Manmohan Singh: ಮನಮೋಹನ್ ಸಿಂಗ್‌ಗೆ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಅರ್ಪಿಸಿದ ಸೋನಿಯಾ ಗಾಂಧಿ
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲು 7 ದಿನಗಳ ಕಾಲ ಶೋಕಾಚರಣೆ ಮಾಡಲು ಸರ್ಕಾರ ಆದೇಶಿಸಿದೆ. ಅಗಲಿದ ನಾಯಕನಿಗೆ ಇಡೀ ದೇಶವೇ ಗೌರವ ಸಮರ್ಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕೂಡ ಭಾವನಾತ್ಮಕ ಪತ್ರ ಬರೆದಿದ್ದು ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಮುಖ್ಯಸ್ಥೆ ಸೋನಿಯಾ ಗಾಂಧಿ ಮನಮೋಹನ್ ಸಿಂಗ್‌ರನ್ನು ನೆನೆದು ಸುದೀರ್ಘ ಪತ್ರ ಬರೆದಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ, ತಮಗೆ ವೈಯಕ್ತಿತವಾಗಿ ತುಂಬಾ ನಷ್ಟ ಉಂಟುಮಾಡಿದೆ ಎಂದು ಹೇಳಿದ್ದಾರೆ. ಮನಮೋಹನ್ ಸಿಂಗ್ ತಮ್ಮ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಪಕ್ಷವು ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಅವರು ತುಂಬಲಾರದ ಶೂನ್ಯವನ್ನು ಬಿಟ್ಟುಹೋಗಿದ್ದಾರೆ. ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ಅವರ ಕೊಡುಗೆಗಳು ಅಪಾರವಾಗಿವೆ. ಅವರಂತಹ ನಾಯಕನನ್ನು ಪಡೆದಿದ್ದಕ್ಕೆ ನಮ್ಮ ಪಕ್ಷ ಮತ್ತು ಭಾರತದ ಜನತೆ ಎಂದಿಗೂ ಹೆಮ್ಮೆಪಡುತ್ತೇವೆ, ಅವರಿಗೆ ಎಂದಿಗೂ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.
ಬುದ್ಧಿವಂತಿಕೆ, ಉದಾತ್ತತೆ ಮತ್ತು ನಮ್ರತೆಯ ಪ್ರತಿರೂಪವಾದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ದೇಶಕ್ಕಾಗಿ ಅವರು ಮನಸಾರೆ ಸೇವೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಅವರ ದೂರದೃಷ್ಟಿ, ಕೆಲಸದಿಂದ ಇಂದು ಲಕ್ಷಾಂತರ ಭಾರತೀಯರ ಜೀವನವನ್ನು ಉತ್ತಮವಾಗಿಸಿದೆ ಎಂದು ಹೇಳಿದರು.
ಭಾರತದ ಜನ ಮನಮೋಹನ್ ಸಿಂಗ್‌ರ ಶುದ್ಧವಾದ ಹೃದಯ ಮತ್ತು ವ್ಯಕ್ತಿತ್ವನ್ನು ಎಂದಿಗೂ ಪ್ರೀತಿಸುತ್ತಾರೆ. ಅವರ ಸಲಹೆ ಮತ್ತು ದೃಷ್ಟಿಕೋನಗಳಲ್ಲಿ ಮೌಲ್ಯವಿತ್ತು. ಪ್ರಪಂಚಾದ್ಯಂತ ಹಲವು ನಾಯಕರು ಮತ್ತು ವಿದ್ವಾಂಸರು ಡಾ. ಮನಮೋಹನ್ ಸಿಂಗ್ ಅವರ ಅಪಾರ ಬುದ್ಧಿವಂತಿಕೆ ಮತ್ತು ರಾಜನೀತಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮನಮೋಹನ್ ಸಿಂಗ್ ತಾವು ನಿರ್ವಹಿಸಿದ ಪ್ರತಿಯೊಂದು ಹುದ್ದೆಗೆ ತೇಜಸ್ಸು ಮತ್ತು ವಿಶಿಷ್ಟತೆಯನ್ನು ತಂದಕೊಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ಮತ್ತು ಗೌರವ ಹೆಚ್ಚಿಸಿದರು ಎಂದು ಹೇಳಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ನನಗೆ ವೈಯಕ್ತಿಕವಾಗಿ ತುಂಬಾ ನಷ್ಟವಾಗಿದೆ. ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ತುಂಬಾ ಸೌಮ್ಯವಾಗಿದ್ದ ಅವರು ತಮ್ಮ ನಿರ್ಧಾರಗಳಲ್ಲಿ ಆಳವಾದ ನಂಬಿಕೆ ಹೊಂದಿದ್ದವರು ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ, ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿದ್ದಾರೆ. ಅವರ ಜೊತೆ ಸಮಯ ಕಳೆದಾಗೆಲ್ಲಾ ತಮ್ಮ ಜಾಣ್ಮೆ ಪ್ರಬುದ್ಧತೆಯಿಂದ ವಿಸ್ಮಯಗೊಳಿಸುತ್ತಾರೆ ಎಂದು ಹೇಳಿದ್ದಾರೆ.
ಶುಕ್ರವಾರ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದರು. ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಕೂಡ ಭಾಗವಹಿಸಿದ್ದರು.












Click it and Unblock the Notifications