Manipur Violence: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ- ಪೊಲೀಸರ ನಡೆಗಳ ಬಗ್ಗೆ ಕಟು ಪ್ರಶ್ನೆ
ನವದೆಹಲಿ, ಜುಲೈ 31: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಯುವಕರ ಗುಂಪೊಂದು ಇಬ್ಬರು ಕುಕಿ ಸಮುದಾಯದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ನಂತರ ಅತ್ಯಾಚಾರ ಎಸಗಿದೆ. ಈ ಘಟನೆಯು ಭಯಾನಕ ಮತ್ತು ಅಮಾನವೀಯವೆಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ.
ಮಣಿಪುರದ ಪೊಲೀಸರೇ ಮುಂದೆ ನಿಂತು ಕುಕಿ ಮಹಿಳೆಯರನ್ನು ಗಲಭೆಕೋರರಿಗೆ ನೀಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ರಾಜ್ಯ ಪೊಲೀಸರ ವಿರುದ್ಧವೂ ತನಿಖೆ ಮಾಡುವ ಅನಿವಾರ್ಯ ಇದೆ ಎಂದು ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.

ಈ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ಮೇ 4 ರಂದು ಬೆಳಕಿಗೆ ಬಂದಿದೆ. ಮಣಿಪುರ ಪೊಲೀಸರು ಮೇ 18 ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೆ 14 ದಿನಗಳನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
'ಮೇ 4 ರಂದು ತಕ್ಷಣವೇ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಏನು ಅಡ್ಡಿಯಾಗಿತ್ತು?' ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.

ಎಫ್‌ಐಆರ್ ಅನ್ನು ತಕ್ಷಣವೇ ದಾಖಲಿಸದಿರುವುದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದುವರೆಗೆ ದಾಖಲಿಸಲಾಗಿರುವ ಎಫ್‌ಐಆರ್‌ಗಳ ಸಂಖ್ಯೆ ಮತ್ತು ಮಾಡಿರುವ ಬಂಧನಗಳ ಬಗ್ಗೆ ವಿವರಗಳನ್ನು ನೀಡುವಂತೆ ಪೀಠವು ರಾಜ್ಯ ಸರ್ಕಾರವನ್ನು ಕೇಳಿದೆ.
ಅಪರಾಧವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದಿದೆಯೇ ಎಂಬುದನ್ನು ಲೆಕ್ಕಿಸದೆ ಎಫ್‌ಐಆರ್ ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಂತ್ರಸ್ತರಿಗೆ ರಾಜ್ಯದಲ್ಲಿ ಒದಗಿಸಲಾದ ಪುನರ್ವಸತಿ ಪ್ಯಾಕೇಜ್ ಬಗ್ಗೆಯೂ ಸಹ ನಮಗೆ ತಿಳಿಸಿ ಎಂದು ಆಜ್ಞೆ ಮಾಡಿದೆ.

ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು ಆಲಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಇಂತಹ ಘಟನೆಗಳನ್ನು ತಡೆಯಲು ಶಿಸ್ತುಬದ್ಧ ಕಾರ್ಯವಿಧಾನದ ಅಗತ್ಯವಿದೆ ಎಂದು ತಿಳಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣವು ವ್ಯವಸ್ಥಿತ ಹಿಂಸೆಯ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪೊಲೀಸರೇ ಮಹಿಳೆಯರನ್ನು ಯುವಕರಿಗೆ ಒಪ್ಪಿಸಿದ್ದಾರೆಂದು ಎಂದು ಸಂತ್ರಸ್ತರ ಹೇಳಿಕೊಂಡಿದ್ದಾರೆ. ಇದು ನಿರ್ಭಯಾ ಪ್ರಕರಣದಂತ ಸನ್ನಿವೇಶವಲ್ಲ. ಇದನ್ನು ಪ್ರತ್ಯೇಕವಾಗಿ ನಡೆದಿರುವ ಘಟನೆ ಎಂದು ಹೇಳಲಾಗುವುದಿಲ್ಲ. ಇದು ವ್ಯವಸ್ಥಿತ ಹಿಂಸೆಯ ಭಾಗವಾಗಿದೆ ಎಂದು ಸಿಜೆಐ ಚಂದ್ರಚೂಡ್ ಅವರು ಹೇಳಿದ್ದಾರೆ.
ನಿರ್ಭಯಾ ಪ್ರಕರಣ ಕೂಡ ಭಯಾನಕವಾಗಿತ್ತು. ಆದರೆ, ಅದು ಪ್ರತ್ಯೇಕವಾಗಿತ್ತು. ಇದು ಪ್ರತ್ಯೇಕ ನಿದರ್ಶನವಲ್ಲ. ಇಲ್ಲಿ ನಾವು ವ್ಯವಸ್ಥಿತ ಹಿಂಸಾಚಾರವನ್ನು ಎದುರಿಸುತ್ತಿದ್ದೇವೆ. ಇದನ್ನು ಐಪಿಸಿ ವಿಶೇಷ ಅಪರಾಧವೆಂದು ಗುರುತಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮೇ 4 ರಂದು ಮಣಿಪುರ ಹಿಂಸಾಚಾರ ಭುಗಿಲೆದ್ದಿದ್ದು, ಈ ವರೆಗೆ 160 ಕ್ಕೂ ಅಧಿಕ ಜನರು ಹತ್ಯೆಗೀಡಾಗಿದ್ದಾರೆ.












Click it and Unblock the Notifications