ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಚಿಕನ್ ಬಿರಿಯಾನಿ.. ಯಾವಾಗಿನಿಂದ ಹಾಗೂ ಎಲ್ಲಿ?
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದೆ. ಆದರೆ ಇದೀಗ ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿ.ವಿ.ಕೆ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಧ್ಯಾಹ್ನದ ಬಿಸಿಯೂಟ ಹಾಗೂ ಉಪಹಾರ ಯೋಜನೆಯಡಿ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ನೀಡಲು ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತಮಿಳುನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟ ಹಾಗೂ ಉಪಹಾರ ಯೋಜನೆಯಡಿ 'ಚಿಕನ್ ಬಿರಿಯಾನಿ' ನೀಡುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಸೆಪ್ಟೆಂಬರ್ 22ರಂದು ಈ ಯೋಜನೆಯನ್ನು 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಸಜ್ಜಾಗಿದ್ದಾರೆ.

ಹಂತ-ಹಂತವಾಗಿ ಜಾರಿ
ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಬೇಕು ಎಂಬುದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಶಯವಾಗಿದೆ. ಆದರೆ ಈ ಯೋಜನೆಯನ್ನು ರಾಜ್ಯಾದ್ಯಂತ ಏಕಾಏಕಿ ಜಾರಿಗೆ ತರಲು ಸಾಧ್ಯವಿಲ್ಲ. ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಪರಿಶೀಲಿಸಲು ಆರಂಭದಲ್ಲಿ ಪ್ರಾಯೋಗಿಕ ಯೋಜನೆ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ.
ಶಿಕ್ಷಣ ಸಚಿವರ ಮಹತ್ವದ ಹೇಳಿಕೆ
ಸಾವಿರಾರು ಮಕ್ಕಳಿಗೆ ಬೃಹತ್ ಮಟ್ಟದಲ್ಲಿ ನಾನ್-ವೆಜ್ (ಮಾಂಸಾಹಾರ) ಆಹಾರ ತಯಾರಿಸಿ ಬಡಿಸುವಾಗ ನೈರ್ಮಲ್ಯ ಅತ್ಯಂತ ಮುಖ್ಯ. ಶಾಲಾ ಶಿಕ್ಷಣ ಸಚಿವ ರಾಜಮೋಹನ್ ಅವರು ಈ ಕುರಿತು ಮಾತನಾಡಿ, 'ಸೂಕ್ತ ನೈರ್ಮಲ್ಯ ವಾತಾವರಣ ಮತ್ತು ಅಡುಗೆ ಸಾಮಗ್ರಿ ವ್ಯವಸ್ಥೆ ಕೈಗೊಂಡ ನಂತರವೇ ಪೂರ್ಣ ಪ್ರಮಾಣದಲ್ಲಿ ಇದನ್ನು ಜಾರಿಗೊಳಿಸಲಾಗುವುದು,' ಎಂದು ತಿಳಿಸಿದ್ದಾರೆ.
'ರಾಜಕೀಯ ದೃಷ್ಟಿಯಿಂದ ನೋಡಬಾರದು'
ಮುಂದುವರೆದು ಮಾತನಾಡಿದ ಅವರು, 'ಜೈಲಿನಲ್ಲಿರುವ ಕೈದಿಗಳಿಗೂ ಸಹ ಚಿಕನ್ ಬಿರಿಯಾನಿ ಸಿಗುತ್ತದೆ. ಹಾಗಿರುವಾಗ ನಮ್ಮ ಶಾಲಾ ಮಕ್ಕಳಿಗೆ ಅದನ್ನು ನೀಡಲು ಏಕೆ ಸಾಧ್ಯವಿಲ್ಲ?,' ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, 'ಬೆಳೆಯುವ ಮಕ್ಕಳಿಗೆ ಸೂಕ್ತ ಪ್ರಮಾಣದ ಪ್ರೋಟೀನ್ ಅತ್ಯಗತ್ಯವಾಗಿದ್ದು, ಈ ಪ್ರಸ್ತಾವನೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು,' ಎಂದು ಹೇಳಿದ್ದಾರೆ.
ಮಾಂಸಾಹಾರ ಬೇಡ ಎನ್ನುವ ಸಸ್ಯಾಹಾರಿ ಮಕ್ಕಳಿಗೆ ಎಂದಿನಂತೆ ಪೌಷ್ಟಿಕ ಸಸ್ಯಾಹಾರಿ ಊಟ ಹಾಗೂ ಉಪಹಾರ ಪೂರೈಸಲಾಗುತ್ತದೆ. ಮಾಂಸಾಹಾರ ಸೇವಿಸುವ ಮಕ್ಕಳಿಗೆ ಮಾತ್ರವೇ ಚಿಕನ್ ಬಿರಿಯಾನಿ ಆಯ್ಕೆಯನ್ನು ನೀಡಲಾಗುತ್ತದೆ. ತಮಿಳುನಾಡಿನಲ್ಲಿ ಶಿಕ್ಷಣದ ಜೊತೆಗೆ ಪೌಷ್ಟಿಕಾಂಶದ ಕ್ರಾಂತಿ ಸದಾ ನಡೆಯುತ್ತಾ ಬಂದಿದೆ.
ಯೋಜನೆಗೆ ವೆಚ್ಚ ಎಷ್ಟು?
ಈ ಯೋಜನೆಗಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ ₹217.63 ಕೋಟಿ ನಿಧಿಯನ್ನು ಮೀಸಲಿಡಲಾಗಿದ್ದು, ಇದರಿಂದ ಯೋಜನೆಯ ಒಟ್ಟು ಬಜೆಟ್ ₹724 ಕೋಟಿಗೆ ಏರಿಕೆಯಾಗಿದೆ. ಮೆನುವಿನಲ್ಲಿ ಉಪ್ಪಿಟ್ಟು, ಕಿಚಡಿ ಮತ್ತು ಪೊಂಗಲ್ ಸೇರಿದ್ದು, ವಾರದಲ್ಲಿ ಎರಡು ಬಾರಿ ಸಿರಿಧಾನ್ಯ ಆಧಾರಿತ ಆಹಾರದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
ಹಿಂದೆ ಕಾಮರಾಜರ್ ಬಿಸಿಊಟ ಯೋಜನೆ ತಂದರು, ಕರುಣಾನಿಧಿ ಮೊಟ್ಟೆ ಸೇರಿಸಿದರು. ಎಂಜಿಆರ್ ಪೌಷ್ಟಿಕ ಆಹಾರ ಯೋಜನೆ ವಿಸ್ತರಿಸಿದರು, ಜಯಲಲಿತಾ ಅದನ್ನು ಮತ್ತಷ್ಟು ವಿಸ್ತರಿಸಿದರು. ಇದೀಗ ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ, ಹಾಜರಾತಿ ಮತ್ತು ಕಲಿವಿನ ಶಕ್ತಿಯನ್ನು ಹೆಚ್ಚಿಸಲು ಈ ಹೊಸ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಯಾ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸಹಾಯ ಗುಂಪುಗಳ ಸದಸ್ಯರು ಈ ಉಪಹಾರವನ್ನು ತಯಾರಿಸಿ ಪೂರೈಸಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ, ಪೌಷ್ಟಿಕಾಂಶ, ಶಾಲೆಗೆ ಹಾಜರಾತಿ ಮತ್ತು ಕಲಿಕೆಯನ್ನು ಉತ್ತೇಜಿಸುವ ಮೂಲಕ ಶಾಲಾ ಶಿಕ್ಷಣದ ಬಡಿಪಾಯವನ್ನು ಮತ್ತಷ್ಟು ಭದ್ರಪಡಿಸಲು ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.


Click it and Unblock the Notifications
