Stories of strength; 10 ದಿನದಲ್ಲಿ ಕೋವಿಡ್ ಗೆದ್ದ ವೈದ್ಯೆ!
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ವೈದ್ಯರಿಗೆ ಸೋಂಕು ತಗುಲಿದ ಹಲವು ಪ್ರಕರಣಗಳು ವರದಿಯಾಗಿವೆ. ಹಲವಾರು ಜನರು ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ ವೈದ್ಯೆ ಸೋಂಕಿನ ವಿರುದ್ಧ ಹೋರಾಡಿ ಗೆದ್ದ ವಿವರ ಇಲ್ಲಿದೆ.
ಕೋವಿಡ್ ಸೋಂಕು ತಗುಲಿದ್ದ 25 ವರ್ಷದ ವೈದ್ಯೆಯೊಬ್ಬರು 10 ದಿನದಲ್ಲಿ ಕೋವಿಡ್ ಗೆದ್ದು ಮಗುವಿನ ಜೊತೆ ಮನೆಗೆ ಮರಳಿದ್ದಾರೆ. ಮಗುವಿಗೆ ಜನ್ಮ ನೀಡಿದ ಮೂರು ದಿನಕ್ಕೆ ವೈದ್ಯೆಗೆ ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿತ್ತು.
ಪಶ್ಚಿಮ ಬಂಗಾಳದ ಡಾ. ಆರ್ಫಾ ಹೌರಾದ ಇಎಲ್‌ಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ವೈದ್ಯೆಗೆ ಕೋವಿಡ್ ಸೋಂಕು ದೃಢಪಟ್ಟಿತು. ಹೆರಿಗೆಯಾದ ಬಳಿಕ ಮಗುವಿಗೆ ಕೋವಿಡ್ ವರದಿ ನೆಗೆಟಿವ್ ಬಂದಿತ್ತು.

ಮಗುವಿಗೆ ಜನ್ಮ ನೀಡಿದ ಮೂರು ದಿನಗಳ ಬಳಿಕ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ವೆಂಟಿಲೇರ್ ಹಾಕಬೇಕಾಯಿತು. "10 ದಿನ ವೆಂಟಿಲೇಟರ್‌ನಲ್ಲಿದ್ದ ಡಾ. ಆರ್ಫಾ ಚೇತರಿಸಿಕೊಂಡರು, ಕೋವಿಡ್ ಗೆದ್ದು ಮಗುವಿನ ಜೊತೆ ಮನೆಗೆ ಹೋದರು" ಎಂದು ಆಸ್ಪತ್ರೆಯ ಸಿಸಿಸಿ ವಿಭಾಗದ ಡಾ. ಕೌಶಿಕ್ ಬಿಸ್ವಾಸ್ ಹೇಳಿದ್ದಾರೆ.
ಡಾ. ಆರ್ಫಾ 37 ವಾರಗಳ ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕು ತಗುಲಿತ್ತು. ಆಸ್ಪತ್ರೆಯ ಸಿಬ್ಬಂದಿ ಅವರು ಬೇಗ ಗುಣಮುಖಗೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದರು. ಮಗುವಿಗೆ ಜನ್ಮ ನೀಡಿದ ಮೂರು ದಿನಗಳ ಬಳಿಕ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು. ಮಗುವಿನ ಕೋವಿಡ್ ವರದಿ ನಗೆಟಿವ್ ಬಂದಿತ್ತು.
ಶ್ವಾಸಕೋಶದ ಸೋಂಕು ಉಂಟಾದ ಕಾರಣ 10 ದಿನ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆದರು. ಡಾ. ಆರ್ಫಾಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸಹ ಅವರಿಗೆ ಧೈರ್ಯವನ್ನು ತುಂಬುವ ಕೆಲಸ ಮಾಡಿದರು. ನೀವು ಚೇತರಿಸಿಕೊಳ್ಳುವುದಕ್ಕಾಗಿ ಮಗು ಕಾಯುತ್ತಿದೆ ಎಂದು ಹೇಳುತ್ತಿದ್ದರು.
ಡಾ. ಆರ್ಫಾಗೆ ಶ್ವಾಸಕೋಶದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಇದು ಬಹಳ ಅಪರೂಪದ ಪ್ರಕರಣವಾದರೂ ಅಪಾಯಕಾರಿ ಪರಿಸ್ಥಿತಿಯಾಗಿತ್ತು. ಅವರು ಗೆದ್ದು ಬರುತ್ತಾರೆ ಎಂಬ ಭರವಸೆ ನಮಗಿತ್ತು. ಕೋವಿಡ್ ಗೆದ್ದು ಮಗುವಿನ ಜೊತೆ ಮನೆಗೆ ಮರಳಿದ್ದಾರೆ ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications