ಮಂಗಗಳಿಗೆ ಪಾಠ ಕಲಿಸಲು ಕರಡಿ ವೇಷ ಹಾಕುವ ವ್ಯಕ್ತಿ, ಇಲ್ಲಿದೆ ನೋಡಿ ವಿಚಿತ್ರ ಗೆಟಪ್ | Sircilla District
ಮಂಗಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ರೈತರು ತಮ್ಮ ಅರ್ಧ ಬೆಳೆಯನ್ನೇ ಈ ರೀತಿಯಾಗಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಇದರ ಜೊತೆಗೆ ಜನರ ಮೇಲೆ ಮಂಗಗಳ ದಾಳಿ ಬೇರೆ ಭಯ ಹುಟ್ಟಿಸುತ್ತಿದೆ. ಇದು ಒಂದು ಜಾಗದ ಸಮಸ್ಯೆ ಅಲ್ಲ, ಇಡೀ ಇಂಡಿಯಾದಲ್ಲಿ ಈ ರೀತಿಯ ಸಮಸ್ಯೆ ರೈತರನ್ನು ಕಾಡುತ್ತಲೇ ಇದೆ. ಅದರಲ್ಲೂ ತೋಟಗಾರಿಕಾ ಬೆಳೆಗಳು ಇದ್ದರೆ ಕಥೆ ಮುಗಿಯಿತು ಅಂತಾನೇ ಅರ್ಥ. ತೋಟಗಳಿಗೆ ಹಿಂದೆ & ಮುಂದೆ ಯೋಚನೆ ಮಾಡದೆ ದಾಳಿ ಮಾಡಿಬಿಡುತ್ತದೆ ಮಂಗಗಳ ಗುಂಪು. ಹೀಗಿದ್ದಾಗಲೇ ಇಲ್ಲೊಬ್ಬ ವ್ಯಕ್ತಿ ಕೋತಿಗಳನ್ನ ಓಡಿಸಲು & ರೈತರ ಬೆಳೆ ರಕ್ಷಣೆಗೆ ಏನು ಮಾಡಿದ್ದಾರೆ ಗೊತ್ತಾ?
ಕರ್ನಾಟಕದ ನೆರೆಯ ರಾಜ್ಯ ತೆಲಂಗಾಣದಲ್ಲಿ ಕೋತಿಗಳನ್ನು ಓಡಿಸಲು ವಿಚಿತ್ರ ಪ್ರಯೋಗವನ್ನು ಮಾಡಲಾಗಿದೆ. ಮಂಗಗಳ ಹಾವಳಿಗೆ ಬ್ರೇಕ್ ಹಾಕಲು & ಆ ಮೂಲಕ ರೈತರಿಗೆ ನೆಮ್ಮದಿ ನೀಡಲು ಖುದ್ದು ಗ್ರಾಮದ ಜನಪ್ರತಿನಿಧಿಯೇ ಅಖಾಡಕ್ಕೆ ಇಳಿದಿರುವ ವಿಶೇಷ ಘಟನೆ ಗಮನ ಸೆಳೆಯುತ್ತಿದೆ. ಗಂಭೀರಾವೇಪೇಟೆ ಮಂಡಲದ ನಾಗಂಪೇಟ ಗ್ರಾಮದ ಸರಪಂಚ್ ರಾಜಿರೆಡ್ಡಿ ಈ ರೀತಿ ವಿಚಿತ್ರವಾದ ಪ್ರಯೋಗಕ್ಕೆ ಕೈಹಾಕಿ, ಇಡೀ ಇಂಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸರಪಂಚ್ ರಾಜಿರೆಡ್ಡಿ ಮಾಡಿರುವ ಐಡಿಯಾ ಸಿಕ್ಕಾಪಟ್ಟೆ ಯಶಸ್ಸು ಕೂಡ ಕೊಟ್ಟಿದ್ದು, ಕೋತಿಗಳ ಹಾವಳಿಯಿಂದಲೇ ಮುಕ್ತಿ ನೀಡುತ್ತಿದೆಯಂತೆ.

ಕೋತಿಗಳಿಂದ ಸಿಕ್ಕಾಪಟ್ಟೆ ಕಿರಿಕ್!
ಗ್ರಾಮದಲ್ಲಿ ಕೋತಿಗಳು ಸಾಕಷ್ಟು ತೊಂದರೆ ಕೊಡುವುದು, ರೈತರು ಇದರಿಂದ ಸಮಸ್ಯೆ ಎದುರಿಸಿ ಪರದಾಡುತ್ತಿರುವ ರೀತಿ ನೋಡಿದ್ದ ರಾಜಿರೆಡ್ಡಿ ಪಕ್ಕಾ ಪ್ಲಾನ್ ಒಂದನ್ನ ಮಾಡಿದ್ದರು. ಮಂಗಗಳು ಬೆಳೆ ಹಾನಿ ಮಾಡುವ & ಮನೆಗಳಿಗೆ ನುಗ್ಗುವ ಬಗ್ಗೆ ಗ್ರಾಮಸ್ಥರಿಂದ ನಿರಂತರ ದೂರು ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕೆ ಗ್ರಾಮದ ಪ್ರಜೆಗಳು, ಪ್ರಮುಖವಾಗಿ ಮಕ್ಕಳು ಹಾಗೂ ಹಿರಿಯರು ಹೊರಗಡೆ ಹೋಗಲು ಹಿಂದೆ & ಮುಂದೆ ಯೋಚಿಸುವ ಪರಿಸ್ಥಿತಿ ಇತ್ತು. ಕೊನೆಗೆ ಇದನ್ನೆಲ್ಲಾ ನೋಡಿ, ನೋಡಿ ಮಹತ್ವದ ನಿರ್ಧಾರಕ್ಕೆ ಬಂದ ಸರಪಂಚ್ ರಾಜಿರೆಡ್ಡಿ, ತಾವೇ ಕರಡಿ ವೇಷ ಧರಿಸಿ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾದರು.
ಕಾಡಿಗೆ ಓಡಿ ಹೋದ ಮಂಗಗಳ ಗುಂಪು
ಕರಡಿ ರೀತಿ ವೇಷ ಧರಿಸಿ ಗ್ರಾಮದ ಬೀದಿಗಳು ಮತ್ತು ಹೊಲಗಳಲ್ಲಿ ಓಡಾಡುತ್ತಾ, ಮಂಗಗಳಿಗೆ ಭಯ ಹುಟ್ಟಿಸಲು ಶುರು ಮಾಡಿದ್ದರು. ಹೀಗೆ ಊರಿಗೆ ಕರಡಿ ಬಂದಿದೆ ಎಂಬಂತೆ ಭಾಸವಾಗಿ, ಕೋತಿಗಳ ಗ್ಯಾಂಗ್ ಪಕ್ಕದಲ್ಲೇ ಇರುವ ಕಾಡಿಗೆ ಓಡಿ ಹೋಗಲು ಶುರು ಮಾಡಿದೆ. ಈ ಮೂಲಕ ಹಳ್ಳಿಯಲ್ಲಿ ಇದ್ದ ದೊಡ್ಡ ಸಮಸ್ಯೆಗೆ, ಮಂಗಗಳ ಹಾವಳಿಗೆ ಬ್ರೇಕ್ ಬಿದ್ದಂತೆ ಆಗಿದೆ. ಹೀಗಾಗಿ ಈಗಲೂ ಇದೇ ರೀತಿ ಸರಪಂಚ್ ರಾಜಿರೆಡ್ಡಿ ಕರಡಿ ವೇಷ ಧರಿಸಿ ಕೋತಿಗಳನ್ನು ಊರಿಂದ ಕಾಡಿಗೆ ಓಡಿಸುತ್ತಿದ್ದಾರೆ.
ಈ ಮೂಲಕ ಗ್ರಾಮದ ಜನರ ಪಾಲಿಗೆ ರಾಜಿರೆಡ್ಡಿ ಹೀರೋ ಆಗಿದ್ದಾರೆ. ಆದರೆ ಇದು ತಾತ್ಕಾಲಿಕ ಪರಿಹಾರ ಆಗಿದ್ದು, ಮಂಗಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂಬುದು ಸ್ಥಳೀಯರ ಆಗ್ರಹ ಆಗಿದೆ. ಸರ್ಕಾರ ಈ ಕೂಡಲೇ ಇದನ್ನು ಗಮನಿಸಿ, ಸೂಕ್ತ ಪರಿಹಾರ ಒದಗಿಸಲಿ ಎಂದು ಜನರು ಮನವಿ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸರಪಂಚ್ ರಾಜಿರೆಡ್ಡಿ ಮಾಡುತ್ತಿರುವ ಈ ಕೆಲಸ ಇಡೀ ದೇಶದ ಗಮನ ಸೆಳೆಯುತ್ತಿದ್ದು, ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ ತಮ್ಮ ಊರಿನವರ ಯೋಗಕ್ಷೇಮಕ್ಕಾಗಿ ಇಷ್ಟು ಕಷ್ಟಪಡುತ್ತಿರುವ ಸರಪಂಚ್ ರಾಜಿರೆಡ್ಡಿ ಅವರಿಗೆ, ವ್ಯಾಪಕ ಬೆಂಬಲ ಕೂಡ ಇಡೀ ದೇಶಾದ್ಯಂತ ಇದೀಗ ವ್ಯಕ್ತವಾಗುತ್ತಿದೆ.












Click it and Unblock the Notifications