ಶಿವಸೇನೆ ಚಿಹ್ನೆ ವಿವಾದ: ಉದ್ಧವ್ ಠಾಕ್ರೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು!
EC ಆದೇಶವನ್ನು ತಡೆಯಲು ಉದ್ಧವ್ ಠಾಕ್ರೆ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 22 ಕ್ಕೆ ವಿಚಾರಣೆಗೆ ನಿರ್ಧರಿಸಿದೆ.
ಏಕನಾಥ್ ಶಿಂಧೆ ಬಣವೇ ನಿಜವಾದ 'ಶಿವಸೇನೆ' ಹೀಗಾಗಿ 'ಬಿಲ್ಲು ಮತ್ತು ಬಾಣ' ಚಿಹ್ನೆ ಏಕನಾಥ್ ಶಿಂಧೆ ಬಣಕ್ಕೆ ಸೇರಿದ್ದು ಎಂದ ಭಾರತದ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಸ್ತು ಎಂದಿದೆ. ಫೆಬ್ರವರಿ 22 ರಂದು ಸಂಜೆ 3.30ಕ್ಕೆ ಅರ್ಜಿ ವಿಚಾರಣೆಗೆ ಪಟ್ಟಿಮಾಡಿದೆ.
ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಮಂಗಳವಾರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಪಿ ಎಸ್ ನರಸಿಂಹ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಇಂದು (ಫೆಬ್ರವರಿ 21) ಭಾರತದ ಮುಖ್ಯ ನ್ಯಾಯಮೂರ್ತಿ (CJI) D.Y ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಠಾಕ್ರೆ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಫೆಬ್ರವರಿ 17 ರ ಚುನಾವಣಾ ಆಯೋಗದ ಆದೇಶಕ್ಕೆ ತಡೆ ಕೋರಿದರು.
ಚುನಾವಣಾ ಆಯೋಗದ ಆದೇಶವನ್ನು ತಡೆಹಿಡಿಯದಿದ್ದರೆ, ಅವರು ಚಿಹ್ನೆ ಮತ್ತು ಬ್ಯಾಂಕ್ ಖಾತೆಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ದಯವಿಟ್ಟು ಅದನ್ನು ಸಂವಿಧಾನ ಪೀಠದ ಮುಂದೆ ನಾಳೆ ಪಟ್ಟಿ ಮಾಡಿ ಎಂದು ಸಿಬಲ್ ಮನವಿ ಮಾಡಿದರು. ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.

ಬಂಡಾಯ ಶಾಸಕರಿಂದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಕಾರಣರಾದ ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿದ ಶಿಂಧೆ-ಠಾಕ್ರೆ ವಿವಾದವನ್ನು ಆಲಿಸಿದ ಚಂದ್ರಚೂಡ್ ನೇತೃತ್ವದ ಪೀಠ ಪ್ರಕರಣವನ್ನು ಫೆಬ್ರವರಿ 22 ರಂದು ಪಟ್ಟಿ ಮಾಡಿದೆ. ಅರ್ಜಿಯನ್ನು ಓದಲು ನಮಗೆ ಸ್ವಲ್ಪ ಸಮಯ ಬೇಕು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಬಲ್ ಮತ್ತು ಸಿಂಘ್ವಿ ಅವರಿಗೆ ತಿಳಿಸಿದರು.
ತಮ್ಮ ಮನವಿಯಲ್ಲಿ ಉದ್ಧವ್ ಠಾಕ್ರೆ ಚುನಾವಣಾ ಆಯೋಗವು (EC) ಅನ್ಯಾಯ, ಪಕ್ಷಪಾತ ಮಾಡಿದೆ ಎಂದು ಹೇಳಿದರು.

ಕಳೆದ ಶುಕ್ರವಾರ ಚುನಾವಣಾ ಆಯೋಗವು ಏಕನಾಥ್ ಶಿಂಧೆ ನೇತೃತ್ವದ ಬಣ ನಿಜವಾದ ಶಿವಸೇನೆ ಎಂದು ಘೋಷಿಸಿ, ಅದಕ್ಕೆ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ನೀಡಿ ಆದೇಶಿಸಿತ್ತು. ಚುನಾವಣಾ ಆಯೋಗದ ಈ ಆದೇಶ 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದಿದ್ದ ಉದ್ಧವ್ ಠಾಕ್ರೆ ಅವರು, ಇಸಿ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು.












Click it and Unblock the Notifications