
Breaking: ಅಮೃತಸರದಲ್ಲಿ ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ
ಅಮೃತಸರ ನವೆಂಬರ್ 4: ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅಮೃತಸರ ನಗರದ ದೇವಸ್ಥಾನದ ಹೊರಭಾಗದಲ್ಲಿ ಈ ಘಟನೆ ನಡೆದಿದೆ.
ಶಿವಸೇನೆ ಮುಖಂಡರು ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಪಿನಿಂದ ಯಾರೋ ಬಂದು ಸೂರಿಗೆ ಗುಂಡು ಹಾರಿಸಿದ್ದಾರೆ. ಘಟನೆ ಬಳಿಕ ಸುಧೀರ್ ಸೂರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಾಲಯದ ಆವರಣದ ಹೊರಗೆ ಕಸದ ಬುಟ್ಟಿಯಲ್ಲಿ ಕೆಲವು ಒಡೆದ ವಿಗ್ರಹಗಳು ಪತ್ತೆಯಾಗಿದ್ದವು. ಇದರಿಂದ ಕೋಪಗೊಂಡ ಶಿವಸೇನಾ ಮುಖಂಡರು ದೇವಾಲಯದ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.
ಪ್ರತಿಭಟನೆ ವೇಳೆ ಅಪರಿಚಿತರು ಸೂರಿ ಮೇಲೆ ಗುಂಡು ಹಾರಿಸಿದ್ದಾರೆ. ಅವರ ಕೆಲವು ಬೆಂಬಲಿಗರು ಅವರತ್ತ ಓಡಿಹೋಗುತ್ತಿದ್ದಂತೆ, ಇತರರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.
ಈ ವರ್ಷದ ಜುಲೈನಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆರೋಪದ ಮೇಲೆ ಸೂರಿ ಅವರನ್ನು ಬಂಧಿಸಲಾಗಿತ್ತು.
ಆ ಬಳಿಕ ಸೂರಿ ಸುದ್ದಿಯಲ್ಲಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ತಮ್ಮ ಕೆಲವು ಸಹಚರರೊಂದಿಗೆ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಹೇಳುವುದನ್ನು ಕೇಳಬಹುದು. ಬಂಧನದ ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ದರು.