ಅವಳನ್ನು ಬಿಟ್ಟು ಇವಳನ್ನು ಮದುವೆಯಾಗ ಬಯಸಿದ್ದ ಶಶಿ
ನವದೆಹಲಿ, ಜು.23: ಸುನಂದಾ ಪುಷ್ಕರ್ ನಿಗೂಢ ಸಾವಿನ ಸುತ್ತಾ ಅನುಮಾನ ಹುತ್ತ ಬೆಳೆಯುತ್ತಿದ್ದರೆ, ಇತ್ತ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸುನಂದಾ ಪುಷ್ಕರ್‌ಗೆ ವಿಚ್ಚೇದನ ನೀಡಿ ಇನ್ನೊಂದು ಮದುವೆಗೆ ಮುಂದಾಗಿದ್ದರು ಎನ್ನುವ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ತರೂರ್ ಲೋಕಸಭಾ ಚುನಾವಣೆಯ ಬಳಿಕ ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಜೊತೆ ಮದುವೆಯಾಗಲು ನಿರ್ಧರಿಸಿದ್ದರು ಎಂದು ಎಬಿಪಿ ನ್ಯೂಸ್ ವಾಹಿನಿ ವರದಿ ಮಾಡಿದೆ.[ಸುನಂದಾ ಸಾವು:ಕೇಸ್‌ನಲ್ಲಿ ಸೋನಿಯಾ ಅಳಿಯನ ಹೆಸರು!]
ಸುನಂದಾ ಪುಷ್ಕರ್ ಅಸಹಜ ಸಾವಿನ ತನಿಖಾ ವರದಿಯ ಕೆಲ ಅಂಶಗಳನ್ನು ಎಬಿಪಿ ನ್ಯೂಸ್ ಬಹಿರಂಗ ಪಡಿಸಿದ್ದು, ಶಶಿ ತರೂರ್ ಸುನಂದಾಗೆ ವಿಚ್ಚೇದನ ನೀಡಿ ಮೆಹರ್ ತರಾರ್ ಮದುವೆಗೆ ಸಿದ್ದತೆ ನಡೆಸಿದ್ದರು ಎಂದು ತನಿಖಾ ಅಧಿಕಾರಿಗಳಿಗೆ ಸುನಂದಾ ಗೆಳತಿ ನಳಿನಿ ಸಿಂಗ್ ಹೇಳಿದ್ದಾರೆ ಎಂದು ವರದಿ ಮಾಡಿದೆ.

ತನಿಖಾಧಿಕಾರಿಗಳು ಶಶಿ ತರೂರ್ ಮನೆಯ ಕೆಲಸ ಮಾಡುವ ವ್ಯಕ್ತಿಯನ್ನು ವಿಚಾರಿಸಿದ್ದು ಈ ಸಂದರ್ಭದಲ್ಲಿ ಆತ, ತರೂರ್ ಮತ್ತು ಸುನಂದಾ ಇಬ್ಬರ ಮಧ್ಯೆ ಒಬ್ಬ ಮಹಿಳೆಯ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನುವ ಮಾಹಿತಿಯನ್ನೂ ನೀಡಿದ್ದಾನೆ ಎಂದು ವರದಿ ಮಾಡಿದೆ.[ಸುನಂದಾ ಪುಷ್ಕರ್ ಪಾಕ್ ಪತ್ರಕರ್ತೆ ಮೆಹರ್ ಟ್ವಿಟ್ಟರ್ ವಾರ್]
ಹೊಸ ವರದಿ ಬಗ್ಗೆ ಶಶಿ ತರೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜನವರಿ 17ರಂದು ಸುನಂದಾ ಪುಷ್ಕರ್ ಸಾವಿಗೀಡಾಗಿದ್ದು, ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications