ಜಲ್ಲಿಕಟ್ಟು ಪ್ರಶ್ನಿಸಿ ಅರ್ಜಿಗಳ ಸಲ್ಲಿಕೆ: ಇಂದು ಹೊರಬೀಳಲಿದೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು
ನವದೆಹಲಿ, ಮೇ, 18: ಜಲ್ಲಿಕಟ್ಟು ಕ್ರೀಡೆಯು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಕ್ರೀಡೆಯಲ್ಲಿ ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದ್ದರಿಂದ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ (ಮೇ 18) ತನ್ನ ತೀರ್ಪನ್ನು ಹೊರಹಾಕಲಿದೆ.
ಪ್ರಾಣಿ ಹಕ್ಕುಗಳ ಸಂರಕ್ಷಣ ಸಂಸ್ಥೆ ಪೆಟಾ ಜಲ್ಲಿಕಟ್ಟು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ ಜಲ್ಲಿಕಟ್ಟು ಕೇವಲ ಸಾಂಪ್ರದಾಯಿಕ ಆಚರಣೆ ಆಗಿದೆ. ಇದರಲ್ಲಿ ಪ್ರಾಣಿಗಳನ್ನು ಹಿಂಸಿಸುವ ಯಾವುದೇ ಉದ್ದೇಶ ಇಲ್ಲ. ಪೆರು, ಕೊಲಂಬಿಯಾ, ಸ್ಪೇನ್ ಸಹಿತ ಹಲವು ರಾಷ್ಟ್ರಗಳಲ್ಲೂ ಇಂತಹ ಆಚರಣೆಗಳಿವೆ ಎಂದು ತಮಿಳುನಾಡು ಸರ್ಕಾರದ ವಾದವಾಗಿದೆ.

ಜಲ್ಲಿಕಟ್ಟು ಕ್ರೀಡೆಯನ್ನು ಎರುತಝುವುತಲ್ ಅಂತಲೂ ಕರೆಯುತ್ತಾರೆ. ಇದು ಪೊಂಗಲ್ ಸುಗ್ಗಿಯ ಹಬ್ಬದ ಭಾಗವಾಗಿ ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ಕ್ರೀಡೆ ಆಗಿದೆ. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಕಾರಣ ಪಟ್ಟಿಯ ಪ್ರಕಾರ, ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ಒಂದೇ ತೀರ್ಪು ಪ್ರಕಟಿಸಲಿದ್ದಾರೆ. ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ಕ್ರೀಡೆಗೆ ಅನುಮತಿ ನೀಡಿದ ರಾಜ್ಯ ಕಾನೂನನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು.
2017ರಲ್ಲಿ ಪ್ರಾಣಿಗಳ ಮೇಲಿನ ಹಿಂಸೆ ತಡೆಯುವಂತೆ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದ ಕಾರಣ ದೊಡ್ಡ ಪೀಠದಿಂದ ಈ ವಿಚಾರವನ್ನು ತೀರ್ಮಾನಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು. ಅಲ್ಲದೆ ದೊಡ್ಡ ಪೀಠದಿಂದ ನಿರ್ಣಯಿಸಬೇಕಾದ ಐದು ಪ್ರಶ್ನೆಗಳನ್ನು ರೂಪಿಸಿತ್ತು.
ಜಲ್ಲಿಕಟ್ಟು ಕ್ರೌರ್ಯದ ಹೊರತಾಗಿಯೂ, ಯಾರೂ ಯಾವುದೇ ಆಯುಧವನ್ನು ಬಳಸುವುದಿಲ್ಲ. ಮತ್ತು ರಕ್ತವು ಕೇವಲ ಪ್ರಾಸಂಗಿಕ ವಿಷಯವಾಗಿರುವುದರಿಂದ ಇದನ್ನು ರಕ್ತದ ಕ್ರೀಡೆ ಎಂದು ಕರೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತ್ತೊಂದೆಡೆ 2014ರ ತನ್ನ ತೀರ್ಪಿನಲ್ಲಿ, ಜಲ್ಲಿಕಟ್ಟು ಕಾರ್ಯಕ್ರಮಗಳು ಅಥವಾ ಎತ್ತಿನ-ಗಾಡಿ ಓಟದ ಪ್ರದರ್ಶನಕ್ಕಾಗಿ ಎತ್ತುಗಳನ್ನು ಬಳಸಲಾಗುವುದಿಲ್ಲ ಎಂದು ಹೇಳಿದೆ. ಮತ್ತು ದೇಶಾದ್ಯಂತ ಈ ಉದ್ದೇಶಗಳಿಗಾಗಿ ಎತ್ತುಗಳ ಬಳಕೆಯನ್ನು ನಿಷೇಧಿಸಿದೆ.












Click it and Unblock the Notifications