ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗೆ ತಮಿಳುನಾಡು ಸಚಿವೆಯ 'ಇಂಗ್ಲಿಷ್ ಕ್ಲಾಸ್'; ಕಣ್ಣೀರಿಟ್ಟ ಮಗು, ವಿಡಿಯೋ ವೈರಲ್
ತಮಿಳುನಾಡಿನ ಪ್ರಮುಖ ಸಚಿವರೊಬ್ಬರು ಮಾಡಿರುವ ಎಡವಟ್ಟು ಇದೀಗ ರಾಷ್ಟ್ರದಾದ್ಯಂತ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿರುವ ಅಲ್ಲಿನ ಸಚಿವರು ಸರ್ಕಾರಿ ಶಾಲೆಯ ಮಗುವಿನ ಬಳಿ ಇಂಗ್ಲಿಷ್ನಲ್ಲಿ ವಿವರಣೆ ಕೇಳಿದ್ದಾರೆ. ಇಂಗ್ಲಿಷ್ನಲ್ಲಿ ಉತ್ತರ ಕೊಡಲಾಗದೆ ಮಗು ತಡವರಿಸಿದೆ. ಇದಕ್ಕೆ ಇಂಗ್ಲಿಷ್ನಲ್ಲಿ ಸಣ್ಣ ವಿವರಣೆ ಕೇಳಿದರೂ ಹೇಳುವುದಕ್ಕೆ ಈ ಮಗುವಿಗೆ ಬರುತ್ತಿಲ್ಲ ಎಂದು ಅವರು ಶಾಲಾ ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಮಗು ತಡವರಿಸಿ, ಕಣ್ಣೀರು ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಜುಲೈ 2 ರಂದು ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಆಡಳಿತರೂಢ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ನಾಯಕಿ ಮತ್ತು ಕೈಗಾರಿಕಾ ಸಚಿವೆ ಕೀರ್ತನಾ ಸಂಪತ್ ಅವರು ಮಾತನಾಡಿರುವ ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಇದೀಗ ತಮಿಳುನಾಡಿನಲ್ಲಿ ರಾಜಕೀಯ ವಾದ - ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಚಿವರು, "ನಿಮ್ಮ ತಂದೆ ಏನು ಮಾಡುತ್ತಾರೆ?" ಎಂದು ಇಂಗ್ಲಿಷ್ನಲ್ಲಿ ಕೇಳಿದ್ದಾರೆ, ನಂತರ ಶಿಕ್ಷಕರಿಗೆ ಮಗು "ಒಂದು ಸರಳ ಪ್ರಶ್ನೆಗೆ ಸಹ ಉತ್ತರಿಸಲು ಸಾಧ್ಯವಿಲ್ಲ" ಎಂದು ಹೇಳಿರುವುದು ಸಹ ಇದೆ.

ನಂತರ ಕೀರ್ತನಾ ಶಿಕ್ಷಕಿಯನ್ನು ಮಗುವನ್ನು ಪ್ರಶ್ನಿಸಲು ಕೇಳುತ್ತಾರೆ, ಶಿಕ್ಷಕರಿ ಇಂಗ್ಲಿಷ್ನಲ್ಲಿ ಮಾಡುತ್ತಾರೆ. ನಂತರ ಮಗು ತನ್ನ ತಂದೆಯ ಹೆಸರು ಮತ್ತು ಉದ್ಯೋಗ ಸೇರಿದಂತೆ ಕೆಲವು ಪ್ರಶ್ನೆಗಳಿಗೆ ಹಿಂಜರಿಕೆಯಿಂದ ಉತ್ತರಿಸಿರುವುದು ಇದೆ. ನಂತರ ಸಚಿವರು, ವಿದ್ಯಾರ್ಥಿನಿ ಇಂಗ್ಲಿಷ್ನಲ್ಲಿ ಉತ್ತರಿಸಲು ಅಸಮರ್ಥವಾಗಿರುವುದು ಹಿಂದಿನ ಸರ್ಕಾರ - ಡಿಎಂಕೆ ನೇತೃತ್ವದ - ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಡಿಎಂಕೆ ಆಳ್ವಿಕೆಯಲ್ಲಿ ಸಾರ್ವಜನಿಕ ಶಿಕ್ಷಣದ ಕಳಪೆ ಗುಣಮಟ್ಟವನ್ನು ಬಹಿರಂಗವಾಗಿದ ಎಂದಿದ್ದಾರೆ. ಮುಂದುವರಿದು ಇದೇ ಪ್ರಶ್ನೆಯನ್ನು ತರಗತಿಯ ಲಾಸ್ಟ್ ಬೆಂಚ್ನಲ್ಲಿ ಇರುವ ವಿದ್ಯಾರ್ಥಿಯ ಬಳಿ ಕೇಳಿ ನೋಡಿ ಅಂತಲೂ ಹೇಳಿದ್ದಾರೆ. ಏತನ್ಮಧ್ಯೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ನಾಯಕರು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು, ಈ ಸಂವಾದವನ್ನು ಸಂವೇದನೆಯೇ ಇಲ್ಲದ ನಡೆ ಎಂದು ಟೀಕಿಸಿದ್ದಾರೆ.
Tamil Nadu: ವೈರಲ್ ವಿಡಿಯೋಗೆ ಸಚಿವೆ ಹೇಳಿದ್ದೇನು
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಚಿವೆ ಕೀರ್ತನಾ ಅವರು ಯೂರ್ಟನ್ ತೆಗೆದುಕೊಂಡಿದ್ದಾರೆ. ಕೀರ್ತನಾ ಅವರು ಉದ್ದೇಶಪೂರ್ವಕವಾಗಿ ಆ ಬಾಲಕಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಸ್ವಂತ ಶೈಕ್ಷಣಿಕ ಹಿನ್ನೆಲೆ ಮತ್ತು ಅವರು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
"ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿಯನ್ನು ಅಪಹಾಸ್ಯ ಮಾಡಿದ್ದೇನೆ ಎಂದು ಕೆಲವರು ಸುಳ್ಳುಗಳನ್ನು ಹರಡುತ್ತಿದ್ದಾರೆ. ನಾನು ಸ್ವತಃ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ ಮತ್ತು ತಮಿಳು ಮೀಡಿಯಂನಲ್ಲಿ ಓದಿದ್ದೀನಿ. ನಾನು ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸಿದಾಗ ನಾನು ಬಹಳ ಕಷ್ಟಪಟ್ಟೆ. ಆದರೆ ನಾನು ಕಲಿತಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ. ಈ ರೀತಿ ಹೇಳುವುದರಲ್ಲಿ ನನಗೆ ಯಾವುದೇ ನಾಚಿಕೆ ಇಲ್ಲ" ಎಂದು ಅವರು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications