Tamil Nadu Gold Ring Scheme: ನವಜಾತ ಶಿಶುಗಳಿಗೆ ಇನ್ಮುಂದೆ ಇಷ್ಟು ಗ್ರಾಂನ ಉಚಿತ ಚಿನ್ನದ ಉಂಗುರ: ಸಿಎಂ ವಿಜಯ್ ಚಾಲನೆ!
Tamil Nadu Gold Ring Scheme: ನಟ, ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ತಮಿಳುನಾಡಿನಲ್ಲಿ ಮಹತ್ವದ "ನವಜಾತ ಶಿಶುವಿಗೆ ಚಿನ್ನದ ಉಂಗುರ' ಕೊಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಮಹತ್ವದ ಯೋಜನೆಗಳಲ್ಲಿ ಈ ಯೋಜನೆಯೂ ಒಂದಾಗಿದೆ.
ಸೆಪ್ಟೆಂಬರ್ 28ರ ಸೋಮವಾರ ತಮಿಳುನಾಡಿನ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ತಮಿಳುನಾಡಿನ ನವಜಾತ ಶಿಶುಗಳಿಗೆ ಒಂದು ಗ್ರಾಂ ಚಿನ್ನದ ಉಂಗುರ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಈ ಯೋಜನೆಗೆ ತಾಯ್ ಮಾಮನ್ ತಂಗ ಮೋತಿರಾಮ್ (ತಾಯಿ ಸಹೋದರ - ತಮ್ಮ ಅಥವಾ ಅಣ್ಣ ಕೊಡುವ ಚಿನ್ನದ ಉಂಗುರ) ಯೋಜನೆ ಎಂದು ಹೆಸರಿಸಲಾಗಿದೆ. ಇನ್ಮುಂದೆ ತಮಿಳುನಾಡಿನ ಸರ್ಕಾರವು ಆ ರಾಜ್ಯದಲ್ಲಿ ಜನಿಸುವ ಮಗುವಿಗೆ ಒಂದು ಗ್ರಾಂ ಉಚಿತ ಚಿನ್ನದ ಉಂಗುರವನ್ನು ಕೊಡಲಿದೆ!

ವಿಜಯ್ ಅವರು ಎಂದಿನಂತೆ ತಮ್ಮ ಕಪ್ಪು ಸೂಟ್ ಮತ್ತು ಬಿಳಿ ಶರ್ಟ್ ಬದಲಿಗೆ, ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಚಿನ್ನದ ಬಣ್ಣದ ವೇಷ್ಟಿ (ಧೋತಿ) ಮತ್ತು ಅದಕ್ಕೆ ಹೊಂದುವ ಶರ್ಟ್ ಧರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಯೋಜನೆಯನ್ನು ಉದ್ಘಾಟಿಸಿದ ಬಳಿಕ ವಿಜಯ್ ಅವರು ಶಿಶುಗಳನ್ನು ಎತ್ತಿಕೊಂಡು, ಅವರ ತಾಯಂದಿರಿಗೆ ಚಿನ್ನದ ಉಂಗುರ ಇರುವ ಪೆಟ್ಟಿಗೆಯನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರು ತಃ ನವಜಾತ ಶಿಶುವಿನ ಬೆರಳಿಗೆ ಉಂಗುರಗಳನ್ನು ಹಾಕಿದ್ದಾರೆ ಸಹ.
Gold Ring: 755.83 ಕೋಟಿ ರೂ. ಮೀಸಲು
ಇನ್ನು ತಮಿಳುನಾಡು ಸರ್ಕಾರವು ತಮಿಳುನಾಡಿನಲ್ಲಿ ತಾಯ್ ಮಾಮನ್ ತಂಗ ಮೋತಿರಾಮ್ ಯೋಜನೆಯನ್ನು ಅನುಷ್ಠಾನ ಮಾಡುವುದಕ್ಕಾಗಿ / ಜಾರಿ ಮಾಡುವುದಕ್ಕಾಗಿ ಬರೋಬ್ಬರಿ 755.83 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಈ ಕಲ್ಯಾಣ ಕಾರ್ಯಕ್ರಮವು ತಾಯ್ತನವನ್ನು ಗೌರವಿಸುವುದು, ಮಹಿಳೆಯರ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಹೆಚ್ಚಿನ ಕುಟುಂಬಗಳನ್ನು ಸಾರ್ವಜನಿಕ ಆರೋಗ್ಯ ರಕ್ಷಣೆ ವ್ಯಾಪ್ತಿಗೆ ತರುವುದು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವುದನ್ನು ಉತ್ತೇಜಿಸುವಂತಹ ಉದ್ದೇಶಗಳನ್ನು ಹೊಂದಿದೆ.
ಇನ್ನು ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳು ಹಾಗೂ ತಾಯಂದಿರಿಗಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ. ತಮಿಳುನಾಡಿನ ಟಿವಿಕೆ ಸರ್ಕಾರವು ಈಗಾಗಲೇ ಈ ಯೋಜನೆಯ ಭಾಗವಾಗಿ 1.28 ಲಕ್ಷ ಚಿನ್ನದ ಉಂಗುರಗಳನ್ನು ಖರೀದಿಸಿದೆ. ಜೂನ್ 22, 2026 ರಂದು ಅಥವಾ ನಂತರ ಜನಿಸಿದ ಅರ್ಹ ಶಿಶುಗಳಿಗೆ ಈ ಯೋಜನೆ ಅನ್ವಯಿಸಲಿದೆ. ಈ ಯೋಜನೆಯಡಿಯಲ್ಲಿ, ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸಿದ ಅರ್ಹ ಮಕ್ಕಳಿಗೆ ಒಂದು ಗ್ರಾಂ ಚಿನ್ನದ ಉಂಗುರಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಅರ್ಹ ಕುಟುಂಬಗಳಿಂದ ನವಜಾತ ಶಿಶುಗಳಿಗೆ ಪ್ರಯೋಜನವನ್ನು ನೀಡಲು ಮತ್ತು ತಾಯಿ ಮತ್ತು ಮಕ್ಕಳ ಕಲ್ಯಾಣ ಬಲಪಡಿಸುವುದು ಈ ಯೋಜನೆ ಉದ್ದೇಶಿಸಲಾಗಿದೆ.
ಜಿಲ್ಲಾಡಳಿತದ ಪ್ರಕಾರ, ಫಲಾನುಭವಿಗಳು ನಿಗದಿತ ಗುರುತಿನ ಚೀಟಿ ಅಥವಾ ನಿವಾಸ ದಾಖಲೆಗಳಲ್ಲಿ ಯಾವುದಾದರೂ ಒಂದರೊಂದಿಗೆ ಇ-ಕೆವೈಸಿ-ಪರಿಶೀಲಿಸಿದ ಆಧಾರ್ ಕಾರ್ಡ್ ಅನ್ನು ತೋರಿಸಬೇಕಾಗುತ್ತದೆ. ಚಿನ್ನದ ಉಂಗುರಗಳ ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದೂ ತಮಿಳುನಾಡು ಸರ್ಕಾರವು ತಿಳಿಸಿದೆ.


Click it and Unblock the Notifications
