HMPV: ತಮಿಳುನಾಡಿನಲ್ಲಿ ಎರಡು ಎಚ್‌ಎಂಪಿವಿ ಪ್ರಕರಣ ಪತ್ತೆ; ಭಾರತದಲ್ಲಿ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆ
ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹ್ಯೂಮನ್ ಮೆಟಾ ನ್ಯೂಮೋವೈರಸ್ (HMPV) ಪ್ರಕರಣಗಳು ಪತ್ತೆಯಾದ ಬಳಿಕ ಇದೀಗ ತಮಿಳುನಾಡಿನಲ್ಲಿ ಎರಡು ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಮೂಲಕದ ಸೋಮವಾರ ದೇಶದಲ್ಲಿ ಒಟ್ಟಾರೆ ಐದು ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮೂರು ತಿಂಗಳ ಮಗು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆಯಾಗಿತ್ತು.ಬಳಿಕ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಮಗುವಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗ ತಮಿಳುನಾಡಿನ ಚೆನ್ನೈ ಮತ್ತು ಸೇಲಂನಲ್ಲಿ ಒಂದೊಂದು ಪ್ರಕರಣ ವರದಿಯಾಗಿದೆ.
ಚೀನಾದ ವೈರಸ್ ಅಲ್ಲ!
ಚೆನ್ನೈನಲ್ಲಿ ಒಬ್ಬರಿಗೆ ಮತ್ತು ಸೇಲಂನಲ್ಲಿ ಒಬ್ಬರಿಗೆ ಎಚ್‌ಎಂಪಿವಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದು ಚೀನಾದಲ್ಲಿ ರೂಪಾಂತರಗೊಂಡಿರುವ ಎಚ್‌ಎಂಪಿವಿ ವೈರಸ್ ಅಲ್ಲ, ತಮಿಳುನಾಡಿಲ್ಲಿ ಹರಡುವ ಎಚ್‌ಎಂಪಿವಿ ವೈರಸ್ ಹಲವು ವರ್ಷಗಳಿಮದ ಇರುವ ವೈರಲ್ ಜ್ವರ ಎಂದು ಆರೋಗ್ಯ ಇಲಾಖೆ ಹೇಳಿದೆ.

ಎಚ್‌ಎಂಪಿವಿ ಪ್ರಕರಣಗಳು ದೇಶದಲ್ಲಿ ಪತ್ತೆಯಾದ ಬಳಿಕ ಸಹಜವಾಗಿಯೇ ಸಾರ್ವಜನಿಕರನ್ನು ಆತಂಕ ಶುರುವಾಗಿದೆ. ತಮಿಳುನಾಡಿನ ಇಬ್ಬರಲ್ಲಿ ವೈರಸ್ ಪತ್ತೆಯಾದ ಬಳಿಕ ತಮಿಳುನಾಡಿನ ಸಾರ್ವಜನಿಕ ಆರೋಗ್ಯ ಇಲಾಖೆಯು ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದೆ. ಇದು ತಮಿಳುನಾಡಿನಲ್ಲಿ ಹರಡುವ ಸಾಮಾನ್ಯ ಎಚ್‌ಎಂಪಿವಿ ವೈರಸ್ ಜ್ವರ ಎಂದು ತಿಳಿಸಿದೆ.
ಆತಂಕ ಬೇಡ ಎಂದ ವೈದ್ಯರು
ಎಚ್‌ಎಂಪಿವಿ ವೈರಸ್ ಈಗ ಹೊಸದಾಗಿ ಪತ್ತೆಯಾಗಿರುವುದಲ್ಲ, 2001ರಲ್ಲೇ ಈ ವೈರಸ್ ಅನ್ನು ಪತ್ತೆ ಹಚ್ಚಲಾಗಿದೆ. ಚಳಿಗಾಲದಲ್ಲಿ ಈ ವೈರಸ್ ಹರಡುವುದು ಚೀನಾದಲ್ಲಿ ಸಾಮಾನ್ಯ ಎನ್ನಲಾಗಿದೆ. ಕೋವಿಡ್ ಸೋಂಕಿನ ಲಕ್ಷಣಗಳನ್ನೇ ಹೊಂದಿದ್ದರು ಎಚ್‌ಎಂಪಿವಿ ಮಾರಕವಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದು ಕೋವಿಡ್ ರೀತಿ ಸಾಂಕ್ರಾಮಿಕವಾಗುವ ಸಾಧ್ಯತೆ ಇಲ್ಲ ಎಂದು ಕೂಡ ತಿಳಿಸಿದ್ದಾರೆ.
ಗಂಟಲು ನೋವು, ಉಸಿರಾಟದ ತೊಂದರೆ, ಶೀತ, ಕೆಮ್ಮು, ಜ್ವರ ಈ ಸೋಂಕಿನ ಲಕ್ಷಣವಾಗಿದೆ. ಕೋವಿಡ್ ಕೂಡ ಇದೇ ಲಕ್ಷಣ ಹೊಂದಿದ್ದರಿಂದ ಜನ ಆತಂಕಗೊಂಡಿದ್ದಾರೆ. ಆದರೆ ಎಚ್‌ಎಂಪಿವಿ ಸದ್ಯ ಆ ಮಟ್ಟದಲ್ಲಿ ಹರಡುವ ಸಾಧ್ಯತೆ ಇಲ್ಲದ ಕಾರಣ, ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ. ಈ ವೈರಸ್ ಮುಖ್ಯವಾಗಿ 5 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ತೊಂದರೆ ಕೊಡಲಿದ್ದು ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಸೂಚನೆ ಕೊಟ್ಟಿದೆ.












Click it and Unblock the Notifications