ಕಿರುಕುಳ ಪ್ರಕರಣ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್‌ಗೆ ಬಂಧನದಿಂದ ಜಾಮೀನು
ನವದೆಹಲಿ, ಮೇ. 17: ಯುವ ಕಾಂಗ್ರೆಸ್ ಮುಖ್ಯಸ್ಥ ಬಿ ವಿ ಶ್ರೀನಿವಾಸ್ ವಿರುದ್ಧ ಅಸ್ಸಾಂನಲ್ಲಿ ದಾಖಲಾದ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ್ ಅವರನ್ನು ಬಂಧನದಿಂದ ರಕ್ಷಿಣೆ ನೀಡಿರುವ ಸುಪ್ರೀಂ ಕೋರ್ಟ್, 50,000 ರೂ.ಗೆ ಜಾಮೀನು ನೀಡುವಂತೆ ಸೂಚಿಸಿದೆ.
ಈ ಬಗ್ಗೆ ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಇದರ ಜೊತೆಗೆ ನ್ಯಾಯಾಲಯವು ಅಸ್ಸಾಂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ ವಿ ಶ್ರೀನಿವಾಸ್‌ಗೆ ಸೂಚಿಸಿದೆ. ಶ್ರೀನಿವಾಸ್ ವಿರುದ್ಧ ಗುವಾಹಟಿಯಲ್ಲಿ ಏಪ್ರಿಲ್‌ನಲ್ಲಿ ಅಸ್ಸಾಂ ಯೂತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಅಂಕಿತಾ ದತ್ತಾ ದೂರು ಸಲ್ಲಿಸಿದ್ದರು.

ಅಂಕಿತಾ ದತ್ತಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ತಮ್ಮ ದೂರಿನಲ್ಲಿ ಶ್ರೀನಿವಾಸ್ ಕಳೆದ ಆರು ತಿಂಗಳಿಂದ ತನಗೆ "ಕಿರುಕುಳ" ಮತ್ತು "ತಾರತಮ್ಯ" ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಏಪ್ರಿಲ್ 18 ರಂದು ಸರಣಿ ಟ್ವೀಟ್‌ಗಳಲ್ಲಿ, ಸಂತ್ರಸ್ತೆ ಅಂಕಿತಾ ದತ್ತಾ, ಶ್ರೀನಿವಾಸ್ ಅವರನ್ನು "ಸೆಕ್ಸಿಸ್ಟ್" ಮತ್ತು "ಕೋವಿನಿಸ್ಟ್" ಎಂದು ಉಲ್ಲೇಖಿಸಿದ್ದಾರೆ.
ಶ್ರೀನಿವಾಸ್ ಅವರು ನಿರಂತರವಾಗಿ ತನಗೆ ಕಿರುಕುಳ ನೀಡುತ್ತಿದ್ದರು. ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಗಿತಾ ದತ್ತಾ ಅವರು ಪೊಲೀಸ್ ದೂರು ನೀಡಿದ್ದರು. ಅಲ್ಲದೆ ಶ್ರೀನಿವಾಸ್ ವರ್ತನೆ ಬಗ್ಗೆ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಗಿತಾ ದತ್ತಾ ಆರೋಪ ಮಾಡಿದ್ದರು.
ಕೆಲವು ದಿನಗಳ ನಂತರ, ಅಂಕಿತಾ ದತ್ತಾ ಅವರನ್ನು "ಪಕ್ಷ ವಿರೋಧಿ ಚಟುವಟಿಕೆ" ಎಂದು ಆರೋಪಿಸಿ ಪಕ್ಷದಿಂದ ಅವರನ್ನು ಆರು ವರ್ಷಗಳ ಅವಧಿಗೆ ಹೊರಹಾಕಲಾಯಿತು. ಇತ್ತ, ಶ್ರೀನಿವಾಸ್ ಅವರು ಆರೋಪಗಳನ್ನು ರಾಜಕೀಯ ಪ್ರೇರಿತ ಮತ್ತು ಸುಳ್ಳು ಎಂದು ಕರೆದಿದ್ದು, ಅಂಕಿತಾ ದತ್ತಾ ಅವರಿಗೆ ಕಾನೂನು ನೋಟಿಸ್ ನೀಡಿದ್ದಾರೆ.
ಶ್ರೀನಿವಾಸ್ ಕಳುಹಿಸಿರುವ ನೋಟಿಸ್‌ನಲ್ಲಿ, ಶಾರದಾ ಚಿಟ್ ಫಂಡ್ ಹಗರಣ ಮತ್ತು ಇಡಿ/ಪಿಎಂಎಲ್‌ಎ ಪ್ರಕರಣಗಳಲ್ಲಿ ಅಂಕಿತಾ ದತ್ತಾ ಅವರ ಹೆಸರು ಬಂದಿದೆ ಮತ್ತು ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕಾಂಗ್ರೆಸ್ ತೊರೆಯುವ ವಾತಾವರಣವನ್ನು ಸೃಷ್ಟಿಸಲು ಅವರು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications