Vande Bharat Express ರೈಲಿನ ಮೇಲೆ ಕಲ್ಲು ತೂರಾಟ
ನವದೆಹಲಿ, ಫೆಬ್ರವರಿ 7: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಛತ್ತೀಸ್‌ಗಢದ ದಧಾಪರಾದಲ್ಲಿ ಕೆಲವು ಕಿಡಿಗೇಡಿಗಳು ಮೇಲೆ ಕಲ್ಲು ತೂರಾಟ ನಡೆಸಿದ್ದು, ರೈಲಿನ ಗಾಜುಗಳು ಜಖಂಗೊಂಡಿವೆ.
ರೈಲು 18 ಎಂದೂ ಕರೆಯಲ್ಪಡುವ ಈ ರೈಲು ಭಾರತದ ಸೆಮಿ ಹೈಸ್ಪೀಡ್ ರೈಲಾಗಿದೆ. ವರದಿಗಳ ಪ್ರಕಾರ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಐದು ಕೋಚ್‌ಗಳ ಬರೋಬ್ಬರಿ ಒಂಬತ್ತು ಕಿಟಕಿಗಳು ಹಾನಿಗೊಳಗಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಪತ್ರಿಕಾ ವರದಿ ತಿಳಿಸಿದೆ. ಘಟನೆಯ ಬಗ್ಗೆ ಆರ್‌ಪಿಎಫ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.
ವಂದೇ ಭಾರತ್ ರೈಲಿನ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕಲ್ಲು ತೂರಾಟ ನಡೆದಿದ್ದು, ವಿವಿಧ ಮಾರ್ಗಗಳಲ್ಲಿ ಜಾನುವಾರುಗಳಿಗೆ ವಂದೇ ಭಾರತ್ ಡಿಕ್ಕಿ ಹೊಡೆದು ರಾಸುಗಳು ಸಾವನ್ನಪ್ಪಿ ರೈಲು ಕೂಡ ಹಾನಿಗೊಳಗಾಗಿತ್ತು. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ಜನವರಿ 11 ರಂದು ವಂದೇ ಭಾರತ್ ರೈಲಿಗೆ ಕಲ್ಲಿನ ತೂರಾಟ ನಡೆದಿತ್ತು.
ಜನವರಿ 3 ರಂದು, ಡಾರ್ಜಿಲಿಂಗ್‌ನ ಫನ್ಸಿಡೆವಾ ಪ್ರದೇಶದ ಬಳಿ ಎರಡು ಕೋಚ್‌ಗಳ ಮೇಲೆ ಕಲ್ಲು ತೂರಾಟ ನಡೆದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡು ಕಿಟಕಿ ಗಾಜುಗಳನ್ನು ಹಾನಿಗೊಳಿಸಲಾಗಿತ್ತು. ಇದಕ್ಕೂ ಮೊದಲು ಜನವರಿ 2 ರಂದು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕಿಸುವ ಮಾರ್ಗದಲ್ಲಿ ದಾಳಿ ನಡೆಸಿ ಹಾನಿ ಮಾಡಲಾಗಿತ್ತು.

ರೈಲಿನ ಮುಂಬದಿ ಫಲಕಕ್ಕೆ ಹಾನಿ
ಅಕ್ಟೋಬರ್ 6, 2022 ರಂದು, ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ದನಗಳ ಹಿಂಡಿಗೆ ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿ ಅದರ ಎಂಜಿನ್ ಹಾನಿಗೊಳಗಾಗಿತ್ತು. ಮರುದಿನ ಅಂದರೆ ಅಕ್ಟೋಬರ್ 7ರಂದು ಗುಜರಾತ್‌ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಬದಿ ಫಲಕಕ್ಕೆ ಹಾನಿಯಾಗಿತ್ತು.

ಗಂಟೆಗೆ 100 ಕಿಮೀ ವೇಗ
ಅಕ್ಟೋಬರ್ 8, 2022ರಂದು ವಾರಣಾಸಿಗೆ ಹೋಗುವ ವಂದೇ ಭಾರತ್ ರೈಲಿನ ಒಂದು ಚಕ್ರವು ಜಾಮ್ ಆಗಿತ್ತು. ಅದೃಷ್ಟವಶಾತ್, ಗ್ರೌಂಡ್ ಸಿಬ್ಬಂದಿ ದೋಷವನ್ನು ಪತ್ತೆಹಚ್ಚಿ ಸಮಯಪ್ರಜ್ಞೆ ಮೆರೆದು ರೈಲ್ವೆ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದರು. ರೈಲು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಶನಿವಾರ ಫೆಬ್ರವರಿ 4 ರಂದು, ವಂದೇ ಭಾರತ್ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ವರದಿ ಮಾಡಲಾದ ವೀಡಿಯೊ ವೈರಲ್ ಆಗಿದೆ.

ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್
ಪ್ರಸ್ತುತ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತಿವೆ. 1. ಸಿಕಂದರಾಬಾದ್ - ವಿಶಾಖಪಟ್ಟಣ, 2. ಹೌರಾ - ನ್ಯೂ ಜಲ್ಪೈಗುರಿ, 3. ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ, 4. ಬಿಲಾಸ್‌ಪುರ್ - ನಾಗ್ಪುರ, 5. ಮುಂಬೈ ಸೆಂಟ್ರಲ್ - ಗಾಂಧಿನಗರ, 6. ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್, 7. ಅಂಬ್ ಅಂಡೌರಾ - ನವದೆಹಲಿ, 8. ವಾರಣಾಸಿ - ನವದೆಹಲಿ.

ಮುಂಬೈನಿಂದ ಶಿರಡಿ ಹಾಗೂ ಸೊಲ್ಲಾಪುರಕ್ಕೆ ರೈಲು
ದೇಶದಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಮುಂಬೈಗೆ ಈ ಎರಡು ರೈಲುಗಳನ್ನು ನೀಡಲಾಗುತ್ತಿದೆ. ಒಂದು ರೈಲು ಮುಂಬೈನಿಂದ ಶಿರಡಿಗೆ ಪ್ರಯಾಣ ಮಾಡುತ್ತದೆ. ಎರಡನೇ ರೈಲು ಮುಂಬೈನಿಂದ ಸೊಲ್ಲಾಪುರಕ್ಕೆ ಪ್ರಯಾಣ ಮಾಡುತ್ತದೆ. ಈಗಾಗಲೇ ಈ ರೈಲುಗಳ ಪ್ರಯೋಗಿಕ ಸಂಚಾರ ಮುಗಿದಿದ್ದು, ಇದೇ ಫೆಬ್ರವರಿ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.












Click it and Unblock the Notifications