Tamil Nadu: ತಮಿಳುನಾಡು ರಾಜಕೀಯದಲ್ಲಿ "ಸೂರ್ಯೋದಯ": ಮತ್ತೆ ಅಪ್ಪ ಸಿ.ಎಂ, ಪುತ್ರ ಡಿಸಿಎಂ
ತಮಿಳುನಾಡು ರಾಜಕೀಯದಲ್ಲಿ ಹೊಸ ಹಾಗೂ ಮಹತ್ವದ ಬದಲಾವಣೆ ಆಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಹಾಗೂ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಡಿಎಂಕೆಯ (ದ್ರಾವಿಡ್ ಮುನ್ನೇತ್ರ ಕಳಗಂ) ಉತ್ತಾರಧಿಕಾರಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಇದೀಗ ಅಪ್ಪ ಮುಖ್ಯಮಂತ್ರಿ ಹಾಗೂ ಮಗ ಅದೇ ಸರ್ಕಾರದ ಉಪ ಮುಖ್ಯಮಂತ್ರಿಯಾಗಿರುವ ಅಪರೂಪದ ರಾಜಕೀಯಕ್ಕೆ ತಮಿಳುನಾಡು ಸಾಕ್ಷಿಯಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಮಿಳುನಾಡು ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ತಮಿಳುನಾಡು ಸರ್ಕಾರದ ಸಚಿವ ಸಂಪುಟ ಪುನರ್‌ರಚನೆಯಾಗುತ್ತಿದ್ದು, ಹೊಸ ಸಚಿವ ಸಂಪುಟ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಮಾಣ ವಚನ ಸಮಾರಂಭವು ತಮಿಳುನಾಡಿನ ಚೆನ್ನೈ ರಾಜಭವನದಲ್ಲಿ ಸೆಪ್ಟೆಂಬರ್ 29ರ (ಭಾನುವಾರ) ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ನೂತನ ಸಚಿವ ಸಂಪುಟ ಸಭೆಯಲ್ಲಿ 6 ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸಲಾಗಿದೆ.
ಹಿಂದೆಯೂ ಆಗಿತ್ತು: ಅಪ್ಪ ಮುಖ್ಯಮಂತ್ರಿ ಹಾಗೂ ಪುತ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದು ತಮಿಳುನಾಡು ರಾಜಕೀಯದಲ್ಲಿ ಇದೇ ಮೊದಲೇನು ಅಲ್ಲ. ಈ ಹಿಂದೆ ಅಂದರೆ, 2009ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಂ. ಕರುಣಾನಿಧಿ ಇದ್ದರು; ಆಗ ಅವರ ಪುತ್ರ ಎಂ.ಕೆ ಸ್ಟಾಲಿನ್ ಅವರು ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿದ್ದರು.

ತಮಿಳುನಾಡಿನ ಮೊದಲ ಉಪ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟಾಲಿನ್ ಅಧಿಕಾರ ಸ್ವೀಕರಿಸಿದ್ದರು. ಇದೀಗ ಎಂ.ಕೆ ಸ್ಟಾಲಿನ್ ಸರ್ಕಾರದಲ್ಲಿ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಉದಯನಿಧಿ ಸ್ಟಾಲಿನ್ ರಾಜಕೀಯ ಹಿನ್ನೆಲೆ ಏನು
ಉದಯನಿಧಿ ಸ್ಟಾಲಿನ್ ಅವರು, ಅವರ ತಂದೆ ಹಾಗೂ ತಾತನವರ ರಾಜಕೀಯ ಅಖಾಡದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಚೆನ್ನೈ ಚೆಪಾಕ್ಕಂ - ತಿರುವಲ್ಲಿಕೇಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದೇ ಡಿಎಂಕೆ ಪಕ್ಷ ಹೇಳಿತ್ತು.
ಅದರಂತೆ ಮೊದಲ ಸಚಿವ ಸಂಪುಟ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಕಳೆದ ವರ್ಷವಷ್ಟೇ ಅವರನ್ನು ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿತ್ತು. ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ ಬೆನ್ನಲ್ಲೇ ಅವರಿಗೆ ಇದೀಗ ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ.
ಮೂರು ತಲೆಮಾರಿನ ರಾಜಕೀಯ: ಉದಯನಿಧಿ ಸ್ಟಾಲಿನ್ ಅವರು ಸಕ್ರಿಯ ರಾಜಕೀಯಕ್ಕೆ ಬರುವುದರೊಂದಿಗೆ ಅವರ ಕುಟುಂಬದ ಮೂರು ತಲೆಮಾರು ರಾಜಕೀಯಕ್ಕೆ ಬಂದಂತಾಗಿದೆ. ಎಂ. ಕರುಣಾನಿಧಿ (ಮುತ್ತುವೇಲ್ ಕರುಣಾನಿಧಿ) ಅವರು ಐದು ಬಾರಿತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
ಇದೀಗ ಕರುಣಾನಿಧಿ ಅವರ ಮಗ ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು, ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಿ.ಎನ್ ಅಣ್ಣಾದೊರೈ ಅವರು ಡಿಎಂಕೆ ಪಕ್ಷವನ್ನು ಸ್ಥಾಪಿಸಿದ್ದರು.












Click it and Unblock the Notifications