ರಾಜ್ಯದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಬೆಂಗಳೂರು-ಕೋಝಿಕ್ಕೋಡ್ ನೇರ ರೈಲು ಸೇವೆ ವಿಸ್ತರಣೆ
ದಕ್ಷಿಣ ರೈಲ್ವೆ ಇಲಾಖೆ 2025-26ನೇ ಹಣಕಾಸು ವರ್ಷದಲ್ಲಿ ಹೊಸ ರೈಲು ಸೇವೆ, ಮಾರ್ಗಗಳ ವಿಸ್ತರಣೆ ಹಾಗೂ ನಿಲ್ದಾಣಗಳನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಸುಲಭ ಮತ್ತು ಪ್ರಮುಖ ಸೌಲಭ್ಯಗಳನ್ನು ಒದಗಿಸಿದೆ. ವಿಶೇಷವಾಗಿ ಕರ್ನಾಟಕದ ಪ್ರಯಾಣಿಕರಿಗೆ ದೊಡ್ಡ ಲಾಭವಾಗಿದ್ದು, ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಈಗ ಕೋಝಿಕೋಡ್ವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಿಂದ ಕೇರಳದ ಮಲಬಾರ್ ಪ್ರದೇಶಕ್ಕೆ ನೇರ ಸಂಪರ್ಕ ದೊರೆತಿದ್ದು, ಇದರಿಂದ ರೈಲು ಬದಲಾಯಿಸುವ ಅವಶ್ಯಕತೆ ಕಡಿಮೆಯಾಗಿದೆ.
ಚೆನ್ನೈನಲ್ಲಿ ದಕ್ಷಿಣ ರೈಲ್ವೆ ಬಿಡುಗಡೆ ಮಾಡಿದ ಸಾಧನಾ ವರದಿ ಪ್ರಕಾರ, 2025-26ರಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಹೊಸ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ. ತಮಿಳುನಾಡಿನಲ್ಲಿ ಒಟ್ಟು 23, ಕೇರಳದಲ್ಲಿ 14 ಹಾಗೂ ಕರ್ನಾಟಕದಲ್ಲಿ 5 ಹೊಸ ಸೇವೆಗಳು ಆರಂಭಗೊಂಡಿವೆ. ಈ ರೈಲುಗಳಲ್ಲಿ ಹಲವು ಮೂರು ರಾಜ್ಯಗಳ ಪ್ರಯಾಣಿಕರಿಗೂ ಪ್ರಯೋಜನ ಆಗುತ್ತವೆ.

ದಕ್ಷಿಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎನ್. ನಾರಾಯಣ್ ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ಹೊಸ ರೈಲುಗಳು, ಮಾರ್ಗ ವಿಸ್ತರಣೆ, ಸೇವೆಗಳ ಸಂಖ್ಯೆಯಲ್ಲಿ ಏರಿಕೆ ಹಾಗೂ ಹೆಚ್ಚಿನ ನಿಲ್ದಾಣಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು
ದೇಶದ ಪ್ರಮುಖ ವಲಯಗಳ ನಡುವಿನ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಾಗಿದೆ. ದಕ್ಷಿಣ ಭಾರತವನ್ನು ಪೂರ್ವ ಮತ್ತು ಉತ್ತರ ಭಾಗಗಳೊಂದಿಗೆ ಸುಲಭವಾಗಿ ಸಂಪರ್ಕಿಸುವ ಉದ್ದೇಶದಿಂದ, 2026ರ ಜನವರಿ 17ರಂದು ಎರಡು ಪ್ರಮುಖ ಮಾರ್ಗಗಳಲ್ಲಿ ಸೇವೆ ಆರಂಭಿಸಲಾಗಿದೆ. ನ್ಯೂ ಜಲ್ಪೈಗುರಿ-ನಾಗರ್‌ಕೋಯಿಲ್ ಹಾಗೂ ನ್ಯೂ ಜಲ್ಪೈಗುರಿ-ತಿರುಚಿರಾಪಳ್ಳಿ(ಟ್ರಿಚಿ ) ನಡುವೆ ಸಂಚರಿಸಲಿರುವ ಈ ರೈಲುಗಳು ಪ್ರಯಾಣಿಕರಿಗೆ ಇನ್ನಷ್ಟು ವೇಗದ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡಲಿವೆ.
2026ರ ಮಾರ್ಚ್ 11ರಂದು ಆರಂಭವಾದ ಪೊದನೂರು-ಧನಬಾದ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪೂರ್ವ ಕರಾವಳಿ ಮಾರ್ಗದ ಮೂಲಕ ಹಲವು ರಾಜ್ಯಗಳನ್ನು ಸಂಪರ್ಕಿಸುತ್ತದೆ.
ದಿನನಿತ್ಯದ ಪ್ರಯಾಣಿಕರಿಗೆ ದಕ್ಷಿಣ ರೈಲ್ವೆಯಿಂದ ಮೂರು ಹೊಸ MEMU ರೈಲು ಸೇವೆಗಳು ಆರಂಭ:
ದಿನನಿತ್ಯ ಸಂಚರಿಸುವ ಉದ್ಯೋಗಿಗಳು ಹಾಗೂ ಕಡಿಮೆ ದೂರದ ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ವಲಯವು ಹೊಸ MEMU (Mainline Electric Multiple Unit) ರೈಲು ಸೇವೆಗಳನ್ನು ಯಶಸ್ವಿಯಾಗಿ ಆರಂಭಿಸಿದೆ. ಇತ್ತೀಚೆಗಷ್ಟೇ ಈ ಮಾರ್ಗಗಳಲ್ಲಿ ಹೊಸ ಸೇವೆಗಳು ಚಾಲನೆಗೊಂಡಿವೆ:
ಸೇಲಂ-ಈರೋಡ್: 2025ರ ನವೆಂಬರ್ 24 ರಿಂದಲೇ ಈ ಸೇವೆ ಲಭ್ಯವಿದೆ.
ಪಾಲಕ್ಕಾಡ್-ಪೊಲ್ಲಾಚಿ: 2026ರ ಮಾರ್ಚ್ 11 ರಿಂದ ಸಂಚಾರ ಆರಂಭಿಸಿದೆ.
ಕೊಲ್ಲಂ-ಎರ್ನಾಕುಲಂ: 2026ರ ಮಾರ್ಚ್ 16 ರಿಂದ ಪ್ರಯಾಣಿಕರ ಸೇವೆಗೆ ಮುಕ್ತವಾಗಿದೆ.
ಕರ್ನಾಟಕ-ಕೇರಳ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ:
ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಪ್ರಮುಖ ರೈಲುಗಳ ಸಂಚಾರ ವ್ಯಾಪ್ತಿಯನ್ನು ವಿಸ್ತರಿಸಿದೆ. ಬದಲಾವಣೆ ಆದ ಪ್ರಮುಖ ಮಾರ್ಗಗಳು ಇಲ್ಲಿವೆ.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್: ಈ ರೈಲನ್ನು ಈಗ ಕೋಝಿಕೋಡ್ವರೆಗೆ ಜಂಕ್ಷನ್‌ವರೆಗೆ ವಿಸ್ತರಿಸಲಾಗಿದ್ದು, ಐಟಿ ಹಬ್ ಮತ್ತು ಉತ್ತರ ಕೇರಳದ ನಡುವಿನ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಿದೆ.
ರೈಲು ಸಂಖ್ಯೆ: 16511 (ಬೆಂಗಳೂರು ಟು ಕೋಝಿಕ್ಕೋಡ್) ಮತ್ತು 16512 (ಕೋಝಿಕ್ಕೋಡ್ ಟು ಬೆಂಗಳೂರು)
ಮಂಗಳೂರು-ಕೋಝಿಕೋಡ್ ಎಕ್ಸ್‌ಪ್ರೆಸ್: ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಈ ರೈಲನ್ನು ಇನ್ಮುಂದೆ ಪಾಲಕ್ಕಾಡ್ ಜಂಕ್ಷನ್‌ವರೆಗೆ ವಿಸ್ತರಿಸಿದೆ.
ರೈಲು ಸಂಖ್ಯೆ: 16610
ತಿರುವನಂತಪುರಂ-ಮಧುರೈ ಅಮೃತಾ ಎಕ್ಸ್‌ಪ್ರೆಸ್: ಪ್ರಸಿದ್ಧ ಪುಣ್ಯಕ್ಷೇತ್ರ ರಾಮೇಶ್ವರಂಗೆ ತೆರಳುವ ಯಾತ್ರಿಕರ ಅನುಕೂಲಕ್ಕಾಗಿ ಈ ರೈಲನ್ನು ರಾಮೇಶ್ವರಂವರೆಗೆ ವಿಸ್ತರಿಸಲಾಗಿದೆ. ಕೇರಳ ಮತ್ತು ತಮಿಳುನಾಡನ್ನು ಸಂಪರ್ಕಿಸುವ ಜನಪ್ರಿಯ ದೈನಂದಿನ ರೈಲಾಗಿದೆ.
ರೈಲು ಸಂಖ್ಯೆ: 16343/16344
ಸಂಚಾರದಲ್ಲಿ ಹೆಚ್ಚಿನ ಸೇವೆ ಮತ್ತು ಹೊಸ ನಿಲ್ದಾಣಗಳು
ಪ್ರಯಾಣಿಕರ ನಿರಂತರವಾದ ಬೇಡಿಕೆಯನ್ನು ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ರೈಲುಗಳ ಸಂಚಾರ ದಿನಗಳನ್ನು ಹೆಚ್ಚಿಸಲಾಗಿದೆ. ತಿರುಪತಿ-ರಾಮೇಶ್ವರಂ ಎಕ್ಸ್‌ಪ್ರೆಸ್ ಸೇವೆಯನ್ನು ವಾರದಲ್ಲಿ ಮೂರು ದಿನಗಳಿಂದ ನಾಲ್ಕು ದಿನಗಳಿಗೆ ಹೆಚ್ಚಿಸಲಾಗಿದೆ.
ತಿರುಚಿರಾಪಳ್ಳಿ-ಕಾರೈಕುಡಿ ಹಾಗೂ ಕಾರೈಕುಡಿ-ವಿರುಧುನಗರ ನಡುವಿನ ಪ್ರಯಾಣಿಕರ ರೈಲುಗಳನ್ನು ದೈನಂದಿನ ಸೇವೆಯಾಗಿ ಪರಿವರ್ತಿಸಲಾಗಿದೆ.
ಇದರ ಜೊತೆಗೆ ತಮಿಳುನಾಡು ಮತ್ತು ಕೇರಳದ ಕರಾವಳಿ ಹಾಗೂ ಗ್ರಾಮೀಣ ಪ್ರದೇಶಗಳ ಸೇರಿ 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಹೊಸ ರೈಲು ನಿಲುಗಡೆಗಳನ್ನು ಒದಗಿಸಲಾಗಿದೆ. ಕೇರಳದ ವಡಕರಾ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಮುಖ ರೈಲುಗಳು ನಿಲುಗಡೆಯಾಗಲಿವೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.














Click it and Unblock the Notifications