ವಿಮಾನ ನಿಲ್ದಾಣಗಳಲ್ಲಿ ಫೋನ್, ಲ್ಯಾಪ್‌ಟಾಪ್ ತಪಾಸಣೆಗೆ ಕ್ಯೂನಲ್ಲಿ ನಿಲ್ಲುವುದಕ್ಕೆ ಕೊನೆ!
ನವದೆಹಲಿ, ಡಿ. 21: ಭದ್ರತಾ ತಪಾಸಣೆಗಾಗಿ ವಿಮಾನ ನಿಲ್ದಾಣಗಳಲ್ಲಿ ಉದ್ದನೆಯ ಸರತಿ ಸಾಲುಗಳು, ಎಲೆಕ್ಟ್ರಾನಿಕ್ ಸಾಧನಗಳ ತಪಾಸಣೆಗೆ ಪ್ರತ್ಯೇಕ ಸಾಲುಗಳಿಗೆ ಬ್ರೇಕ್ ಹಾಕಲು ವಿಮಾನಯಾನ ಸಚಿವಾಲಯ ಚಿಂತಿಸಿದೆ ಎಂದು ವರದಿಯಾಗಿದೆ.
ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಚಾರ್ಜರ್‌ಗಳನ್ನು ಪ್ರತ್ಯೇಕ ಟ್ರೇಗಳಲ್ಲಿ ಇಟ್ಟು ಕಾಯಬೇಕಿದ್ದ ಪ್ರಯಾಣಿಕರು ಇನ್ನು ಮುಂದೆ ಹೀಗೆ ಟ್ರೇನಲ್ಲಿ ಇಡದೆಯೇ ಶೀಘ್ರದಲ್ಲೇ ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ಮುಗಿಸಬಹುದು. ಇದು ಈ ತಿಂಗಳಲ್ಲಿ ಹೆಚ್ಚು ಸುದ್ದಿಯಾದ ವಿಮಾನ ನಿಲ್ದಾಣದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಬುಧವಾರ ವರದಿಗಳು ತಿಳಿಸಿವೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಒಂದು ತಿಂಗಳೊಳಗೆ ಈ ಬಗ್ಗೆ ಆದೇಶವನ್ನು ಹೊರತರಲಿದೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳುವುದರಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಹಾಕದೆಯೇ ಬ್ಯಾಗ್‌ಗಳನ್ನು ವೇಗವಾಗಿ ಸ್ಕ್ಯಾನ್ ಮಾಡಬಹುದು ಎಂದು ವರದಿಯಾಗಿದೆ.

ಹೊಸ ಆಧುನಿಕ ಬ್ಯಾಗೇಜ್ ಸ್ಕ್ಯಾನರ್‌ಗಳು, ಈಗಾಗಲೇ ಯುಎಸ್ ಮತ್ತು ಯುರೋಪ್‌ನ ಅನೇಕ ವಿಮಾನ ನಿಲ್ದಾಣಗಳಲ್ಲಿ ಬಳಕೆಯಲ್ಲಿವೆ. ಇಲ್ಲಿ ಪ್ರಯಾಣಿಕರು ತಮ್ಮ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಜಾಕೆಟ್‌ಗಳನ್ನು ತೆಗೆಯುವ ಅಗತ್ಯವಿಲ್ಲ.
"ಪ್ರಯಾಣಿಕರನ್ನು ವೇಗವಾಗಿ ಮತ್ತು ಉತ್ತಮ ಭದ್ರತಾ ಸಾಧನಗಳೊಂದಿಗೆ ಕಳುಹಿಸುವುದು ನಮ್ಮ ಗುರಿಯಾಗಿದೆ" ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದರು.
ಹೊಸ ಆಧುನಿಕ ಯಂತ್ರಗಳನ್ನು ಮೊದಲು ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಳಕೆಗೆ ತರಲಾಗುತ್ತದೆ. ಇದಾದ ಒಂದು ವರ್ಷದೊಳಗೆ ಇತರ ವಿಮಾನ ನಿಲ್ದಾಣಗಳನ್ನು ಹೊಸ ಯಂತ್ರಗಳು ತಲುಪಲಿದೆ ಎಂದು ವರದಿ ತಿಳಿಸಿದೆ.

ದೇಶದ ಕೆಲವು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದೂರುಗಳನ್ನು ದಾಖಲಿಸಿದ ಬಳಿಕ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ದೇಶೀಯ ಮತ್ತು ಅಂತರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಚೆಕ್-ಇನ್ ಮತ್ತು ಭದ್ರತಾ ತಪಾಸಣೆ ಮೂಲಕ ಹಾದುಹೋಗಲು ಪ್ರಯಾಣಿಕರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಕೆಲವು ವಿಮಾನಗಳ ವಿಳಂಬಕ್ಕೆ ಕಾರಣವಾಗಿತ್ತು.
ಪ್ರಯಾಣಿಕರ ದೂರಿನ ಹಿನ್ನೆಲೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಟರ್ಮಿನಲ್ 3 ಕ್ಕೆ ಹೆಚ್ಚಿನ ಸ್ಕ್ಯಾನಿಂಗ್ ಯಂತ್ರಗಳು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಇತರ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದರು.
"ಕಳೆದ 24 ರಿಂದ 36 ಗಂಟೆಗಳಲ್ಲಿ, ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ ಪ್ರತಿ ಚೆಕ್‌ಪಾಯಿಂಟ್‌ನಲ್ಲಿ ದಟ್ಟಣೆಯನ್ನು ತಗ್ಗಿಸಲು ಎಲ್ಲಾ ಏಜೆನ್ಸಿಗಳು ಕ್ರಮ ತೆಗೆದುಕೊಂಡಿವೆ. ಪ್ರವೇಶ ದ್ವಾರಗಳಲ್ಲಿ ಮತ್ತು ಟರ್ಮಿನಲ್‌ನಲ್ಲಿ ಚೆಕ್-ಇನ್ ಕೌಂಟರ್‌ಗಳಲ್ಲಿ ದಟ್ಟಣೆ ಕಡಿಮೆಯಾಗಿದೆ" ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಹಿತಿ ನೀಡಿದ್ದರು.
ದೆಹಲಿ ವಿಮಾನ ನಿಲ್ದಾಣದಲ್ಲಿನ ದಟ್ಟಣೆಯಿಂದಾಗಿ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಪ್ರಯಾಣಿಕರನ್ನು ತಮ್ಮ ವಿಮಾನಕ್ಕೆ ಕನಿಷ್ಠ ಮೂರುವರೆ ಗಂಟೆಗಳ ಮೊದಲು ಚೆಕ್ ಇನ್ ಮಾಡಲು ಮನವಿ ಮಾಡಿತ್ತು.












Click it and Unblock the Notifications