Earthquake: ಬೆಳ್ಳಂಬೆಳಗ್ಗೆಯೇ ನವದೆಹಲಿಯಲ್ಲಿ ಗಢಗಢ ನಡುಗಿದ ಭೂಮಿ: ಭೂಕಂಪನಕ್ಕೆ ದಂಗಾದ ಜನ
Earthquake: ನವದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಇಂದು (ಫೆಬ್ರವರಿ 17) ಬೆಳ್ಳಂಬೆಳಗ್ಗೆಯೇ ಪ್ರಬಲ ಭಕಂಪ ಸಂಭಿಸಿದೆ. ಪರಿಣಾಮ ಇಲ್ಲಿನ ಜನರು ಭಯಭೀತರಾಗಿದ್ದಾರೆ. ಹಾಗಾದರೆ ಎಷ್ಟು ಗಂಟೆಗೆ ಸಂಭವಿಸಿದೆ ಹಾಗೂ ಏನೆಲ್ಲಾ ಹಾನಿ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನವದೆಹಲಿಯಲ್ಲಿ ಬೆಳಗ್ಗೆ 5:36ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಆದರೆ, ಯಾವುದೇ ಹಾನಿಯಾದ ಬಗ್ಗೆ ವರದಿ ಆಗಿಲ್ಲ. 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಅಲ್ಲದೆ, ಇಂದು ಬೆಳ್ಳಂಬೆಳ್ಳಗ್ಗೆಯೇ ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವ ಆಗಿದೆ. ಭೂಕಂಪನದ ಕೇಂದ್ರಬಿಂದು ದೌಲಾ ಕುವಾನ್‌ನಲ್ಲಿರುವ ದುರ್ಗಾಬಾಯಿ ದೇಶಮುಖ್ ಮಹಾವಿದ್ಯಾಲಯದ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಂಪದಿಂದ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ಬಹುಮಹಡಿ ಕಟ್ಟಡಗಳ ನಿವಾಸಿಗಳು ಆತಂಕದಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದು, ರೈಲು ಅಪಘಾತಕ್ಕೀಡಾಗಿದಂತೆ ಅಥವಾ ಸೇತುವೆ ಕುಸಿದಂತೆ ಅನುಭವವಾಯಿತು. ಹಲವು ಪ್ರಯಾಣಿಕರು ನಿಲ್ದಾಣದಲ್ಲಿರುವ ರೂಮ್ ಒಂದರಲ್ಲಿದ್ದರು. ಈ ವೇಳೆ ಎಲ್ಲರೂ ಅಲ್ಲಿಂದ ದಿಢೀರ್ ಹೊರಗಡೆ ಓಡಿ ಬಂದರು. ಇನ್ನು ನವದೆಹಲಿ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಸಿಬ್ಬಂದಿ ಮಾತನಾಡಿ, ಪಾವತಿ ಕೌಂಟರ್ ಅಲುಗಾಡಲು ಆರಾರಂಭಿಸಿತು. ಈ ವೇಳೆ ಅಲ್ಲಿದ್ದ ಪ್ರಯಾಣಿಕರೆಲ್ಲ ಕಿರುಚಾಡಲು ಶುರು ಮಾಡಿದರು ಎಂದು ಹೇಳಿದರು.
ನವದೆಹಲಿಯ ದೌಲಾ ಕೌನ್ ಪ್ರದೇಶ ಆಗಾಗ ಈ ರೀತಿಯ ಭೂಕಂಪದ ಅನುಭವ ಆಗುತ್ತಲೇ ಇರುತ್ತದೆ. 2015ರಲ್ಲಿಯೂ ಸುಮಾರು 3.3 ರಿಕ್ಟರ್ ಮಾಪಕದಲ್ಲಿ ಇದೇ ಪ್ರದೇಶದಲ್ಲಿ ಭೂಕಂಪ ಆಗಿತ್ತು. ಈ ವೇಳೆಯೂ ಜನರು ಭಯಭೀತರಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಇಂದು ನಡೆದ ಭೂಕಂಪನದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?: ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ಬಳಿ ಭೂಕಂಪವಾದ ಅನುಭವ ಕಂಡುಬಂದಿದೆ. ಎಲ್ಲರೂ ಶಾಂತಿಯಿಂದ ಇರುವಂತೆ ನಾನು ಪ್ರಾರ್ಥನೆ ಮಾಡುತ್ತೇನೆ ಹಾಗೂ ಸುರಕ್ಷಿತವಾಗಿ ಮುನ್ನೆಚ್ಚರಿಕೆಯಿಂದ ಇರುವಂತೆ ವಿನಂತಿ ಮಾಡಿಕೊಳ್ಳುತ್ತೇನೆ. ಇದೀಗ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಹತ್ತಿರಂದ ಪರಿಶೀಲನೆ ಮಾಡುತ್ತಿದ್ದಾರೆ. ಆತಂಕ ಬೇಡ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಜನರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿದ್ದಾರೆ.












Click it and Unblock the Notifications