ತಮಿಳುನಾಡು: 2ನೇ ವಿಮಾನ ನಿಲ್ದಾಣ ಯೋಜನೆ ರದ್ದುಪಡಿಸಿದ ಸಿಎಂ ವಿಜಯ್!
ಚೆನ್ನೈ: ರೈತರ ಕೃಷಿ ಭೂಮಿ ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ತಮಿಳುನಾಡಿನ ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ವಿಧಾನಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಚೆನ್ನೈಗೆ ಹೊಸ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಒತ್ತಿ ಹೇಳಿದ ವಿಜಯ್, ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಸರಕು ಸಾಗಣೆ ಪ್ರಮಾಣದ ಹಿನ್ನೆಲೆಯಲ್ಲಿ ಹೊಸ ವಿಮಾನ ನಿಲ್ದಾಣ ಅಗತ್ಯವಾಗಿದೆ ಎಂದರು. ಆದರೆ, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ಕನಿಷ್ಠ ಹಾನಿಯಾಗುವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಅವರು ಹೇಳಿದರು.

ಚೆನ್ನೈನ ಮೀನಂಬಾಕ್ಕಂ ವಿಮಾನ ನಿಲ್ದಾಣವು ಪ್ರಸ್ತುತ ವರ್ಷಕ್ಕೆ ಸುಮಾರು 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜಯ್ ತಿಳಿಸಿದರು. ಟರ್ಮಿನಲ್-3 ಕಾರ್ಯಾರಂಭವಾದ ಬಳಿಕ ಈ ಸಾಮರ್ಥ್ಯ 3.4 ಕೋಟಿಗೆ ಏರಿಕೆಯಾಗಲಿದೆ ಎಂದರು. ಇದರ ಜೊತೆಗೆ, ಈಗಿರುವ ವಿಮಾನ ನಿಲ್ದಾಣದ ವಾಯವ್ಯ ಭಾಗದಲ್ಲಿ ಐದನೇ ಟರ್ಮಿನಲ್ ನಿರ್ಮಿಸುವ ಯೋಜನೆ ಇದೆ. ಇದು ಕಾರ್ಯಾರಂಭ ಮಾಡಿದರೆ ವಾರ್ಷಿಕವಾಗಿ ಮತ್ತಷ್ಟು 2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಲಭ್ಯವಾಗಲಿದೆ ಎಂದು ಹೇಳಿದರು.
2025ರ ಜನವರಿ 20ರಂದು ಏಗನಾಪುರಂ ಸೇರಿದಂತೆ ಪರಂದೂರು ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ವಿಮಾನ ನಿಲ್ದಾಣ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರ ಅಹವಾಲುಗಳನ್ನು ಆಲಿಸಿದ್ದಾಗಿ ವಿಜಯ್ ಹೇಳಿದರು. ಚೆನ್ನೈನ ಪರಂದೂರು ಮತ್ತು ಸುತ್ತಮುತ್ತಲಿನ 12 ಗ್ರಾಮಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಿರುವ ಜನರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು.
ರೈತರು ದೇಶದ ಬೆನ್ನೆಲುಬು ಎಂದು ಬಣ್ಣಿಸಿದ ವಿಜಯ್, ಕೃಷಿ ಭೂಮಿ ಮತ್ತು ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಯಾವುದೇ ವಿಮಾನ ನಿಲ್ದಾಣ ಯೋಜನೆಗೆ ಸರ್ಕಾರ ಅವಕಾಶ ನೀಡುವುದಿಲ್ಲ ಎಂದರು. 2024ರ ಅಕ್ಟೋಬರ್‌ನಲ್ಲಿ ವಿಕ್ರವಾಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ತಾವು ಪರಂದೂರು ವಿಮಾನ ನಿಲ್ದಾಣ ಯೋಜನೆಯನ್ನು ವಿರೋಧಿಸಿದ್ದಾಗಿ ಅವರು ತಿಳಿಸಿದರು. ಕೈಗಾರಿಕಾ ಅಭಿವೃದ್ಧಿ ಹಾಗೂ ಅದಕ್ಕೆ ವಿಮಾನ ನಿಲ್ದಾಣಗಳ ಕೊಡುಗೆಯನ್ನು ತಾವು ಬೆಂಬಲಿಸುವುದಾಗಿ ಹೇಳಿದ ಅವರು, ವಿಮಾನ ನಿಲ್ದಾಣ ಯೋಜನೆಗೆ ವಿರೋಧವಿಲ್ಲ, ಆದರೆ ಪರಂದೂರಿನಲ್ಲಿ ನಿರ್ಮಿಸುವುದಕ್ಕೆ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಪರ್ಯಾಯ ಸ್ಥಳ ಹುಡುಕಾಟ
ಹೊಸ ವಿಮಾನ ನಿಲ್ದಾಣಕ್ಕೆ ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ. ತಜ್ಞರ ತಂಡದಿಂದ ತಾಂತ್ರಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಿದ ಬಳಿಕ ಸೂಕ್ತ ಸ್ಥಳವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ಹೇಳಿದರು. ಹಿಂದಿನ ಡಿಎಂಕೆ ಸರ್ಕಾರವು ಹೆಚ್ಚಿನ ಸಂಖ್ಯೆಯ ಜನರನ್ನು ಸ್ಥಳಾಂತರಿಸಬೇಕಾದ ಮತ್ತು ಕೃಷಿ ಭೂಮಿಗೆ ಹಾನಿಯಾಗುವ ಪ್ರದೇಶವನ್ನು ಯೋಜನೆಗಾಗಿ ಆಯ್ಕೆ ಮಾಡಿತ್ತು ಎಂದು ಅವರು ಆರೋಪಿಸಿದರು.
2025ರಲ್ಲಿ ಕೇಂದ್ರದಿಂದ ತಾತ್ವಿಕ ಅನುಮೋದನೆ
ಕಾಂಚೀಪುರಂ ಜಿಲ್ಲೆಯ ಪರಂದೂರಿನಲ್ಲಿ ಅಂತಾರಾಷ್ಟ್ರೀಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು 2025ರ ಏಪ್ರಿಲ್‌ನಲ್ಲಿ ತಾತ್ವಿಕ ಅನುಮೋದನೆ ನೀಡಿತ್ತು. ಆದರೆ ಇದೀಗ ಯೋಜನೆಯನ್ನು ಕೈಬಿಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮಾಜಿ ಸಚಿವ ಹಾಗೂ ಡಿಎಂಕೆ ಶಾಸಕ ತಂಗಂ ತೆನ್ನರಸು , ರಾಜಕೀಯ ಕಾರಣಕ್ಕಾಗಿ ಯೋಜನೆಯನ್ನು ರದ್ದುಗೊಳಿಸುವುದರಿಂದ ರಾಜ್ಯಕ್ಕೆ ಆರ್ಥಿಕ ನಷ್ಟವಾಗಲಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕೈಗಾರಿಕೆಗಳು ನೆರೆಯ ಆಂಧ್ರಪ್ರದೇಶದತ್ತ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದ್ದಾರೆ.


Click it and Unblock the Notifications
