ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ
ನವದೆಹಲಿ, ಸೆಪ್ಟೆಂಬರ್ 08 : ಮಾಜಿ ಸಚಿವ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶರಾದರು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಭಾನುವಾರ ಬೆಳಗ್ಗೆ ನವದೆಹಲಿಯ ನಿವಾಸದಲ್ಲಿ ರಾಮ್ ಜೇಠ್ಮಲಾನಿ (95) ಕೊನೆಯುಸಿರೆಳೆದರು. ಸೆಪ್ಟೆಂಬರ್ 14, 1923ರಲ್ಲಿ ಜನಿಸಿದ್ದ ರಾಮ್ ಜೇಠ್ಮಲಾನಿ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದರು.

ಕೇಂದ್ರದ ಕಾನೂನೂ ಸಚಿವರಾಗಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ರಾಮ್ ಜೇಠ್ಮಾಲಾನಿ ಕೆಲಸ ಮಾಡಿದ್ದರು. ಮುಂಬೈನಿಂದ ಬಿಜೆಪಿ ಪಕ್ಷದಿಂದ ಅವರು 6 ಮತ್ತು 7ನೇ ಲೋಕಸಭೆಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ರಾಮ್ ಬೂಲ್ಚಂದ್ ಜೇಠ್ಮಲಾನಿ ಅವರ ಪೂರ್ಣ ಹೆಸರು. ದೇಶದ ಹಲವಾರು ಮಹತ್ವದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಾದ ಮಂಡನೆ ಮಾಡಿದ್ದರು.

2017ರ ಸೆಪ್ಟೆಂಬರ್ 10ರಂದು ಅವರು ವಕೀಲ ವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದರು. ಸುಮಾರು ಏಳು ದಶಕಗಳ ಕಾಲ ಕರಿ ಕೋಟು ಧರಿಸಿ ಅವರು ವಕೀಲಿಕೆ ಮಾಡಿದ್ದರು. ಹರ್ಷಾದ್ ಮೆಹ್ತಾ ಹಗರಣ, ನರಸಿಂಹರಾವ್ ಲಂಚ ಪ್ರಕರಣದಲ್ಲಿ ರಾಮ್ ಜೇಠ್ಮಲಾನಿ ವಾದ ಮಂಡನೆ ಮಾಡಿದ್ದಾರೆ.












Click it and Unblock the Notifications