ಸೂಪರ್ ಸ್ಟಾರ್ ರಜನಿಕಾಂತ್ ಮೊರೆ ಹೋದ ಬಿಜೆಪಿ
ತಿರುಚಿ, ಸೆ. 14: ಅತ್ತ ದೆಹಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅಧಿಕೃತವಾಗಿ ನೇಮಕವಾಗುತ್ತಿದ್ದಂತೆ ಇತ್ತ ನಾನಾ ರಾಜ್ಯಗಳಲ್ಲಿ ಬಿಜೆಪಿ ಘಟಕಗಳು ನವಚೈತನ್ಯದಿಂದ ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿವೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟೂ ಎಲ್ಲ ಕಡೆಗಳಿಂದಲೂ ಬೆಂಬಲ ಗಳಿಸಲು ಮುಂದಾಗಿವೆ.
ಈನ ಪ್ರಯತ್ನದಲ್ಲಿ ತಮಿಳುನಾಡಿನ ಬಿಜೆಪಿ ಘಟಕವು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ಯಾಚಿಸಿದೆ. ಅಂದಹಾಗೆ, ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನರೇಂದ್ರ ಮೋದಿ ಅವರಿಗೆ ಆತ್ಮೀಯರಾಗಿರುವುದು ತಮಿಳುನಾಡು ಬಿಜೆಪಿಗೆ ಉತ್ತೇಜನಕಾರಿಗಿದೆ. ಇದನ್ನೆಲ್ಲ ಲೆಕ್ಕ ಹಾಕಿರುವ ರಾಜ್ಯ ಘಟಕ ನಟ ರಜನಿಕಾಂತ್ ಅವರ ಬೆಂಬಲ ಯಾಚನೆಗೆ ಮುಂದಾಗಿದೆ.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಪೊನ್ ರಾಧಾಕೃಷ್ಣನ್ ಅವರು ಪ್ರಯತ್ನಶೀಲರಾಗಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ನಟ ರಜಿನಿ ಅವರಲ್ಲಿ ಮನವಿ ಮಾಡಿದ್ದಾರೆ.
'ತಮಿಳುನಾಡಿನಲ್ಲಿ ಅವರೊಬ್ಬ (ನಟ ರಜನಿಕಾಂತ್) ಅತ್ಯಂತ ಜವಾಬ್ದಾರಿಯುತ ಮತ್ತು ಆದರಣೀಯ ವ್ಯಕ್ತಿ. ಇಡೀ ರಾಷ್ಟ್ರಕ್ಕೆ ಅದರಲ್ಲೂ ತಮಿಳುನಾಡಿಗೆ ಒಳಿತಾಗಲಿ ಎಂದು ಬಯಸುವ ವ್ಯಕ್ತಿತ್ವ ಅವರದ್ದು. ಹಾಗಾಗಿ ನಟ ರಜನಿಕಾಂತ್ ಅವರ ಬೆಂಬಲ ಯಾಚಿಸಿದ್ದೇವೆ' ಎಂದು ರಾಧಾಕೃಷ್ಣನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಬಿಜೆಪಿಗೆ ಬೆಂಬಲ ನೀಡುವಂತೆ ಸಾರ್ವತ್ರಿಕವಾಗಿ ನಟ ರಜಿನಿಕಾಂತ್ ಅವರಿಗೆ ನಾನು ಮನವಿ ಮಾಡುತ್ತೇನೆ. ಬಿಜೆಪಿ ಪಕ್ಷಕ್ಕಾಗಿ ಅವರು ತಮ್ಮ ದನಿಗೂಡಿಸಲಿ' ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
ಅಂದಹಾಗೆ ಸದ್ಯದಲ್ಲೇ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಲಿದ್ದು, ಸೆಪ್ಟೆಂಬರ್ 26ರಂದು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿ ಕಂಪುಕೋಟೆಯ ಮಾದರಿಯಲ್ಲಿ ಬೃಹದಾಕಾರದ ವೇದಿಕೆ ಸ್ಥಾಪಿಸಲಿದ್ದು, ಮೋದಿ ವೇದಿಕೆಯಲ್ಲಿ ಭಾಷಣ ಮಾಡಲಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರೂ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು. ಹೈದರಾಬಾದ್ ಮಾದರಿಯಲ್ಲಿ ಸುಮಾರು 1.5 ಲಕ್ಷ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಆಶಯವಿದೆ.












Click it and Unblock the Notifications