ದೆಹಲಿ ಬಿಜೆಪಿಯ ಹೊಸ ಪದಾಧಿಕಾರಿಗಳ ತಂಡದಲ್ಲಿ ಸುಷ್ಮಾ ಸ್ವರಾಜ್ ಪುತ್ರಿ
ದೆಹಲಿ ಭಾರತೀಯ ಜನತಾ ಪಕ್ಷದ ಹೊಸ ಪದಾಧಿಕಾರಿಗಳ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ಪಕ್ಷದ ದಿಗ್ಗಜರಾದ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಯುವ ಮುಖಗಳು ಬಿಜೆಪಿಯ ಹೊಸ ಪದಾಧಿಕಾರಿಯಾಗಿದ್ದಾರೆ.
ಇವರೊಂದಿಗೆ ಹರ್ಷ್ ಮಲ್ಹೋತ್ರಾ, ಯೋಗೇಂದ್ರ ಚಂದೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಘೋಷಿಸಿರುವ ತಂಡದಲ್ಲಿ ಹಲವು ಮಹಿಳಾ ಪದಾಧಿಕಾರಿಗಳೂ ಇದ್ದಾರೆ.

ಎಂಟು ಕಾರ್ಯದರ್ಶಿಗಳಲ್ಲಿ ಬಾನ್ಸುರಿ ಸ್ವರಾಜ್, ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಮತ್ತು ಇಂಪ್ರಿತ್ ಸಿಂಗ್ ಬಕ್ಷಿ ಇದ್ದಾರೆ. ಸ್ವರಾಜ್ ಅವರು ಇತ್ತೀಚೆಗೆ ದೆಹಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಳ್ಳುವುದರೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.
ಮಾಜಿ ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಆಗಸ್ಟ್ 2019 ರಲ್ಲಿ ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾದರು. ಸದ್ಯ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸದಾಗಿ ನೇಮಕಗೊಂಡ ಎಂಟು ಉಪಾಧ್ಯಕ್ಷರಲ್ಲಿ ವಿಷ್ಣು ಮಿತ್ತಲ್, ದಿನೇಶ್ ಪ್ರತಾಪ್ ಸಿಂಗ್, ಮಾಜಿ ಮೇಯರ್ ಲತಾ ಗುಪ್ತಾ ಮತ್ತು ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಸಿಂಗ್ ಸೇರಿದ್ದಾರೆ.
ಸತೀಶ್ ಗಾರ್ಗ್ ಅವರನ್ನು ಪಕ್ಷದ ನೂತನ ಖಜಾಂಚಿಯನ್ನಾಗಿ ಮಾಡಲಾಗಿದೆ. ಲಕ್ಷ್ಮಿನಗರ ಶಾಸಕ ಅಭಯ್ ವರ್ಮಾ ದೆಹಲಿ ಬಿಜೆಪಿಯ ಮುಖ್ಯ ವಕ್ತಾರ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ. ಮಾಧ್ಯಮ ವಿಭಾಗದ ಮುಖ್ಯಸ್ಥರ ಪ್ರಮುಖ ಹುದ್ದೆಯನ್ನು ಪ್ರವೀಣ್ ಶಂಕರ್ ಕಪೂರ್ ಅವರಿಗೆ ನೀಡಲಾಯಿತು.
ವಿಕ್ರಮ್ ಮಿತ್ತಲ್ ಮಾಧ್ಯಮ ಸಂಬಂಧಗಳನ್ನು ನಿರ್ವಹಿಸಲಿದ್ದಾರೆ. ದೆಹಲಿ ಬಿಜೆಪಿಯ ಹೊಸದಾಗಿ ನೇಮಕಗೊಂಡ 11 ವಕ್ತಾರರಲ್ಲಿ ಶಿಖಾ ರೈ, ವೀರೇಂದ್ರ ಬಬ್ಬರ್, ವಿಕ್ರಮ್ ಬಿಧುರಿ, ಶುಭೇಂದು ಶೇಖರ್ ಅವಸ್ತಿ, ಅಜಯ್ ಸೆಹ್ರಾವತ್ ಮತ್ತು ಪ್ರೀತಿ ಅಗರ್ವಾಲ್ ಸೇರಿದ್ದಾರೆ.
ದೆಹಲಿ ಬಿಜೆಪಿಯ ಮಹಿಳಾ ಮೋರ್ಚಾದ ಮುಖ್ಯಸ್ಥೆ ರಿಚಾ ಪಾಂಡೆ ಮಿಶ್ರಾ. ಪಕ್ಷದ ಯುವ ನಾಯಕ ನಿಖತ್ ಅಬ್ಬಾಸ್ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಮಾಜಿ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೊಸ ತಂಡವನ್ನು "ಯುವ ಮತ್ತು ಶಕ್ತಿಯುತ' ನಾಯಕರ ಮಿಶ್ರಣ ಎಂದು ನಾಮಕರಣ ಮಾಡಿದರು. ದೆಹಲಿ ಬಿಜೆಪಿಯ ಹಿಂದಿನ ತಂಡದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ನೀರಜ್ ತಿವಾರಿ ಅವರಿಗೆ ಪೂರ್ವಾಂಚಲ್ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಶಶಿ ಯಾದವ್ ಅವರನ್ನು ದೆಹಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಯುವ ಮೋರ್ಚಾದ ಮಾಜಿ ಅಧ್ಯಕ್ಷ ಸುನಿಲ್ ಯಾದವ್ ಒಬಿಸಿ ಮೋರ್ಚಾದ ನೂತನ ಅಧ್ಯಕ್ಷರಾಗಲಿದ್ದಾರೆ ಮತ್ತು ಮೋಹನ್ ಲಾಲ್ ಗಿಹಾರಾ ಅವರು ಎಸ್‌ಸಿ ಮೋರ್ಚಾದ ಮುಖ್ಯಸ್ಥರಾಗಿರುತ್ತಾರೆ ಎಂದು ದೆಹಲಿ ಬಿಜೆಪಿ ಬಿಡುಗಡೆ ಮಾಡಿದ ಪದಾಧಿಕಾರಿಗಳ ಪಟ್ಟಿ ತಿಳಿಸಿದೆ.
ವಿಜೇಂದರ್ ಧಾಮ (ಮಯೂರ್ ವಿಹಾರ್), ಮನೋಜ್ ತ್ಯಾಗಿ (ನವೀನ್ ಶಾಹದಾರ), ಪೂನಂ ಚೌಹಾಣ್ (ಈಶಾನ್ಯ ದೆಹಲಿ), ರಾಜ್ ಕುಮಾರ್ ಗ್ರೋವರ್ (ಪಶ್ಚಿಮ ದೆಹಲಿ) ಮತ್ತು ರಾಜ್ ಕುಮಾರ್ ಚೌತಾಲಾ (ದಕ್ಷಿಣ ದೆಹಲಿ) ಸೇರಿದಂತೆ 14 ಜಿಲ್ಲಾ ಘಟಕಗಳ ಹೊಸ ಅಧ್ಯಕ್ಷರ ಹೆಸರನ್ನು ದೆಹಲಿ ಬಿಜೆಪಿ ಅಧ್ಯಕ್ಷರು ಘೋಷಿಸಿದ್ದಾರೆ.












Click it and Unblock the Notifications