Get Updates
Get notified of breaking news, exclusive insights, and must-see stories!

ಸಿಪಿಐ ಹಿರಿಯ ನಾಯಕ ಆರ್.ನಲ್ಲಕಣ್ಣು ಇನ್ನಿಲ್ಲ: ರೈತರು, ಕಾರ್ಮಿಕರು ಪರ ಹೋರಾಟ, 1 ಕೋಟಿ ರೂ. ಹಿಂದಿರುಗಿಸಿದ್ದರು

R Nallakannu: ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ತಮಿಳುನಾಡಿನ ನಾಯಕ ಆರ್.ನಲ್ಲಕಣ್ಣು ಮೃತಪಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಆರ್ ನಲ್ಲಕಣ್ಣು ಅವರು, ಬುಧವಾರ ತಮ್ಮ 101ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ರಾಜಕೀಯದಲ್ಲಿ ಸಿದ್ಧಾಂತ ಬದ್ಧತೆ ಹಾಗೂ ಬಡವರ ಪರವಾಗಿದ್ದ ಅವರು ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಅಚಲ ಜಾತ್ಯತೀತ ನಂಬಿಕೆಗಳು ಮತ್ತು ಭೂಹೀನ ಕಾರ್ಮಿಕರು, ರೈತರು ಮತ್ತು ಅಳವಿನಂಚಿನಲ್ಲಿರುವ ಸಮುದಾಯಗಳ ಪರವಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಹೋರಾಟಗಳಲ್ಲಿ ಭಾಗಿಯಾಗಿದ್ದ ನಲ್ಲಕಣ್ಣು ಅವರು ಧೀಮಂತ ರಾಜಕೀಯ ನಾಯಕರಾಗಿದ್ದರು.

ಸಿಪಿಐ ಹಿರಿಯ ನಾಯಕ ಆರ್.ನಲ್ಲಕಣ್ಣು ಹಿನ್ನೆಲೆ

ಡಿಸೆಂಬರ್ 26, 1925 ರಂದು ತಮಿಳುನಾಡಿನ ತೂತುಕುಡಿ ಬಳಿಯ ಶ್ರೀವೈಕುಂಠಂನಲ್ಲಿ ರಾಮಸಾಮಿ ಮತ್ತು ಕರುಪ್ಪಾಯಿ ಅಮ್ಮಾಳ್ ದಂಪತಿಗೆ ಜನಿಸಿದ ನಲ್ಲಕಣ್ಣು ಅವರು, ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಬೆಳೆದರು. ಭಾರತದ ಸ್ವಾತಂತ್ರ್ಯ ಚಳವಳಿಯು ವೇಗವನ್ನು ಪಡೆಯುತ್ತಿದ್ದಾಗ ಶ್ರೀವೈಕುಂಠಂನ ಕಾರ್ನೇಷನ್ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡುವಾಗಲೇ ಹೋರಾಟಕ್ಕೆ ಧುಮುಕಿದ್ದರು. ವಿದ್ಯಾರ್ಥಿಯಾಗಿ ಅವರು ಹತ್ತಿರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

Senior CPI Leader R Nallakannu Passes Away at 101 Champion of Farmers and Workers Returned 1 Crore Donation

ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಆರ್. ನಲ್ಲಕಣ್ಣು 101 ನೇ ವಯಸ್ಸಿನಲ್ಲಿ ನಿಧನರಾದರು. ಅವರು 1992 ರಿಂದ 2005 ರವರೆಗೆ ತಮಿಳುನಾಡಿನಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಮಹಾತ್ಮ ಗಾಂಧಿಯವರ ವಿಚಾರಗಳಿಂದ ಪ್ರೇರಿತರಾದ ನಲ್ಲಕಣ್ಣು ಅವರ ರಾಜಕೀಯವು ನಂತರ ಅವರ ಶಿಕ್ಷಕ ಪಲ್ಲವೇಸಂ ಅವರ ಬರಹಗಳಿಗೆ ಪರಿಚಯಿಸಲ್ಪಟ್ಟ ಎಡಪಂಥೀಯ ಮಾರ್ಗದಲ್ಲಿ ಸಾಗಿತು. ನಲ್ಲಕಣ್ಣು ಅವರು ಇದಾದ ನಂತರ ಮಾರ್ಕ್ಸ್ವಾದಲ್ಲಿ ಒಲವು ಬೆಳೆಸಿಕೊಂಡರು. ಎರಡನೇ ಮಹಾಯುದ್ಧದ ಸಮಯದಲ್ಲಿ ಸೃಷ್ಟಿಯಾದ ಆಹಾರದ ಕೊರತೆಯ ಸಮಯದಲ್ಲಿ ಶ್ರೀವೈಕುಂಠಂ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೇರೂರಿರುವ ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿದ್ದರು.

ಈ ಸಂದರ್ಭದಲ್ಲಿ ಕೃತಕ ಆಹಾರ ಅಭಾವ ಸೃಷ್ಟಿ ಮಾಡುತ್ತಿದ್ದವರ ವಿರುದ್ಧ ನಲ್ಲಕಣ್ಣು ಅವರು ಭಾರೀ ಹೋರಾಟ ಮಾಡಿದ್ದರು. ಶ್ರೀವೈಕುಂಠಂನಲ್ಲಿರುವ ಕೋಟೆಯ ಕಣಜದೊಳಗೆ ಸಂಗ್ರಹಿಸಲಾಗಿದ್ದ ಭತ್ತದ ದೊಡ್ಡ ಸಂಗ್ರಹವನ್ನು ಬಹಿರಂಗಪಡಿಸಿದ್ದರು. ಅವರ ದೂರಿನ ನಂತರ ಅಧಿಕಾರಿಗಳು ಸುಮಾರು 2,000 ಚೀಲ ಅಕ್ಕಿಯನ್ನು ವಶಪಡಿಸಿಕೊಂಡರು, ಇದೊಂದು ಮಹತ್ವದ ಹೋರಾಟವಾಗಿತ್ತು.

ಇನ್ನು 1943ರಲ್ಲಿ ತಿರುನಲ್ವೇಲಿ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ, ನಲ್ಲಕಣ್ಣು ಔಪಚಾರಿಕವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ಅವರು ಶೀಘ್ರದಲ್ಲೇ ಆಗಿನ ಅವಿಭಜಿತ ತಿರುನಲ್ವೇಲಿ ಜಿಲ್ಲೆಯಾದ್ಯಂತ ಭೂಹೀನ ಕೃಷಿ ಕಾರ್ಮಿಕರ ಪ್ರಮುಖ ಸಂಘಟಕರಾದರು, ಕೃಷಿ ಕಾರ್ಮಿಕರ ಸಂಘವನ್ನು ಸಾಮೂಹಿಕ ಪ್ರತಿರೋಧದ ವೇದಿಕೆಯ ಭಾಗವಾಗಿದ್ದರು.

ಮುಂದುವರಿದು ದೊಡ್ಡ ಭೂಮಾಲೀಕರು ಹಾಗೂ ವಿಶಾಲವಾದ ಭೂಮಿ ಹೊಂದಿರುವ ಅಥವಾ ಭೂ ಒಡೆತನದಾರರನ್ನು ನಿಯಂತ್ರಿಸುವ ಸಂಸ್ಥೆಗಳ ವಿರುದ್ಧ ಹೋರಾಟಗಳನ್ನು ನಡೆಸಿದರು. ಸುರಕ್ಷಿತ ವಸತಿ ಹಕ್ಕುಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಬಾಡಿಗೆದಾರ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದರು. ನಿರಂತರ ಹೋರಾಟದ ನಂತರ ಅವರು ಕಾರ್ಮಿಕ ಕುಟುಂಬಗಳು ಶಾಶ್ವತ ವಾಸಸ್ಥಳ ಹಕ್ಕುಗಳನ್ನು ಪಡೆದುಕೊಳ್ಳಲು ಸಹಕಾರಿಯಾಯಿತು.

ಯುವ ಕಾರ್ಯಕರ್ತನಾಗಿದ್ದಾಗಲೂ, ನಲ್ಲಕಣ್ಣು ಅವರು ಜಾತಿ ತಾರತಮ್ಯದ ವಿರುದ್ಧ ನಿಲುವು ತೆಗೆದುಕೊಂಡರು. ಶ್ರೀವೈಕುಂಠಂನಲ್ಲಿ ನಡೆದ ಯುದ್ಧಕಾಲದ ಆಹಾರ ಸಮಿತಿ ಸಭೆಗಳಲ್ಲಿ, ಪ್ರಬಲ ಜಾತಿಯ ಭೂಮಾಲೀಕರು ದಲಿತ ಸದಸ್ಯರನ್ನು ಹೊರಗಿಟ್ಟಾಗ, ಅವರು ವೈಯಕ್ತಿಕವಾಗಿ ಆ ವ್ಯಕ್ತಿಯನ್ನು ಅಧಿವೇಶನಕ್ಕೆ ಕರೆದೊಯ್ದರು ಮತ್ತು ಸಮಾನ ಆಸನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಈ ನಡೆಯು ಭೂಮಾಲೀಕರಿಂದ ಬಹಿಷ್ಕಾರಕ್ಕೆ ಕಾರಣವಾಯಿತು.

ಸಶಸ್ತ್ರ ಹೋರಾಟಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ 1948ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದಾಗ, ನಲ್ಲಕಣ್ಣು ಭೂಗತರಾಗಿದ್ದರು. ಡಿಸೆಂಬರ್ 20, 1949 ರಂದು ನಂಗುನೇರಿಯ ಪುಲಿಯೂರ್ಕುರಿಚಿ ಗ್ರಾಮದಲ್ಲಿ ಅವರನ್ನು ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಜೈಲುವಾಸ, ಕಸ್ಟಡಿ ಹಿಂಸಾಚಾರದ ನೋವು ಅನುಭವಿಸಬೇಕಾಯಿತು.

ಮುಂದುವರಿದು ತಮಿಳುನಾಡಿನ ಮಧುರೈ ಕೇಂದ್ರ ಕಾರಾಗೃಹದಲ್ಲಿದ್ದಾಗ ಅವರಿಗೆ ಕೈದಿ ಸಂಖ್ಯೆ 9658 ನೀಡಲಾಗಿತ್ತು. ಆಗಲೂ ಅವರು ಜೈಲು ಕಾವಲುಗಾರರ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು ಮತ್ತು ಕೈದಿಗಳಿಗೆ ಉತ್ತಮ ಆಹಾರ, ವಸತಿ ಸೌಲಭ್ಯ ಕಲ್ಪಿಸುವುದಕ್ಕೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಜೈಲು ಕೈದಿಯಾಗಿ ಗ್ರಂಥಾಲಯದ ಉಸ್ತುವಾರಿ ವಹಿಸಿಕೊಂಡಿದ್ದ ಅವರು, ಶಿಕ್ಷಣವನ್ನು ಪ್ರತಿರೋಧದ ಸಾಧನವಾಗಿ ಬಳಸಿಕೊಂಡರು. ಹಲವಾರು ಕೈದಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುವಂತೆ ಮಾಡಿದರು. ಅಧ್ಯಯನ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಏಳು ವರ್ಷಗಳ ಕಾಲ ಜೈಲುಗಳಲ್ಲಿ ಕಳೆದ ನಂತರ ಅವರು ಡಿಸೆಂಬರ್ 1956 ರಲ್ಲಿ ಬಿಡುಗಡೆಯಾದರು.

1958 ರಲ್ಲಿ ಅವರು ಜಾತಿ ವಿರೋಧಿ ಕಾರ್ಯಕರ್ತ ಅಣ್ಣಾಚಾಮಿ ಅವರ ಪುತ್ರಿ ರಂಜಿತಮ್ ಅವರನ್ನು ವಿವಾಹವಾದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದಲ್ಲಿ ನಾಯಕರಾದರು. ಭೂ ಹಕ್ಕುಗಳು, ವೇತನ ಮತ್ತು ಪರಿಸರ ಕಾಳಜಿಗಳ ಕುರಿತು ಆಂದೋಲನಗಳನ್ನು ಮುನ್ನಡೆಸಿದರು.

1992 ರಿಂದ 2005 ರವರೆಗೆ ನಲ್ಲಕಣ್ಣು ಅವರು ತಮಿಳುನಾಡಿನಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾರ್ಮಿಕರು, ರೈತರು ಸೇರಿದಂತೆ ಹಿಂದುಳಿದ ಸಮುದಾಯಗಳ ಪರವಾಗಿ ಹೋರಾಟ ಮಾಡಿದರು. 2010ರಲ್ಲಿ ಅವರು ತಮಿರಬರಾಣಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ಮನವಿ ಸಲ್ಲಿಸಿದ್ದರು, ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಿದರು ಮತ್ತು ಅಲ್ಲಿ ಮರಳು ಗಣಿಗಾರಿಕೆಯ ಮೇಲೆ ನ್ಯಾಯಾಂಗ ನಿಷೇಧವನ್ನು ಹೇರುವಂತೆ ಮಾಡಿದರು.

ಹಲವು ವರ್ಷಗಳ ಕಾಲ, ನಲ್ಲಕಣ್ಣು ಅವರು ತಮಿಳುನಾಡಿನ ವಸತಿ ಮಂಡಳಿಯಲ್ಲಿ ಚೆನ್ನೈನ ಸಿಐಟಿ ನಗರದಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನಂತರ ಆವರಣವನ್ನು ಕೆಡವಿದ ನಂತರ ಮತ್ತೊಂದು ಬಾಡಿಗೆ ಮನೆಯಲ್ಲಿದ್ದರು. ಪ್ರಮುಖ ಹೋರಾಟಗಳನ್ನು ಮುನ್ನಡೆಸಿದರೂ, ಅವರು ಆಸ್ತಿಯನ್ನು ಸಂಪಾದಿಸಲಿಲ್ಲ ಮತ್ತು ಅವರ ಜೀವನದುದ್ದಕ್ಕೂ ಬಾಡಿಗೆ ಮನೆಗಳಲ್ಲೇ ಜೀವನ ಕಳೆದರು.

80ನೇ ಹುಟ್ಟುಹಬ್ಬದಂದು ಸಿಪಿಐ ಬೆಂಬಲಿಗರು 1 ಕೋಟಿ ರೂಪಾಯಿ ಮೊತ್ತದ ಹಣವನ್ನು ಸಂಗ್ರಹಿಸಿ ಅವರಿಗೆ ಅರ್ಪಿಸಿದರು, ಅದನ್ನು ಅವರು ಪಕ್ಷಕ್ಕೆ ಮರಳಿದರು. 1 ಲಕ್ಷ ರೂ. ಮೊತ್ತದ ಅಂಬೇಡ್ಕರ್ ಪ್ರಶಸ್ತಿಯನ್ನು ಪಡೆದ ನಂತರ, ಅವರು ಆ ಮೊತ್ತವನ್ನು ಸಿಪಿಐ ಮತ್ತು ಕೃಷಿ ಕಾರ್ಮಿಕರ ಸಂಘಗಳ ನಡುವೆ ಸಮಾನವಾಗಿ ಹಂಚಿಕೊಂಡರು. 2022 ರಲ್ಲಿ 10 ಲಕ್ಷ ಹಣದೊಂದಿಗೆ ತಗೈಸಲ್ ತಮಿಳರ್ ಪ್ರಶಸ್ತಿಯನ್ನು ಪಡೆದ ನಂತರ, ಅವರು ವೈಯಕ್ತಿಕ ಹಣದಿಂದ 5,000 ರೂ. ಸೇರಿಸಿ ಸಂಪೂರ್ಣ ಮೊತ್ತವನ್ನು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

ಅವರ ನಿಧನದೊಂದಿಗೆ, ತಮಿಳುನಾಡಿನ ಕಮ್ಯುನಿಸ್ಟ್ ಪಕ್ಷ ಮತ್ತು ವ್ಯಾಪಕ ಎಡಪಂಥೀಯ ಚಳುವಳಿ ತ್ಯಾಗ, ಸರಳತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜೀವನವನ್ನೇ ಮುಡಿಪಿಟ್ಟಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+