Sleeping tips: ತಲೆಯ ಪಕ್ಕದಲ್ಲೇ ಮೊಬೈಲ್ ಇಟ್ಟು ಮಲಗುತ್ತೀರಾ? ನರವಿಜ್ಞಾನ ತಜ್ಞರು ಏನಂತಾರೆ ಕೇಳಿ!

ಇಂದಿನ ವೇಗದ ಜೀವನದಲ್ಲಿ ಬೆಳಗ್ಗೆ ಕಣ್ಣು ತೆರೆದ ತಕ್ಷಣ ನಾವು ಮೊದಲು ಹುಡುಕುವುದು ಮೊಬೈಲ್ ಫೋನ್ ಅನ್ನು. ರಾತ್ರಿ ಮಲಗುವ ಮುನ್ನ ನೋಡುವ ಕೊನೆಯ ವಸ್ತುವೂ ಅದೇ ಆಗಿರುತ್ತದೆ. ಹಲವರು ಮೊಬೈಲ್ ಅನ್ನು ದಿಂಬಿನ ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಾರೆ. ಸಂದೇಶಗಳು, ಕರೆಗಳು, ನೆನಪಿಸುವ ಸೂಚನೆಗಳು ಮತ್ತು ಹೊಸ ಮಾಹಿತಿಗಳಿಗಾಗಿ ಫೋನ್ ಸದಾ ಕೈಗೆಟುಕುವಂತಿರಬೇಕು ಎಂಬುದು ಅವರ ಬಯಕೆ.

ಆರಂಭದಲ್ಲಿ ಅನುಕೂಲಕ್ಕಾಗಿ ರೂಢಿಸಿಕೊಂಡ ಈ ಅಭ್ಯಾಸ ಈಗ ಜೀವನಶೈಲಿಯ ಭಾಗವಾಗಿದೆ. ಆದರೆ ಮಲಗುವ ಸಮಯದಲ್ಲಿಯೂ ಸ್ಮಾರ್ಟ್‌ಫೋನ್ ಅನ್ನು ಹತ್ತಿರದಲ್ಲೇ ಇಟ್ಟುಕೊಳ್ಳುವುದು ನಿದ್ರೆಯ ಗುಣಮಟ್ಟದ ಮೇಲೆ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಪರಿಣಾಮ ಬೀರಬಹುದು ಎಂದು ಫೋರ್ಟಿಸ್ ಆಸ್ಪತ್ರೆಯ ನೋಯ್ಡಾ ಘಟಕದ ನರವಿಜ್ಞಾನ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಬಾಲಾ ಶರ್ಮಾ ಎಚ್ಚರಿಸಿದ್ದಾರೆ.

Sleeping

ಮೊಬೈಲ್ ಪರದೆಯ ಬೆಳಕು, ಸಂದೇಶ ಬಂದಾಗ ಉಂಟಾಗುವ ಕಂಪನ, ನಿದ್ರೆಗೆ ಜಾರುವ ಮುನ್ನವೂ ಫೋನ್ ಪರಿಶೀಲಿಸುವ ಅಭ್ಯಾಸ ಇವೆಲ್ಲವೂ ದೇಹದ ಸಹಜ ಲಯಕ್ಕೆ ಅಡ್ಡಿಯಾಗಬಹುದು. ಈ ಅಭ್ಯಾಸ ಮುಂದುವರಿದರೆ ದೈಹಿಕ ಆರೋಗ್ಯ, ಭಾವನಾತ್ಮಕ ಸಮತೋಲನ ಮತ್ತು ಮೆದುಳಿನ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ನಿದ್ರೆ ನಮ್ಮ ದೇಹಕ್ಕೆ ಏಕೆ ಇಷ್ಟೊಂದು ಮುಖ್ಯ?

ನಿದ್ರೆ ಎಂದರೆ ಕೇವಲ ವಿಶ್ರಾಂತಿಯಲ್ಲ. ದೇಹ ಮತ್ತು ಮೆದುಳು ಚೇತರಿಸಿಕೊಳ್ಳಲು ನೆರವಾಗುವ ಅತ್ಯಗತ್ಯ ಪ್ರಕ್ರಿಯೆ ಅದು. ಡಾ. ಶರ್ಮಾ ಅವರ ವಿವರಣೆಯ ಪ್ರಕಾರ, ದಿನವಿಡೀ ಕೆಲಸ ಮಾಡಿದ ಮೆದುಳು ಚೇತರಿಸಿಕೊಳ್ಳಲು, ಚಯಾಪಚಯ ಕ್ರಿಯೆಗಳಿಂದ ಉಂಟಾಗುವ ತ್ಯಾಜ್ಯಗಳನ್ನು ತೆರವುಗೊಳಿಸಲು, ಭಾವನೆಗಳನ್ನು ಸಮತೋಲನದಲ್ಲಿಡಲು ಮತ್ತು ಕಲಿತ ವಿಷಯಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ನಿದ್ರೆ ಸಹಾಯ ಮಾಡುತ್ತದೆ. ನಿದ್ರೆಗೆ ಅಡ್ಡಿಯಾದಾಗ ದೇಹದ ಹಲವು ವ್ಯವಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗಬಹುದು.

ಆಳವಾದ ಮತ್ತು ಆರಾಮದಾಯಕ ನಿದ್ರೆಯ ಸಮಯದಲ್ಲಿ ದೇಹವು ರಕ್ತದೊತ್ತಡವನ್ನು ನಿಯಂತ್ರಿಸಲು, ಜೀವಕೋಶಗಳ ದುರಸ್ತಿಗೆ ಮತ್ತು ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಕೆ ನೆರವಾಗುವ ಪ್ರಕ್ರಿಯೆಗಳನ್ನು ಮುಂದುವರಿಸುತ್ತದೆ. ನೆನಪುಗಳನ್ನು ರೂಪಿಸುವುದು ಮತ್ತು ಮಾಹಿತಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳುವುದರಲ್ಲಿಯೂ ನಿದ್ರೆಗೆ ಮಹತ್ವದ ಪಾತ್ರವಿದೆ.

ಹೀಗಾಗಿಯೇ ಸರಿಯಾಗಿ ನಿದ್ರೆ ಮಾಡದಿದ್ದಾಗ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಓದಿದ ಅಥವಾ ಕೇಳಿದ ವಿಷಯಗಳು ನೆನಪಿನಲ್ಲಿ ಉಳಿಯದಿರಬಹುದು. ಬೆಳಗ್ಗೆ ಎದ್ದಾಗಲೂ ಸುಸ್ತು, ನಿಶ್ಶಕ್ತಿ ಅಥವಾ ಮನಸ್ಸು ಮಂಕಾದ ಅನುಭವವಾಗಬಹುದು. ಪ್ರತಿದಿನ ರಾತ್ರಿ ನಿದ್ರೆಗೆ ಅಡ್ಡಿಯಾದರೆ ಈ ಸಮಸ್ಯೆಗಳು ಮುಂದುವರಿಯುವ ಸಾಧ್ಯತೆಯಿದೆ.

ಮೊಬೈಲ್ ಮತ್ತು ದೇಹದ ಜೈವಿಕ ಗಡಿಯಾರ

ನಮ್ಮ ದೇಹದಲ್ಲಿ ಯಾವಾಗ ಎಚ್ಚರವಾಗಿರಬೇಕು ಮತ್ತು ಯಾವಾಗ ನಿದ್ರಿಸಬೇಕು ಎಂಬುದನ್ನು ನಿಯಂತ್ರಿಸುವ ಆಂತರಿಕ ವ್ಯವಸ್ಥೆಯಿದೆ. ಇದನ್ನು ʼಸಿರ್ಕಾಡಿಯನ್ ರಿದಮ್ʼ (Circadian Rhythm) ಎಂದು ಕರೆಯುತ್ತಾರೆ.

ಈ ಜೈವಿಕ ಲಯದ ಮೇಲೆ ಬೆಳಕು ಪ್ರಮುಖ ಪ್ರಭಾವ ಬೀರುತ್ತದೆ. ಬೆಳಗಿನ ನೈಸರ್ಗಿಕ ಸೂರ್ಯನ ಬೆಳಕು ನಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಸಂಜೆ ಕತ್ತಲಾದಾಗ ಮೆದುಳು 'ಮೆಲಟೋನಿನ್' (Melatonin) ಎಂಬ ಹಾರ್ಮೋನ್ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಇದು ದೇಹವನ್ನು ನಿದ್ರೆಗೆ ಸಿದ್ಧಪಡಿಸಲು ನೆರವಾಗುತ್ತದೆ.

ಆದರೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ಗಳ ಬಳಕೆ ಈ ಸಹಜ ವ್ಯವಸ್ಥೆಗೆ ಅಡ್ಡಿಯಾಗಬಹುದು. ಇವುಗಳಿಂದ ಹೊರಹೊಮ್ಮುವ ನೀಲಿ ಬೆಳಕು ಹಗಲಿನ ಬೆಳಕನ್ನು ಹೋಲುತ್ತದೆ.

ಡಾ. ಶರ್ಮಾ ಅವರ ಪ್ರಕಾರ, ನೀಲಿ ಬೆಳಕು ನಿದ್ರೆಗೆ ಸಿದ್ಧಪಡಿಸುವ ಮೆಲಟೋನಿನ್ ಹಾರ್ಮೋನ್‌ನ ಸಹಜ ಚಟುವಟಿಕೆಗೆ ಅಡ್ಡಿಯಾಗಬಹುದು. ಇದರಿಂದ ತಡರಾತ್ರಿಯಾದರೂ ಮೆದುಳು ಇನ್ನೂ ಹಗಲಿನ ಸಮಯವೆಂಬಂತೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ.

2025ರಲ್ಲಿ 'JAMA Network Open' ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಒಂದು ಲಕ್ಷಕ್ಕೂ ಹೆಚ್ಚು ವಯಸ್ಕರ ಮಾಹಿತಿಯನ್ನು ವಿಶ್ಲೇಷಿಸಿತ್ತು. ಮಲಗುವ ಮುನ್ನದ ಒಂದು ಗಂಟೆಯಲ್ಲಿ ಎಲೆಕ್ಟ್ರಾನಿಕ್ ಸ್ಕ್ರೀನ್‌ಗಳನ್ನು ಬಳಸುತ್ತಿದ್ದವರಿಗೆ ಕಳಪೆ ನಿದ್ರೆಯ ಗುಣಮಟ್ಟದ ಸಾಧ್ಯತೆ ಶೇಕಡಾ 33ರಷ್ಟು ಹೆಚ್ಚಾಗಿತ್ತು ಎಂದು ಆ ಅಧ್ಯಯನ ವರದಿ ಮಾಡಿದೆ.

ಅಧ್ಯಯನದಲ್ಲಿ ರಾತ್ರಿ ನಿಯಮಿತವಾಗಿ ಸ್ಕ್ರೀನ್‌ ಬಳಸುವವರು ಸರಾಸರಿ ಎಂಟು ನಿಮಿಷ ಕಡಿಮೆ ನಿದ್ರೆ ಮಾಡುತ್ತಿದ್ದರು ಎಂಬುದೂ ಕಂಡುಬಂದಿತ್ತು. ಇವರಲ್ಲಿ ನಿದ್ರೆ ತಡವಾಗುವುದು ಮತ್ತು ಮರುದಿನ ಬೆಳಗ್ಗೆ ಎದ್ದಾಗ ಮಂಪರು ಕಾಡುವ ಸಾಧ್ಯತೆಯೂ ಹೆಚ್ಚಾಗಿತ್ತು.

ಸ್ಕ್ರೀನ್ ಬೆಳಕಿನ ಜೊತೆಗೆ ಮೊಬೈಲ್‌ನಲ್ಲಿರುವ ವಿಷಯಗಳ ಬಗ್ಗೆ ನಿರಂತರವಾಗಿ ಯೋಚಿಸುವುದು ಮೆದುಳಿನ ಸಹಜ ನಿದ್ರೆ-ಎಚ್ಚರದ ಲಯಕ್ಕೆ ಅಡ್ಡಿಯಾಗಬಹುದು ಎಂದು ಸಂಶೋಧಕರು ವಿವರಿಸಿದ್ದಾರೆ.

ರಾತ್ರಿ ತಡವಾಗಿ ಮೊಬೈಲ್ ನೋಡುವುದರಿಂದ ಮೆದುಳು ಎಚ್ಚರ

ಮೊಬೈಲ್ ಸ್ಕ್ರೀನ್‌ ಬೆಳಕು ಮಾತ್ರ ನಿದ್ರೆಗೆ ಅಡ್ಡಿಯಲ್ಲ. ಅದರಲ್ಲಿ ನೀವು ನೋಡುವ ವಿಷಯಗಳೂ ಮುಖ್ಯವಾಗುತ್ತವೆ. ಸಂದೇಶಗಳನ್ನು ಓದುವುದು, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್ ಮಾಡುವುದು, ವಿಡಿಯೊಗಳನ್ನು ನೋಡುವುದು ಅಥವಾ ಕಚೇರಿಯ ಇಮೇಲ್‌ಗಳನ್ನು ಪರಿಶೀಲಿಸುವುದು ಮೆದುಳನ್ನು ಚಟುವಟಿಕೆಯಿಂದ ಇರುವಂತೆ ಮಾಡಬಹುದು. ದೇಹ ನಿಧಾನವಾಗಿ ವಿಶ್ರಾಂತಿಯ ಸ್ಥಿತಿಗೆ ಸಾಗಬೇಕಾದ ಸಮಯದಲ್ಲಿ ಈ ಚಟುವಟಿಕೆಗಳು ಮೆದುಳನ್ನು ಮತ್ತೆ ಎಚ್ಚರಗೊಳಿಸುತ್ತವೆ.

ರಾತ್ರಿ ಮೊಬೈಲ್ ಬಳಸುವಾಗ ಮೆದುಳು ವಿಶ್ರಾಂತಿ ಪಡೆಯುವ ಬದಲು ಹೆಚ್ಚು ಜಾಗರೂಕ ಸ್ಥಿತಿಗೆ ಹೋಗಬಹುದು. ಕೆಲವೇ ನಿಮಿಷಗಳ ಪರದೆ ಬಳಕೆಯೂ ಕೆಲವು ವ್ಯಕ್ತಿಗಳಲ್ಲಿ ನಿದ್ರೆ ಆರಂಭವಾಗುವ ಸಮಯವನ್ನು ಮುಂದೂಡಬಹುದು ಎಂದು ಡಾ. ಶರ್ಮಾ ವಿವರಿಸುತ್ತಾರೆ. ಇದರಿಂದ ನಿದ್ರೆ ಪದೇಪದೆ ಅಡ್ಡಿಯಾಗಬಹುದು. ಸಾಕಷ್ಟು ಸಮಯ ಹಾಸಿಗೆಯಲ್ಲಿ ಕಳೆದರೂ ಆಳವಾದ, ಆರಾಮದಾಯಕ ನಿದ್ರೆ ದೊರೆಯದಿರಬಹುದು.

ನಿದ್ರೆಯನ್ನು ಕಾಪಾಡಲು ಸರಳ ಟಿಪ್ಸ್‌

ದೇಹದ ಸಹಜ ನಿದ್ರೆಯ ಲಯಕ್ಕೆ ನೆರವಾಗಲು ಮಲಗುವ ಮುನ್ನ ಸ್ಕ್ರೀನ್‌ ಬಳಕೆ ಕಡಿಮೆ ಮಾಡುವುದು ಅತ್ಯಂತ ಸರಳ ಕ್ರಮವಾಗಿದೆ.

ವೈದ್ಯರು ಸಾಮಾನ್ಯವಾಗಿ ಮಲಗುವ ಮುನ್ನ ಒಂದರಿಂದ ಎರಡು ಗಂಟೆಗಳವರೆಗೆ ಮೊಬೈಲ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ತಪ್ಪಿಸುವಂತೆ ಸಲಹೆ ನೀಡುತ್ತಾರೆ. ಇದರಿಂದ ದೇಹವು ತನ್ನ ಸಹಜ ನಿದ್ರೆಯ ಪ್ರಕ್ರಿಯೆಗೆ ಸಿದ್ಧವಾಗಲು ಅವಕಾಶ ದೊರೆಯುತ್ತದೆ.

ನಿದ್ರೆಗೆ ಅನುಕೂಲವಾಗುವಂತೆ ಮಲಗುವ ಕೋಣೆಯನ್ನು ಕತ್ತಲೆಯಾಗಿಡುವುದು ಸಹ ಮುಖ್ಯ. ರಾತ್ರಿ ಬೆಳಕು ಅಗತ್ಯವಿದ್ದರೆ ಕಡಿಮೆ ತೀವ್ರತೆಯ ಕೆಂಪು ಬೆಳಕನ್ನು ಬಳಸಬಹುದು. ಬೆಳಗ್ಗೆ ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಜೈವಿಕ ಗಡಿಯಾರವನ್ನು ಸರಿಯಾದ ಲಯದಲ್ಲಿ ಇರಿಸಲು ನೆರವಾಗಬಹುದು.

ಇವುಗಳ ಜೊತೆಗೆ ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗುವುದು ಮತ್ತು ಎದ್ದೇಳುವುದು ಉತ್ತಮ ನಿದ್ರೆಯ ಅಭ್ಯಾಸವನ್ನು ರೂಪಿಸಲು ಸಹಾಯ ಮಾಡುತ್ತದೆ. ತಜ್ಞರು, ರಾತ್ರಿ ಮಲಗುವಾಗ ಮೊಬೈಲ್ ಅನ್ನು ಮಲಗುವ ಕೋಣೆಯಿಂದ ಹೊರಗಿಡುವಂತೆ ಅಥವಾ ಕನಿಷ್ಠ ಹಾಸಿಗೆಯಿಂದ ದೂರದಲ್ಲಿ ಇಡುವಂತೆ ಸಲಹೆ ನೀಡುತ್ತಾರೆ.

ಮೊಬೈಲ್ ಕೈಗೆಟುಕುವಷ್ಟು ಹತ್ತಿರದಲ್ಲಿದ್ದರೆ ಹೊಸ ಸಂದೇಶ ಬಂದಿದೆಯೇ, ಯಾರಾದರೂ ಕರೆ ಮಾಡಿದ್ದಾರೆಯೇ ಎಂದು ಪದೇಪದೆ ಪರಿಶೀಲಿಸುವ ಆಸೆ ಮೂಡಬಹುದು. ಮಲಗಿದ ನಂತರವೂ ಸಾಮಾಜಿಕ ಜಾಲತಾಣಗಳನ್ನು ನೋಡುವ ಅಭ್ಯಾಸ ಮುಂದುವರಿಯಬಹುದು.

ಡಾ. ಶರ್ಮಾ ಅವರ ಪ್ರಕಾರ, ಮೊಬೈಲ್ ಅನ್ನು ಮಲಗುವ ಕೋಣೆಯಿಂದ ಹೊರಗಿಡುವುದರಿಂದ ಮನಸ್ಸಿಗೆ ಡಿಜಿಟಲ್ ಚಟುವಟಿಕೆಗಳಿಂದ ದೂರವಾಗಲು ಸಹಾಯವಾಗುತ್ತದೆ. ಫೋನ್ ಸದಾ ಪಕ್ಕದಲ್ಲಿರುವುದರಿಂದ ತಮ್ಮ ನಿದ್ರೆಗೆ ಎಷ್ಟು ಅಡ್ಡಿಯಾಗುತ್ತಿದೆ ಎಂಬುದನ್ನು ಅನೇಕರು ಗಮನಿಸುವುದಿಲ್ಲ.

ರಾತ್ರಿ ಅನಗತ್ಯ ಸೂಚನೆಗಳನ್ನು ನಿಲ್ಲಿಸುವುದು, ಮೊಬೈಲ್‌ನಲ್ಲಿರುವ 'ಡೋಂಟ್ ಡಿಸ್ಟರ್ಬ್' (Do Not Disturb) ಆಯ್ಕೆಯನ್ನು ಬಳಸುವುದು ಅಥವಾ ಬೇರೆ ಕೋಣೆಯಲ್ಲಿ ಫೋನ್ ಚಾರ್ಜ್ ಮಾಡುವುದು ಸಹ ಪ್ರಯೋಜನಕಾರಿ.

ಅಲಾರಾಂಗಾಗಿ ಮೊಬೈಲ್ ಬಳಸುವವರು ಪ್ರತ್ಯೇಕ ಅಲಾರಾಂ ಗಡಿಯಾರವನ್ನು ಬಳಸುವ ಬಗ್ಗೆಯೂ ಯೋಚಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+