ಕೇಂದ್ರ ಕ್ಯಾಬಿನೆಟ್‌ನಲ್ಲಿ ಬದಲಾವಣೆ; ಆರೋಗ್ಯ ಖಾತೆ ರಾಜ್ಯ ಸಚಿವರಾಗಿ ಎಸ್‌ಪಿ ಸಿಂಗ್ ಬಾಘೇಲ್ ನೇಮಕ
ಗುರುವಾರ ಬೆಳಗ್ಗೆ ಕಿರಣ್ ರಿಜಿಜು ಅವರನ್ನು ಕೇಂದ್ರ ಕಾನೂನು ಸಚಿವ ಸ್ಥಾನದಿಂದ ನಿಯುಕ್ತಿಗೊಳಿಸಿ ಭೂ ವಿಜ್ಞಾನ ಸಚಿವರನ್ನಾಗಿ ಬದಲಾಯಿಸಲಾಗಿತ್ತು. ಆ ಬಳಿಕ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕೇಂದ್ರ ಕಾನೂನು ಸಚಿವ ಸ್ಥಾನಕ್ಕೆ ನೇಮಿಸಲಾಗಿತ್ತು.
ಇದೀಗ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಬದಲಾವಣೆಯಾಗಿದ್ದು, ಕೇಂದ್ರ ಕಾನೂನು ಸಚಿವಾಲಯದ ರಾಜ್ಯ ಸಚಿವರಾಗಿದ್ದ ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾಗಿ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಭಾರತದ ರಾಷ್ಟ್ರಪತಿಗಳು ಪ್ರೋ. ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರನ್ನಾಗಿ ನಿಯೋಜಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಈ ಕುರಿತು ಪ್ರಕಟಣೆ ಹೊರಡಿಸಿದೆ.
ಪ್ರಧಾನಮಂತ್ರಿ ನಿರ್ದೇಶನದಂತೆ ಒಂದೇ ದಿನದಲ್ಲಿ ಎರಡು ಸಚಿವಾಲಯದ ಮೂರು ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡಲಾಗಿದೆ. ಕಾನೂನು ಸಚಿವಾಲಯದಿಂದ ಕಿರಣ್ ರಿಜಿಜು ಅವರನ್ನು ಭೂ ವಿಜ್ಞಾನ ಖಾತೆಗೆ ವರ್ಗಾಯಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವೀಯಾ ಮುಂದುವರೆದಿದ್ದಾರೆ.

ರವಿಶಂಕರ್ ಪ್ರಸಾದ್ ಅವರ ರಾಜೀನಾಮೆ ನಂತರ ಕಿರಣ್ ರಿಜಿಜು ಅವರು ಜುಲೈ 8, 2021ರಂದು ಕಾನೂನು ಮತ್ತು ನ್ಯಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದಕ್ಕೂ ಮುನ್ನ ಮೇ 2019ರಿಂದ ಜುಲೈ 2021ರವರೆಗೆ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾಗಿ ಸೇವೆ ಸಲ್ಲಿಸಿದ್ದರು. ದೇಶಾದ್ಯಂತ ಖೇಲೋ ಇಂಡಿಯಾ ಕ್ರೀಡಾಕೂಟ ನಡೆಸುವ ಮೂಲಕ ಗಮನ ಸೆಳೆದಿದ್ದರು.












Click it and Unblock the Notifications