Nityananda: ನಿತ್ಯಾನಂದ ನಿಧನ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಬಗ್ಗೆ ಒಂದಿಲ್ಲಾ ಒಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಇಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನು ಕಂಡು ಜನ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಏನು ಆ ಸುದ್ದಿ? ವೈರಲ್ ಸುದ್ದಿ ನಿಜನಾ?
ಸಾಮಾಜಿಕ ಜಾಲತಾಣದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸಾವನ್ನಪ್ಪಿದ್ದಾರೆಂದು ಸುದ್ದಿಗಳನ್ನು ಹರಿಬಿಡಲಾಗಿದೆ. ಆದರೆ ಇಂದು ಏಪ್ರಿಲ್ 1 ಆದ್ದರಿಂದ ಈ ಸುದ್ದಿ ಫೂಲ್ ಮಾಡಲು ಹರಿಬಿಟ್ಟಂತಹ ಸುದ್ದಿ ಕೂಡ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಹಲವಾರು ತಮಿಳು ಮಾಧ್ಯಮಗಳು ಅವರ ಅಕಾಲಿಕ ಮರಣದ ಬಗ್ಗೆ ಊಹಾಪೋಹ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಮಾಧ್ಯಮಗಳು ಅವರ ಸಾವಿಗೆ ಕಾರಣವನ್ನು ವಿವರಿಸದೆ ದೇವಮಾನವ ನಿತ್ಯಾನಂದ ನಿಧನರಾದರು ಎಂದು ಹೇಳಿಕೊಂಡಿವೆ. ಆದರೆ ಇದು ನಿಜನಾ ಅಥವಾ ಸುಳ್ಳಾ? ಎನ್ನುವ ಬಗ್ಗೆ ನಿಖರತೆ ಇಲ್ಲ.
ಈ ಹಿಂದೆ ಕೂಡ ನಿತ್ಯಾನಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಂದು ಕೂಡ ಅದೇ ರೀತಿ ಸುಳ್ಳು ಸುದ್ದಿ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಇಂದು ಏಪ್ರಿಲ್ 1 ಆಗಿರುವುದರಿಂದ ಏಪ್ರಿಲ್ ಫೂಲ್ ಮಾಡಲು ಕೂಡ ಈ ರೀತಿ ಸುದ್ದಿ ಮಾಡಿರಬಹುದು.

ನಿತ್ಯಾನಂದನ ಆದೇಶಕ್ಕೆ ಲೇಟ್ ಆಗಿ ಹುಟ್ಟಿದ್ದ ಸೂರ್ಯ
ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿನ ವಿದ್ಯಾರ್ಥಿಗಳ ಅಪಹರಣದ ವಿರುದ್ದ ಗುಜರಾತ್ ಪೊಲೀಸರು ನಿತ್ಯಾನಂದ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ನಂತರ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ನಿತ್ಯಾನಂದ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಗುಜರಾತ್ ಪೊಲೀಸರಲ್ಲದೇ, ಕರ್ನಾಟಕದಲ್ಲೂ ನಿತ್ಯಾನಂದ ಅವರ ಮೇಲೆ ಹಲವು ಕ್ರಿಮಿನಲ್ ಕೇಸ್ ಗಳಿವೆ.
ನಿತ್ಯಾನಂದ ಅವರ ಮೂಲ ಹೆಸರು ಎ.ರಾಜಶೇಖರನ್, ಹುಟ್ಟಿದ್ದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ. ಬಿಡದಿ ಸೇರಿದಂತೆ ಹಲವು ಕಡೆ ಇವರ ಆಶ್ರಮಗಳಿಗೆ ಮತ್ತು ಅಸಂಖ್ಯಾತ ಭಕ್ತಸಮೂಹವಿದೆ. ನಿತ್ಯಾನಂದ ಪರಾರಿಯಾದಾಗಿನಿಂದಲೂ ಅವರ ಬಗ್ಗೆ ಹಲವು ವ್ಯಂಗ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ನಲವತ್ತು ನಿಮಿಷ ಲೇಟ್ ಆಗಿ ಉದಯಿಸಬೇಕೆಂದು ಸೂರ್ಯ ದೇವರಿಗೆ ಆದೇಶ ಕೊಟ್ಟಿರುವ ನಿತ್ಯಾನಂದಗೆ, ಸಾವು ಬರಲು ಸಾಧ್ಯವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

"ನಲವತ್ತು ನಿಮಿಷ ಲೇಟ್ ಆಗಿ ನೀನು ಉದಯಿಸಬೇಕೆಂದು ಸೂರ್ಯ ದೇವರಿಗೆ ಆದೇಶ ಕೊಟ್ಟಿದ್ದೆ, ಇದೇ ಕಾರಣಕ್ಕೆ ಇಂದು ಸೂರ್ಯೋದಯ ಲೇಟ್ ಆಗಿರುವುದು" ಎಂದು ಬಿಡದಿ ಪೀಠದ ನಿತ್ಯಾನಂದ ಸ್ವಾಮೀಜಿಯ ಪ್ರವಚನದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಏಪ್ರಿಲ್ 1ರಂದು ಅವರ ನಿಧನ ಹೊಂದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.












Click it and Unblock the Notifications