತಳ್ಳಿಹಾಕಿದ ಸಾತ್ವಿಕ್ ಪೋಷಕರು.
ಭೋಪಾಲ್, ಸೆಪ್ಟಂಬರ್ 4: ಭಾರತದಲ್ಲಿ ಗುಪ್ತವಾಗಿ ವ್ಯಾಪಿಸಿಕೊಂಡು ಹದಿಹರೆಯದ ಯುವ ಜನತೆಯ ಪ್ರಾಣ ಹರಣ ಮಾಡುತ್ತಿರುವ 'ಬ್ಲೂ ವೇಲ್' ಗೇಮ್ ಗೆ ದಾಮೋಹ್ ನಲ್ಲಿ 17 ವರ್ಷದ ಸಾತ್ವಿಕ್ ಪಾಂಡೆ ಎಂಬ ಬಾಲಕ ಬಲಿಯಾಗಿದ್ದಾನೆ. ಈತ 11ನೇ ತರಗತಿಯಲ್ಲಿ ಓದುತ್ತಿದ್ದ ಎಂದು ಹೇಳಲಾಗಿದೆ.
ನಗರದ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದ ಬಳಿಯಲ್ಲಿರುವ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಬಳಿ ಹೇಳಿಕೆ ನೀಡಿರುವ ಆತನ ಸ್ನೇಹಿತರು, ಸಾತ್ವಿಕ್ ಕೆಲ ದಿನಗಳಿಂದಲೂ ಬ್ಲೂ ವೇಲ್ ಆಟ ಆಡುತ್ತಿದ್ದ ಎಂದು ತಿಳಿಸಿದ್ದಾರೆ.
ಆದರೆ, ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿರುವ ಸಾತ್ವಿಕ್ ಪೋಷಕರು, ''ಸಾತ್ವಿಕ್, ಗಣಿತ ವಿಷಯದಲ್ಲಿ ಹಿಂದುಳಿದಿದ್ದ. ಹೀಗಾಗಿ, ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು'' ಎಂದು ಹೇಳಿದ್ದಾರಲ್ಲದೆ, ಬ್ಲೂ ವೇಲ್ ಆಟದಿಂದಾಗಿಯೇ ಆತ ಸಾವನ್ನಪ್ಪಿರುವ ವಿಚಾರವನ್ನು ತಳ್ಳಿಹಾಕಿದ್ದಾರೆ.












Click it and Unblock the Notifications