ಭಜರಂಗಿ ಭಾಯಿಜಾನ್, ಉಡ್ತಾ ಪಂಜಾಬ್ ಬಿಡುಗಡೆಗಿತ್ತು ಕೇಂದ್ರದ ಅಡ್ಡಿ!
ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡುವಲ್ಲಿ ಕೇಂದ್ರದ ಹಸ್ತಕ್ಷೇಪ. ಕೆಲವು ಚಿತ್ರಗಳ ಪರವಾಗಿ, ಕೆಲವು ಚಿತ್ರಗಳ ವಿರುದ್ಧವಾಗಿದ್ದ ಕೇಂದ್ರ. ಸೆನ್ಸಾರ್ ಬೋರ್ಡ್ ನ ಪದಚ್ಯುತ ಅಧ್ಯಕ್ಷ ಪಹ್ಲಾದ್ ನಿಹಲಾನಿ ಹೇಳಿಕೆ.
ನವದೆಹಲಿ, ಆಗಸ್ಟ್ 19: ಕಳೆದ ವರ್ಷದ ಬ್ಲಾಕ್ ಬಸ್ಟರ್ ಚಿತ್ರವಾದ ಭಜರಂಗಿ ಭಾಯಿಜಾನ್ ಹಾಗೂ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಉಡ್ತಾ ಪಂಜಾಬ್ ಚಿತ್ರಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ತಮ್ಮ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು ಎಂದು ಕೇಂದ್ರೀಯ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾದ್ ನಿಹಲಾನಿ ಅವರು ಆರೋಪಿಸಿದ್ದಾರೆ. ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೀಗೆ ಆರೋಪಿಸಿದ್ದಾರೆ.
ಹಲವಾರು ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಕೆಲವಾರು ಸಿನಿಮಾಗಳಿಗೆ ತೊಂದರೆ ಕೊಡುವಂತೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಅವಕ್ಕೆ ನಾನು ಗಮನ ಕೊಡದೇ ಕೆೇವಲ ನನ್ನ ಕರ್ತವ್ಯ ನಿಭಾಯಿಸಿದ್ದಕ್ಕಾಗಿ ತಮ್ಮನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ನಿಹಲಾನಿ ಆರೋಪಿಸಿದರು.
ಭಜರಂಗಿ ಭಾಯಿಜಾನ್ ಸಿನಿಮಾ ಸೆನ್ಸಾರ್ ವೀಕ್ಷಣೆಗೆ ಬಂದಾಗ, ಕೇಂದ್ರ ಗೃಹ ಸಚಿವಾಲಯದಿಂದ ಪತ್ರವೊಂದು ಬಂದಿದ್ದು, ಅದರಲ್ಲಿ ಭಜರಂಗಿ ಭಾಯಿಜಾನ್ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ಸೂಚಿಸಲಾಗಿತ್ತು. ರಂಜಾನ್ ಹಬ್ಬದ ವೇಳೆ ಈ ಚಿತ್ರ ಬಿಡುಗಡೆಯಾಗಬೇಕಿದ್ದರಿಂದ ಆಗ ಜನರು ಚಿತ್ರದಲ್ಲಿನ ಕೆಲವಾರು ವಿಚಾರಗಳ ಬಗ್ಗೆ ರೊಚ್ಚಿಗೇಳಬಹುದು ಎಂದು ಹೇಳಲಾಗಿತ್ತು. ಆದರೆ, ಚಿತ್ರ ನೋಡಿದ ನಂತರ, ಗಲಾಟೆಯಾಗುವಂಥ ಯಾವುದೇ ಅಂಶ ಇಲ್ಲ ಎಂದು ಎನ್ನಿಸಿದ್ದರಿಂದಾಗಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಿದ್ದೆ ಎಂದಿದ್ದಾರೆ ನಿಹಲಾನಿ.
ಅವರ ಮಾತುಗಳಿಂದ ಆಯ್ದ ಭಾಗ ಇಲ್ಲಿದೆ.

ಹೊಸ ವಿಚಾರ ತಿಳಿಸಿದ ನಿಹಲಾನಿ
''ಪಂಜಾಬ್ ನ ಡ್ರಗ್ಸ್ ಮಾಫಿಯಾ ಬಗೆಗಿನ ಆ ಕಥೆಯನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಕೇಂದ್ರ ಸರ್ಕಾರದ ಮಾಹಿತಿ ಹಾಗೂ ಪ್ರಸಾರ ಖಾತೆಯ ಅಂದಿನ ಸಚಿವೆ ಸ್ಮೃತಿ ಇರಾನಿ ಸೂಚಿಸಿದ್ದರು. ಆ ಚಿತ್ರ ವೀಕ್ಷಿಸಿದ ನಾನು ಹಲವಾರು ಕಟ್ ಗಳನ್ನು ಸೂಚಿಸಿದ್ದೆ. ಆದರೆ, ಆ ಚಿತ್ರದ ನಿರ್ಮಾಪಕರು ಬಾಂಬೆ ಹೈಕೋರ್ಟ್ ಕಡೆಯಿಂದ ಕೇವಲ ಒಂದು ಕಟ್ ಮೂಲಕ ಚಿತ್ರ ಬಿಡುಗಡೆ ಮಾಡುವಂಥ ಆದೇಶ ಪಡೆದು ಚಿತ್ರ ರಿಲೀಸ್ ಮಾಡಿದರು''.

ಸೂಚನೆ ನಿರಾಕರಿಸಿದ್ದರಿಂದ ಅಸಮಾಧಾನ
''ಉಡ್ತಾ ಪಂಜಾಬ್ ಚಿತ್ರವನ್ನು ತಡೆ ಹಿಡಿಯುವಂತೆ ಸ್ಮೃತಿ ಇರಾನಿ ಸೂಚಿಸಿದ್ದಾಗ, ಆ ಚಿತ್ರವು ನ್ಯಾಯಾಲಯದ ಕಟಕಟೆಯಲ್ಲಿತ್ತು. ಹಾಗಾಗಿ, ನಾನು ಬಿಡುಗಡೆಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದು ಅವರಿಗೆ ಇರುಸು-ಮುರುಸು ತಂದಿತ್ತು ಎಂದರು. ಹಾಗಾಗಿ, ಅವರು ನನ್ನನ್ನು ಪದಚ್ಯುತಿಗೊಳಿಸುವ ಬಗ್ಗೆ ಅಂದೇ ಆಲೋಚಿಸಿರಬಹುದು''.

ಸ್ಮೃತಿ ಇರಾನಿಗೆ ಅಸಮಾಧಾನ
''ಇದಾದ ನಂತರ, ಇತ್ತೀಚೆಗೆ ಬಿಡುಗಡೆಯಾದ 'ಇಂದು ಸರ್ಕಾರ್' ಚಿತ್ರವನ್ನು ಬೇಗನೇ ಬಿಡುಗಡೆ ಮಾಡಬೇಕೆಂದು ಸೂಚಿಸಿದರು. ಆದರೆ, ಆ ಚಿತ್ರದಲ್ಲಿ ನನಗೆ ಕೆಲವಾರು ಆಕ್ಷೇಪಣೆಗಳು ಕಂಡಿದ್ದರಿಂದಾಗಿ ಆ ಚಿತ್ರವನ್ನು ನಾನು ಕೆಲ ದಿನಗಳ ಕಾಲ ತಡೆ ಹಿಡಿದಿದ್ದೆ. ಇದು ಅವರನ್ನು ಕೆರಳಿಸಿತು. ಹೀಗಾಗಿ, ಅವರು ನನ್ನ ಪದಚ್ಯುತಿಗೆ ಪ್ರಯತ್ನ ಪಟ್ಟಿರಬಹುದು''.

ಸಂಪೂರ್ಣ ನಿರ್ಧಾರ ಸ್ಮೃತಿ ಇರಾನಿ ಅವರದ್ದೇ
''ಲೇಖಕಿ ಹಾಗೂ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರ ಉಡ್ತಾ ಪಂಜಾಬ್ ಚಿತ್ರದ ಬಗ್ಗೆ ನಾನು ಹೆಚ್ಚು ಖಡಕ್ಕಾಗಿ ನಡೆದುಕೊಂಡಿದ್ದರಿಂದಲೇ ಏಕ್ತಾ ಕಪೂರ್ ಅವರ ಶಿಫಾರಸಿನಿಂದಲೇ ಸ್ಮೃತಿ ಇರಾನಿ ನನ್ನನ್ನು ಸೆನ್ಸಾರ್ ಮಂಡಳಿ ಅಧ್ಯಕ್ಷರ ಹುದ್ದೆಯಿಂದ ನನ್ನನ್ನು ತೆಗೆದುಹಾಕಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ನನಗೆ ಏಕ್ತಾ ಕಪೂರ್ ಬಗ್ಗೆ ಅನುಮಾನಗಳಿಲ್ಲ. ಆದರೆ, ನನಗೆ ಸಂಪೂರ್ಣವಾಗಿ ಅನುಮಾನವಿರುವುದು ಸ್ಮೃತಿ ಇರಾನಿ ಮೇಲೆಯೇ''.












Click it and Unblock the Notifications