ಹನೂರು ಶೂಟೌಟ್: ತಮಿಳುನಾಡು ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ!
ಚೆನ್ನೈ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ತಮಿಳುನಾಡು ಅರಣ್ಯ ಸಚಿವ ಆರ್.ವಿ. ರಂಜಿತ್‌ಕುಮಾರ್ ತಿಳಿಸಿದ್ದಾರೆ.
ಹನೂರು ಶೂಟೌಟ್ ಘಟನೆಯನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಖಂಡಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್ ಪ್ರಕರಣ ಪ್ರತಿಧ್ವನಿಸಿತು. ಡಿಎಂಕೆ ಹಾಗೂ ಎಐಎಡಿಎಂಕೆ ಮುಖಂಡರು ಪ್ರಕರಣದ ಕುರಿತು ಸದನದಲ್ಲಿ ಧ್ವನಿ ಎತ್ತಿದರು.

ವಿಧಾನಸಭೆಯಲ್ಲಿ ವಿಶೇಷ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವ ರಂಜಿತ್‌ಕುಮಾರ್, ಮುಖ್ಯಮಂತ್ರಿ ವಿಜಯ್ ಅವರ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಅರಣ್ಯ ಇಲಾಖೆ ಸಮಾಲೋಚನೆ ನಡೆಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ಹನೂರು ಶೂಟೌಟ್ ಪ್ರಕರಣವನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸಬೇಕುಎಂಬ ಆಗ್ರಹವೂ ತಮಿಳುನಾಡು ವಿಧಾನಸಭೆಯಲ್ಲಿ ಕೇಳಿಬಂದಿದೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ದೊರಕಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಆಗಸ್ಟ್ 14ರಂದು ಕರ್ನಾಟಕ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ತಮಿಳರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ಗಮನ ಸೆಳೆಯುವ ಸೂಚನೆ ಮಂಡನೆಯಾಯಿತು. ಈ ವೇಳೆ ಮಾತನಾಡಿದ ತಮಿಳುನಾಡು ಅರಣ್ಯ ಸಚಿವಆರ್.ವಿ. ರಂಜಿತ್‌ಕುಮಾರ್, ಮುಖ್ಯಮಂತ್ರಿಸಿ. ಜೋಸೆಫ್ ವಿಜಯ್ಅವರ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದರು.
ಹನೂರಿನಲ್ಲಿ ಮೃತರೆಲ್ಲರೂ ತಮಿಳುನಾಡು ಮೂಲದವರು. ಮೆಟ್ಟೂರು ಜಲಾಶಯ ನಿರ್ಮಾಣದಿಂದ ಹನೂರಿನಲ್ಲಿ ಅವರು ವಾಸವಿದ್ದು, ಅವರೆಲ್ಲ ತಮಿಳರು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ಸದನದಲ್ಲಿ ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಕುರಿತು ಈ ಹಿಂದೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ್ದ ತಮಿಳುನಾಡು ಕಾನೂನು ಸಚಿವ ಆರ್. ನಿರ್ಮಲ್‌ಕುಮಾರ್ ಕೂಡ ಪರಿಹಾರ ನೀಡುವ ಪ್ರಸ್ತಾವನೆಯನ್ನು ದೃಢಪಡಿಸಿದ್ದರು. ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ನಡೆದಿರುವ ಈ ಶೂಟೌಟ್ ಪ್ರಕರಣ ಇದೀಗ ಎರಡೂ ರಾಜ್ಯಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
