ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಪತ್ನಿ ವಿರುದ್ಧದ ಲುಕ್ ಔಟ್ ಸುತ್ತೋಲೆ ಹಿಂಪಡೆಯಲು ಸುಪ್ರೀಂ ಆದೇಶ
ನವದೆಹಲಿ, ಜುಲೈ. 28: ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
ದಂಪತಿ ವಿರುದ್ಧ ಎಲ್‌ಒಸಿ ನೀಡಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕಳೆದ ವಿಚಾರಣೆಯಲ್ಲಿ, "ಒಂದು ವೇಳೆ ಅವರ ವಿದೇಶ ಪ್ರಯಾಣಕ್ಕೆ ಹೋಗಲು ಒಂದು ವಾರ ಮುಂಚಿತವಾಗಿ ತನಿಖಾ ಸಂಸ್ಥೆಗೆ ಮಾಹಿತಿ ನೀಡುತ್ತಾರೆ ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ತಿಳಿಸಿತ್ತು.

ಈ ಹಿಂದೆ ನ್ಯಾಯಾಲಯದ ಅನುಮತಿ ಪಡೆದು ವಿದೇಶಕ್ಕೆ ಪ್ರಯಾಣ ಬೆಳೆಸಿರುವ ದಂಪತಿ ವಿರುದ್ಧ ಎಲ್‌ಒಸಿ (ಲುಕ್ ಔಟ್ ಸುತ್ತೋಲೆ) ಜಾರಿ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಜುಲೈ 24ರಂದು ಸುಪ್ರೀಂ ಕೋರ್ಟ್ ಇಡಿಗೆ ಸೂಚಿಸಿತ್ತು.
ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ಇಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು, ಅಭಿಷೇಕ್ ಬ್ಯಾನರ್ಜಿಗೆ ಸಂಬಂಧಿಸಿದಂತೆ, ಇಡಿ ಈಗಾಗಲೇ ಎಲ್‌ಒಸಿಯನ್ನು ಸಡಿಲಗೊಳಿಸಿದೆ ಮತ್ತು ಜುಲೈ 26 ರಿಂದ ಆಗಸ್ಟ್ 20 ರವರೆಗೆ ಪ್ರಯಾಣಿಸಲು ಅವಕಾಶ ನೀಡಿದೆ ಎಂದು ಹೇಳಿದ್ದಾರೆ. ಜೊತೆಗೆ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಅವರಿಗೂ ವಿದೇಶ ಪ್ರವಾಸಕ್ಕೆ ಹಲವು ಬಾರಿ ಅನುಮತಿ ನೀಡಲಾಗಿದೆ ಎಂದಿದ್ದಾರೆ.
"ಸಮಸ್ಯೆಯೆಂದರೆ ಯಾರಾದರೂ ವಿದೇಶಕ್ಕೆ ಹೋದಾಗ, ನಾವು ಎಲ್‌ಒಸಿ ನೀಡಿಲ್ಲ, ನಾವು ಅನುಮತಿ ನೀಡಿದ್ದೇವೆ ಎಂದು ನೀವು ಹೇಳುತ್ತೀರಿ" ಎಂದು ನ್ಯಾಯಮೂರ್ತಿ ಕೌಲ್ ಉಲ್ಲೇಖಿಸಿದ್ದಾರೆ. "ಎಲ್‌ಒಸಿ ಇದೆ. ನೀವು ಎಲ್‌ಒಸಿಯನ್ನು ವಾಪಸ್ ಪಡೆಯಿರಿ, ಅಷ್ಟೆ. ಅವರು ಹೋಗಬೇಕಾದಾಗ ಅವರು ಅನುಮತಿ ಪಡೆಯುತ್ತಾರೆ. ನಿಮಗೆ ಮುಂಚಿತವಾಗಿ ತಿಳಿಸುತ್ತಾರೆ" ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜುಗೆ ತಿಳಿಸಿದೆ.

ಆಪಾದಿತ ಕಲ್ಲಿದ್ದಲು ಕಳ್ಳಸಾಗಣೆ ಹಗರಣದಲ್ಲಿ ದಂಪತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ಎಎಸ್‌ಜಿ ವಾದಿಸಿದ್ದಾರೆ. "ಎಎಸ್‌ಜಿ, ಸಾಮಾನ್ಯ ನ್ಯಾಯಸಮ್ಮತವಾಗಿ, ಅರ್ಜಿದಾರರು ವಿದೇಶಕ್ಕೆ ಪ್ರಯಾಣಿಸುವ ಮೊದಲು ಒಂದು ವಾರ ಮುಂಚಿತವಾಗಿ ತಿಳಿಸಿದರೆ, ಅಗತ್ಯ ಆದೇಶಗಳನ್ನು ನೀಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿ, ಎಲ್‌ಒಸಿ ಹಿಂತೆಗೆದುಕೊಳ್ಳಲಾಗುತ್ತದೆ" ಎಂದು ಪೀಠವು ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹೇಳಿದೆ.
ಇಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವೈದ್ಯಕೀಯ ಕಾರಣಗಳಿಗಾಗಿ ಟಿಎಂಸಿ ಸಂಸದರು ಜುಲೈ 26ರಂದು ವಿದೇಶಕ್ಕೆ ತೆರಳಿದ್ದಾರೆ ಎಂದು ವಾದಿಸಿದ್ದರು. ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ಈ ಹಿಂದೆ ವಿದೇಶ ಪ್ರವಾಸ ಕೈಗೊಂಡಿದ್ದರು ಮತ್ತು ಅವರ ವಿರುದ್ಧ ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗದಂತೆ ಹಿಂದಿರುಗಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿಕೆ ನೀಡಿದ್ದರು.
ಕನಿಷ್ಠ 24 ಗಂಟೆಗಳ ಮುಂಗಡ ನೋಟಿಸ್ ನೀಡಿದ ನಂತರ ಕೋಲ್ಕತ್ತಾ ಕಚೇರಿಯಲ್ಲಿ ಆಪಾದಿತ ಹಗರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ವಿಚಾರಣೆಗೆ ಒಳಪಡಿಸಲು ಇಡಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು. ಜೂನ್ 5 ರಂದು ಯುಎಇಗೆ ಹೋಗುವ ವಿಮಾನವನ್ನು ಹತ್ತದಂತೆ ರುಜಿರಾ ಅವರನ್ನು ತಡೆಯಲಾಗಿತ್ತು. ಇದಾದ ಬಳಿಕ ಇಡಿ ಹೊರಡಿಸಿದ ಲುಕ್‌ಔಟ್ ನೋಟೀಸ್ ಅನ್ನು ಉಲ್ಲೇಖಿಸಿ ಆಕೆಯನ್ನು ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು.
ರಾಜ್ಯದ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಗಣಿಗಳಲ್ಲಿ ಬಹುಕೋಟಿ ರೂಪಾಯಿ ಕಲ್ಲಿದ್ದಲು ಕಳ್ಳತನದ ಹಗರಣವನ್ನು ಆರೋಪಿಸಿ ಸಿಬಿಐ ದಾಖಲಿಸಿದ ನವೆಂಬರ್ 2020 ರ ಎಫ್‌ಐಆರ್ ಆಧರಿಸಿ 2002 ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇಡಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದೆ. ಆಪಾದಿತ ಹಗರಣವು ಕಲ್ಲಿದ್ದಲಿನ ಅಕ್ರಮ ಗಣಿಗಾರಿಕೆ ಮತ್ತು ಅದರ ಸಾಗಣೆಯನ್ನು ಒಳಗೊಂಡಿದೆ. ಸ್ಥಳೀಯ ಕಲ್ಲಿದ್ದಲು ಕಳ್ಳಸಾಗಣೆ ಜಾಲದ ನಾಯಕ ಅನುಪ್ ಮಾಝಿ ಅಲಿಯಾಸ್ ಲಾಲಾ ಪ್ರಕರಣದ ಪ್ರಮುಖ ಶಂಕಿತ ಎಂದು ಹೇಳಲಾಗಿದೆ.












Click it and Unblock the Notifications