ರಾಷ್ಟ್ರ ನಾಯಕರ ಬಯೋಪಿಕ್ ಬಿಡುಗಡೆಗೆ ಅವಕಾಶ ನೀಡಬೇಕೆ?
ನವದೆಹಲಿ, ಮಾರ್ಚ್ 16 : ಲೋಕಸಭೆ ಚುನಾವಣೆ ಆರಂಭವಾಗುವ ಮುನ್ನವೇ ಎರಡು ಬಯೋಪಿಕ್ ಗಳು ಭಾರತದಾದ್ಯಂತ ಸಂಚಲನವೆಬ್ಬಿಸಲಿವೆ. ಒಂದು ನರೇಂದ್ರ ಮೋದಿಯವರ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ' ಮತ್ತು ರಾಹುಲ್ ಗಾಂಧಿ ಅವರ ಜೀವನಾಧಾರಿತ 'ಮೈ ನೇಮ್ ಈಸ್ ರಾಗಾ'.
ಈಗ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡಲಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಎರಡೂ ಬಯೋಪಿಕ್ ಗಳನ್ನು ಬಿಡುಗಡೆ ಮಾಡಬಹುದಾ ಎಂಬ ಪ್ರಶ್ನೆ ಉದ್ಭವವಾಗಿದೆ. ಮೋದಿಯವರ ಚಿತ್ರ ಏಪ್ರಿಲ್ 12ರಂದು ಬಿಡುಗಡೆಯಾಗಲಿದ್ದರೆ, ರಾಹುಲ್ ಅವರ ಚಿತ್ರ ಕೂಡ ಏಪ್ರಿಲ್ ನಲ್ಲಿಯೇ ತೆರೆ ಕಾಣಲಿದೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಈಗಾಗಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ನರೇಂದ್ರ ಮೋದಿಯವರ ಚಿತ್ರ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಮೋದಿಯವರ ಚಿತ್ರ ಚುನಾವಣೆಯ ಮೇಲೆ ಪರಿಣಾಮ ಬೀರುವುದಾದರೆ, ರಾಹುಲ್ ಅವರ ಚಿತ್ರ ಕೂಡ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲವೆ? ಈ ಪ್ರಶ್ನೆಗೆ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಏನು ಉತ್ತರಿಸುತ್ತದೆ?

ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಈ ಎರಡೂ ಬಯೋಪಿಕ್ ಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮೊದಲು ಅವರು ನರೇಂದ್ರ ಮೋದಿಯವರ ಬಯೋಪಿಕ್ ಬಗ್ಗೆ ಪ್ರಶ್ನಿಸಿದ್ದು, ಇಂದಿರಾ ಗಾಂಧಿ ನಂತರ ಯಾವ ಪ್ರಧಾನಿಯೂ ತನ್ನ ವ್ಯಕ್ತಿತ್ವವನ್ನು ಈ ರೀತಿ ನಾಚಿಕೆಯಿಲ್ಲದೆ ಬಿಂಬಿಸಿಕೊಂಡಿರಲಿಲ್ಲ. ಇದನ್ನು ಹೀಗೆಯೇ ಬಿಟ್ಟರೆ ಭಾರತದ ಪ್ರಜಾಪ್ರಭುತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಇಂಥ ಚಿತ್ರ ಬಿಡುಗಡೆ ಮಾಡುತ್ತಿರುವುದು ಒಂದು ಜೋಕ್ ಮತ್ತು ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಆಶೋತ್ತರಗಳನ್ನು ಅಪಹಾಸ್ಯ ಮಾಡಿದಂತೆ. ಒಂದು ವೇಳೆ ಕೇಂದ್ರ ಚುನಾವಣಾ ಆಯೋಗ ಕಣ್ಣಿದ್ದೂ ಕುರುಡುತನ ತೋರಿಸಿದರೂ, ಸರ್ವೋಚ್ಚ ನ್ಯಾಯಾಲಯ ಈ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಮಚಂದ್ರ ಗುಹಾ ಅವರು ಟ್ವೀಟಿಸಿದ್ದಾರೆ.
ಜೊತೆಗೆ, ರಾಹುಲ್ ಗಾಂಧಿ ಅವರ ಜೀವನಾಧಾರಿತ ಚಿತ್ರದ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿಯೇ ಮತ್ತೊಬ್ಬ ಪ್ರಮುಖ ರಾಜಕಾರಣಿಯ ಬಗ್ಗೆ ಭಟ್ಟಂಗಿತನದ ಬಯೋಪಿಕ್ ಬಿಡುಗಡೆಯಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಅಪಹಾಸ್ಯವಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ಇವೆರಡು ಬಯೋಪಿಕ್ ಗಳನ್ನು ಬಿಡುಗಡೆ ಮಾಡಲು ಕೇಂದ್ರ ಚುನಾವಣೆ ಆಯೋಗವಾಗಲಿ, ಸರ್ವೋಚ್ಚ ನ್ಯಾಯಾಲಯವಾಗಲಿ ಅವಕಾಶ ಮಾಡಿಕೊಡಬೇಕೆ? ಒಂದು ವೇಳೆ ಇವರೆಡಕ್ಕೂ ಅವಕಾಶ ಮಾಡಿಕೊಟ್ಟರೆ ಬೇರೆ ನಾಯಕರ ಬಯೋಪಿಕ್ ಗಳೂ ಬರುವುದಿಲ್ಲವೆಂದು ಏನು ಖಾತ್ರಿ? ಜನರು ಬೇಕಿದ್ದರೆ ಎರಡೂ ಚಿತ್ರಗಳನ್ನು ನೋಡಲಿ, ನಂತರ ಯಾವ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಅವರೇ ನಿರ್ಧರಿಸಲಿ ಎಂದು ಟ್ವಿಟ್ಟಿಗರು ವಾದಿಸುತ್ತಿದ್ದಾರೆ.












Click it and Unblock the Notifications