Snake Video : ಹಾವಿನ ಹೊಟ್ಟೆಯಲ್ಲಿತ್ತು ಮೂರು ಗಾಲ್ಫ್ ಬಾಲ್; ಆಪರೇಷನ್ ಇಲ್ಲದೆ ಹೊರತೆಗೆದ ವೈದ್ಯರು
ಹಾವು ಇಲಿ, ಕಪ್ಪೆ, ಕೋಳಿ ಮೊಟ್ಟೆ, ಕೋಳಿ ಮರಿ ಸಣ್ಣ ಪುಟ್ಟ ಕೀಟಗಳನ್ನು ನುಂಗುತ್ತವೆ. ಈ ಆಹಾರಗಳನ್ನು ಅದು ಚೆನ್ನಾಗಿ ಅರಗಿಸಿಕೊಳ್ಳಬಲ್ಲದು. ಆದರೆ ಇಲ್ಲೊಂದು ಹಾವು ಗಾಲ್ಫ್ ಬಾಲನ್ನೇ ನುಂಗಿ ಬಿಟ್ಟಿದೆ. ಅದು ಒಂದಲ್ಲ, ಎರಡಲ್ಲ ಮೂರು ಬಾಲ್‌ಗಳನ್ನು ನುಂಗಿ ಕೂತಿದೆ. ಪಾಪ ಈ ಹಾವು ಮೊಟ್ಟೆ ಅಂತಂದುಕೊಂಡು ಆ ಬಾಲನ್ನು ನುಂಗಿದ್ದೋ ಏನೋ. ಆದರೆ ಬಾಲ್ ನುಂಗಿದ ನಂತರ ಅದು ಪಟ್ಟ ಪಾಡು ಅಷ್ಟಿಷ್ಟಲ್ಲ.
ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಹಾವು :
ಮೊದಲಿಗೆ ವೈದ್ಯರಿಗೂ ಈ ಹಾವಿನ ಹೊಟ್ಟೆಯಲ್ಲಿ ಏನಿದೆ ಎನ್ನುವ ಸತ್ಯ ಗೊತ್ತಿರಲಿಲ್ಲ. ಆದರೆ ಹಾವಿನ ಹೊಟ್ಟೆಯಲ್ಲಿ ಅಹಜವಾಗಿ ಯಾವುದೋ ವಸ್ತು ಇದೆ ಅನ್ನುವುದು ಮಾತ್ರ ಗೊತ್ತಾಗಿದೆ. ಹಾವನ್ನು ಕೂಡಲೇ ಚಿಕಿತ್ಸೆಗೆ ಒಳಪಡಿಸಿದ್ಧಾರೆ. ಆಗ ಹಾವಿನ ಹೊಟ್ಟೆಯಲ್ಲಿ ಮೂರು ಗಾಲ್ಫ್ ಬಾಲ್‌ಗಳು ಸೇರಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣಕ್ಕೆ ಇದು ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿ ಮಾಡಿದೆ. ನಂತರ ಅದನ್ನು ಚಿಕಿತ್ಸೆಗಾಗಿ ಸ್ಯಾನ್ ಆಂಟೋನಿಯೊದಲ್ಲಿರುವ ಪ್ರಾಣಿ ಆಸ್ಪತ್ರೆಗೆ ತರಲಾಯಿತು.

ಅಪರೇಷನ್ ಇಲ್ಲದೆ ನಡೆಯಿತು ಚಿಕಿತ್ಸೆ :
ಆಸ್ಪತ್ರೆಯಲ್ಲಿ ವೈದ್ಯರು ಹಾವಿಗೆ ಅರಿವಳಿಕೆ ನೀಡಿ, ಸೂಕ್ಷ್ಮವಾದ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಿದರು. ನಂತರ, ಶಸ್ತ್ರಚಿಕಿತ್ಸೆಯಿಲ್ಲದೆ, ತಂಡವು ನಿಧಾನವಾಗಿ ಗಾಲ್ಫ್ ಚೆಂಡುಗಳನ್ನು ಹೊಟ್ಟೆಯಿಂದ ಬಾಯಿಗೆ ತಳ್ಳಿ ಒಂದೊಂದಾಗಿಯೇ ಬಾಲನ್ನು ಹೊರತೆಗೆದಿದ್ದಾರೆ. ಆಸ್ಪತ್ರೆಯು ಈ ಅಸಾಮಾನ್ಯ ಘಟನೆಯ ವೀಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದೆ. ಈ ವಿಡಿಯೋ ವ್ಯಾಪಕ ಚರ್ಚೆಗೆಕಾರಣವಾಗಿದೆ. ಹಾವು ಗಾಲ್ಫ್ ಚೆಂಡುಗಳನ್ನು ತಮ್ಮ ಆಹಾರ ಎಂದು ತಪ್ಪಾಗಿ ಭಾವಿಸಿಕೊಂಡು ನುಂಗಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಶೇರ್ :
ಈ ಘಟನೆ ಸ್ಯಾನ್ ಆಂಟೋನಿಯೊದ ಸೌತ್ ಟೆಕ್ಸಾಸ್ ಏವಿಯನ್ ಮತ್ತು ಎಕ್ಸೋಟಿಕ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹಾವಿಗೆ ಚಿಕಿತ್ಸೆ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಹಾವಿನ ದೇಹದೊಳಗೆ ಸಿಲುಕಿಕೊಂಡಿದ್ದ ಗಾಲ್ಫ್ ಬಾಲ್‌ಗಳನ್ನು ಹೇಗೆ ಹೊರತೆಗೆಯಲಾಯಿತು ಎನ್ನುವುದನ್ನು ವಿವರಿಸಲಾಗಿದೆ.
ಇಡೀ ಪ್ರಕ್ರಿಯೆಯ ವಿಡಿಯೋ :
ಪಶುವೈದ್ಯಕೀಯ ತಂಡವು ಹಾವಿಗೆ ಅರಿವಳಿಕೆ ನೀಡಿ ಅದರ ದೇಹವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿತು. ವೈದ್ಯರು ನಿಧಾನವಾಗಿ ಅದರ ದೇಹದ ಒಳಗಿನಿಂದ ಗಾಲ್ಫ್ ಚೆಂಡನ್ನು ಅದರ ಬಾಯಿಯ ಕಡೆಗೆ ಸರಿಸಿದರು. ಚೆಂಡು ಅದರ ಬಾಯಿಯನ್ನು ಸಮೀಪಿಸುತ್ತಿದ್ದಂತೆ, ಹಾವು ತನ್ನ ಬಾಯಿಯನ್ನು ತೆರೆಯಿತು ಮತ್ತು ವೈದ್ಯರು ಅದನ್ನು ಬಹಳ ಜಾಗೃತೆಯಿಂದ ಹೊರತೆಗೆದರು. ಒಂದೊಂದಾಗಿ, ಎಲ್ಲಾ ಮೂರು ಗಾಲ್ಫ್ ಚೆಂಡುಗಳನ್ನು ತೆಗೆದುಹಾಕಲಾಯಿತು.ಈ ಘಟನೆಯ ಅತ್ಯಂತ ಗಮನಾರ್ಹ ವಿಷಯವೆಂದರೆ ಹಾವಿನ ಹೊಟ್ಟೆ ಸೇರಿರುವ ಬಾಲ್ ಹೊರ ತೆಗೆಯುವುದಕ್ಕೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಲಿಲ್ಲ. ಈ ವಿಡಿಯೋದಲ್ಲಿ ಹಾವಿನ ದೇಹದೊಳಗೆ ಇನ್ನೆರಡು ಗಾಲ್ಫ್ ಚೆಂಡುಗಳು ಸ್ಪಷ್ಟವಾಗಿ ಕಾಣುತ್ತಿದ್ದು , ಹಾವು ಎಷ್ಟು ಅಸಾಮಾನ್ಯವಾಗಿ ನುಂಗಿದೆ ಎಂಬುದರ ಕಲ್ಪನೆಯನ್ನು ನೀಡುತ್ತದೆ.
ಹಾವಿನ ನಡವಳಿಕೆ ಬಗ್ಗೆ ಕಾಮೆಂಟ್ :
ಇಷ್ಟಕ್ಕೂ ಈ ಹಾವು ಗಾಲ್ಫ್ ಬಾಲನ್ನು ನುಂಗಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೆಲವರು ಹಾವು ಅದನ್ನು ಮೊಟ್ಟೆ ಎಂದು ತಪ್ಪಾಗಿ ಭಾವಿಸಿರಬಹುದು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಅನೇಕರು ಹಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅದು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಆಸ್ಪತ್ರೆಯು ಈ ಪ್ರಕರಣವನ್ನು ಅತ್ಯಂತ ಸ್ಮರಣೀಯ ಎಂದು ಬಣ್ಣಿಸಿದೆ. ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ , ವೈದ್ಯರಿಗೂ ಕೆಲವೊಮ್ಮೆ ಅಸಾಮಾನ್ಯ ಅನುಭವವಾಗುವುದು. ಆದರೆ ಮೂರು ಗಾಲ್ಫ್ ಚೆಂಡುಗಳನ್ನು ನುಂಗಿದ ಈ ಹಾವು ಪಶುವೈದ್ಯಕೀಯ ತಂಡವನ್ನೂ ಆಶ್ಚರ್ಯಗೊಳಿಸಿತು.


Click it and Unblock the Notifications
