Shubanshu Shukla: ಶುಭಾಂಶು ಶುಕ್ಲಾಗೆ ಪ್ರೀತಿಯ ಸಂದೇಶ ಹಂಚಿಕೊಂಡ ಪತ್ನಿ... ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್!
Shubanshu Shukla: ಬಾಹ್ಯಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಶುಭಾಂಶು ಶುಕ್ಲಾ ಅವರಿಗೆ ಅವರ ಪತ್ನಿ ಕಾಮನಾ ಅವರು ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಕಾಮನಾ ಅವರು ಪೋಸ್ಟ್ ಹಂಚಿಕೊಂಡಿದ್ದು ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನೆಯಲ್ಲಿ ಮಾಡಿರುವ ಊಟ, ಕುಟುಂಬದವರೊಂದಿಗೆ ಮಾತು, ಭೂಮಿ ಮತ್ತು ಆಕಾಶದಾಚೆಯ ರೋಚಕ ವಿಷಯಗಳ ವಿನಿಮಯ ಸೇರಿ ಹಲವು ವಿಷಯಗಳು ಶುಭಾಂಶುಗೋಸ್ಕರ ಕಾಯುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಆಕ್ಸಿಯಂ- 4 ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಮೂವರು ಗಗನಯಾತ್ರಿಗಳು 18 ದಿನಗಳ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಮುಗಿಸಿ ಭೂಮಿಗೆ ಮರಳಿದ್ದಾರೆ. ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಶುಭಾಂಶು ಅವರು ಭಾರತಕ್ಕೆ ಮರಳಿ ಬರುವ ದಿನಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಶುಭಾಂಶು ಶುಕ್ಲಾ ಅವರ ಪತ್ನಿ ಕಾಮನಾ ಅವರು, ಶುಭಾಂಶು ಅವರು ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ನಮ್ಮ ತಕ್ಷಣದ ಆದ್ಯತೆ ಎಲ್ಲವೂ ಅವರು ಭೂಮಿಯ ಮೇಲೆ ಮೊದಲಿನಂತೆ ಹೊಂದಿಕೊಳ್ಳುವುದಕ್ಕೆ ಬೇಕಾಗುವ ಹಾಗೂ ಅದಕ್ಕೆ ಪೂರಕವಾದದ್ದನ್ನು ಖಚಿತಪಡಿಸಿಕೊಳ್ಳುವುದರ ಮೇಲೆಯೇ ಇದೆ. (ಸಾಮಾನ್ಯವಾಗಿ ಬಾಹ್ಯಾಕಾಶದಿಂದ ಬಂದ ಮೇಲೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ತುಸು ಸಮಯ ತೆಗೆದುಕೊಳ್ಳುತ್ತದೆ) ಈ ಅಮೋಘ ಪ್ರಯಾಣದ ಬಳಿಕ ಮತ್ತೆ ಅವರು ಕುಟುಂಬದೊಂದಿಗೆ ಸೇರುವುದು ಒಂದು ಸಂಭ್ರಮವಾಗಿದೆ. ಅವರು ಬಾಹ್ಯಾಕಾಶದಲ್ಲಿದ್ದ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸಿದ ಊಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ, ಈಗಾಗಲೇ ಅವರ ನೆಚ್ಚಿನ ಕೆಲವು ಪ್ರಮುಖ ಆಹಾರವನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ.
ಇದೀಗ ಶುಭಾಂಶು ಅವರು ಜುಲೈ 23ರವರಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಕೆಲವರಿಗೆ ಮಾತ್ರ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ಕೊಡಲಾಗಿದೆ.
ಶುಭಾಂಶು ಅವರು ಸಹ ಅಂತರಿಕ್ಷಯಾನದ ಬಳಿಕ ಕುಟುಂಬವನ್ನು ಭೇಟಿಯಾದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪ್ರಯಾಣ ಸವಾಲಿನದ್ದಾಗಿತ್ತು. ಭೂಮಿಗೆ ಹಿಂದಿರುಗಿದ ಮೇಲೆ ಕುಟುಂಬದವರನ್ನು ನನ್ನ ತೋಳುಗಳಲ್ಲಿ ಅಪ್ಪಿಕೊಂಡಾಗ ಮನೆಗೆ ಹಿಂದಿರುಗಿದ ಅನುಭವ ಆಗಿದೆ. ಬಾಹ್ಯಾಕಾಶ ಹಾರಾಟವು ಅದ್ಭುತವಾಗಿತ್ತು. ಆದರೆ ಬಹಳ ಸಮಯದ ನಂತರ ನಿಮ್ಮ ಪ್ರೀತಿಪಾತ್ರರನ್ನು ನೋಡುವುದು ಅಷ್ಟೇ ಅದ್ಭುತವೂ ಹೌದು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications