ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ
ನವದೆಹಲಿ, ನವೆಂಬರ್ 22: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಅಫ್ತಾಬ್ ಪೂನಾವಾಲಾಗೆ ಇನ್ನೂ ನಾಲ್ಕು ದಿನಗಳವರೆಗೆ ಪೊಲೀಸ್ ಕಸ್ಟಡಿಯನ್ನು ದೆಹಲಿ ನ್ಯಾಯಾಲಯ ವಿಸ್ತರಣೆ ಮಾಡಿದೆ.
27 ವರ್ಷದ ಶ್ರದ್ಧಾ ವಾಲ್ಕರ್ ಹತ್ಯೆಗೈದ ಅಫ್ತಾಬ್ ಪೂನಾವಾಲಾ ನಂತರ ಶ್ರದ್ಧಾ ದೇಹವನ್ನು 35ಕ್ಕೂ ಹೆಚ್ಚು ಭಾಗಗಳಾಗಿ ಕತ್ತರಿಸಿ ಎರಡು ಮೂರು ತಿಂಗಳಿನಿಂದ ನಗರದ ಹಲವಾರು ಪ್ರದೇಶಗಳಲ್ಲಿ ಎಸೆದು ಬಂದಿದ್ದ ಎಂದು ಆರೋಪಿಸಲಾಗಿದೆ. ಪೂನಾವಾಲಾನನ್ನು ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಯಿತು ಎಂದು ಅವರ ವಕೀಲರು ಹೇಳಿದ್ದಾರೆ. ಪೂನಾವಾಲಾ ಅವರ ಸುರಕ್ಷತೆಯನ್ನು ಪರಿಗಣಿಸಿ ನಿಗದಿತ ಸಮಯಕ್ಕಿಂತ ಮುಂಚೆಯೇ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರು ಪೂನಾವಾಲಾನನ್ನು ವಿಚಾರಣೆಯ ಸಮಯದಲ್ಲಿ ಕೆಟ್ಟದಾಗಿ ನಡೆಸಿಕೊಂಡಿದ್ದೀರಾ ಅಥವಾ ಯಾವುದೇ ಸಮಸ್ಯೆಗಳಿವೆಯೇ ಎಂದು ಕೇಳಿದರು. ಅದಕ್ಕೆ ಪೂನಾವಾಲಾ ತನಗೆ ಯಾವುದೇ ಸಮಸ್ಯೆಗಳಿಲ್ಲ ಹಾಗೂ ತನಿಖೆಗೆ ತಾನು ಸಂಪೂರ್ಣವಾಗಿ ಸಹಕರಿಸುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಪೊಲೀಸರು ಹೊಡೆದಿದ್ದರಿಂದ ಅವರು ಪ್ರಚೋದನೆಗೆ ಒಳಗಾಗಿದ್ದರು ಎಂದು ಪೂನಾವಾಲಾ ಅವರ ವಕೀಲ ಅವಿನಾಶ್ ಕುಮಾರ್ ಹೇಳಿದರು.

ವಿಚಾರಣೆಯ ಸಂದರ್ಭದಲ್ಲಿ ಅಫ್ತಾಬ್ ಪೂನಾವಾಲಾ ನ್ಯಾಯಾಲಯಕ್ಕೆ ತಾವು ಅಥವಾ ಅವರ ಕುಟುಂಬದವರು ಖಾಸಗಿ ವಕೀಲರನ್ನು ನೇಮಿಸಿಸಿಕೊಂಡಿಲ್ಲ. ಈಗ ಕಾನೂನು ಸಲಹೆಗಾರರಿಂದ ನೆರವು ಸಿಕ್ಕಿರುವುದು ಸಂತೋಷವಾಗಿದೆ ಎಂದು ಹೇಳಿದರು. ಪೊಲೀಸ್ ಈಗಾಗಲೇ 10 ದಿನಗಳ ಕಸ್ಟಡಿಯನ್ನು ತೆಗೆದುಕೊಳ್ಳಲಾಗಿದೆ. ಈಗ ತನಿಖೆಗೆ ಇನ್ನೂ ಎರಡು ದಿನ ಸಾಕು ಎಂದು ವಕೀಲ ಅವಿನಾಶ್ ಕುಮಾರ್ ಹೇಳಿದರು.
ಅಫ್ತಾಬ್ ಪೂನಾವಾಲಾ ಬಂಧನ ಮಾಡಿದ ಮೇಲೆ ಅರಣ್ಯ ಪ್ರದೇಶದಿಂದ ಮೃತ ಶ್ರದ್ಧಾಳ ದವಡೆಗಳು ಸೇರಿದಂತೆ ಇನ್ನೂ ಕೆಲವು ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಆತನನ್ನು ತನಿಖೆಗಾಗಿ ಹೆಚ್ಚಿನ ಸ್ಥಳಗಳಿಗೆ ಕರೆದೊಯ್ಯಲು ಹಾಗೂ ಈ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ಬಯಸಿದ್ದರು. ಅವರ ತನಿಖೆ ನಿರ್ಣಾಯಕ ಹಂತದಲ್ಲಿದೆ. ಆದ್ದರಿಂದ ನ್ಯಾಯಾಲಯವು ನಾಲ್ಕು ದಿನಗಳ ಹೆಚ್ಚಿನ ಕಸ್ಟಡಿಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.












Click it and Unblock the Notifications