Swati Maliwal: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಮಹಿಳಾ ಆಯೋಗ ಕಠಿಣ ನಿಲುವು
ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದೆ ಹಾಗೂ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಕಠಿಣ ನಿಲುವು ತಳೆದಿದೆ.
ಶುಕ್ರವಾರ ಮೇ 17 ರಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗುವಂತೆ ಮಹಿಳಾ ಆಯೋಗವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಪಿಎಸ್ ಬಿಭವ್ ಕುಮಾರ್ ಅವರಿಗೆ ಸಮನ್ಸ್ ನೀಡಿದೆ.

ಮಹಿಳಾ ಆಯೋಗ ಈ ಪ್ರಕರಣದ ವಿಚಾರಣೆಯನ್ನು ಮೇ 17 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಿದೆ. ಸಂಬಂಧಪಟ್ಟ ಎಲ್ಲಾ ಪಕ್ಷಗಳು ಆಯೋಗದ ಮುಂದೆ ಖುದ್ದಾಗಿ ಹಾಜರಾಗುವುದು ಕಡ್ಡಾಯವಾಗಿದೆ. ದೆಹಲಿಯ ಸಿಎಂ ನಿವಾಸದಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪ ಬಿಭವ್ ಕುಮಾರ್ ಮೇಲಿದ್ದು, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮಹಿಳಾ ಆಯೋಗ ಹೇಳಿದೆ.
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಮೌನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಕುರಿತ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಗುರುವಾರ ನಿರಾಕರಿಸಿದರು.
ಇಂದು ಲಖನೌನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ದೆಹಲಿ ಸಿಎಂಗೆ ಪತ್ರಕರ್ತರು ಪದೇಪದೆ ಮಲಿವಾಲ್ ಹಲ್ಲೆ ಪ್ರಕರಣ ಪ್ರಸ್ತಾಪಿಸಿದಾಗ, 'ಇದಕ್ಕಿಂತ ಮುಖ್ಯವಾದ ವಿಷಯಗಳು ಬೇರೆ ಇವೆ' ಎಂದು ಅಖಿಲೇಶ್ ಪ್ರಶ್ನೆಯನ್ನು ತಳ್ಳಿಹಾಕಿದರು.

ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರ ಮೇಲೆ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರದಲ್ಲಿ ಆರಂಭದಲ್ಲಿ ಮೌನ ವಹಿಸಿದ್ದ ಎಎಪಿ ಸಂಸದ ಸಂಜಯ್ ಸಿಂಗ್ ಅವರು, ಕೇಜ್ರಿವಾಲ್ ಅವರು ಘಟನೆಯ ಬಗ್ಗೆ ಗಮನ ಹರಿಸಿದ್ದು, ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇಂದು ಸಹ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಲು ಮತ್ತೊಮ್ಮೆ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರಿಗೆ ಅವಕಾಶ ನೀಡಲಾಯಿತು.
ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಸಿಂಗ್, ಜಂತರ್ ಮಂತರ್‌ನಲ್ಲಿ ನಡೆದ ಕುಸ್ತಿಪಟುಗಳ ಪ್ರತಿಭಟನೆಯ ವೇಳೆ ಸ್ವಾತಿ ಮಲಿವಾಲ್ ಅವರನ್ನು ದೆಹಲಿ ಪೊಲೀಸರು ಎಳೆದೊಯ್ದು ಹಲ್ಲೆ ಮಾಡಿದ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದರು.
"ಆಮ್ ಆದ್ಮಿ ಪಕ್ಷ ನಮ್ಮ ಕುಟುಂಬ. ಈ ವಿಚಾರದಲ್ಲಿ ಪಕ್ಷ ಸ್ಪಷ್ಟ ನಿಲುವು ತಳೆದಿದೆ... ಜಂತರ್ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯಕ್ಕಾಗಿ ಹೋರಾಡಲು ಮುಂದಾದ ಸ್ವಾತಿ ಮಲಿವಾಲ್ ಪ್ರಕರಣಕ್ಕೆ ಅವರು ಮೊದಲು ಉತ್ತರಿಸಬೇಕು... ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಸಿಂಗ್ ಹೇಳಿದರು.












Click it and Unblock the Notifications