ಸಿಖ್ ಹತ್ಯಾಕಾಂಡ ಕುರಿತ ಹೇಳಿಕೆ: ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚನೆ
ಶಿಮ್ಲಾ, ಮೇ 10: ಸಿಖ್ ಹತ್ಯಾಕಾಂಡ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚಿಸಿದ್ದಾರೆ.
1984ರ ಸಿಖ್ಖರ ಹತ್ಯಾಕಾಂಡದ ಕುರಿತು ಮಾತನಾಡಿದ್ದ ಸ್ಯಾಮ್, 'ಆಗಿದ್ದು ಆಗಿಹೋಯ್ತು, ಏನಿವಾಗ' ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು.
ಇದಕ್ಕೆ ಕ್ಷಮೆ ಕೋರಿರುವ ಪಿತ್ರೋಡಾ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. 'ನನ್ನ ಮಾತುಗಳನ್ನು ಸಂಪೂರ್ಣವಾಗಿ ತಿರುಚಲಾಗಿದೆ. ನನಗೆ ಹಿಂದಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ನಾನು ಹೇಳಲು ಹೊರಟಿದ್ದು, ಅಲ್ಲಿ ಏನಾಗಿದೆಯೋ ಅದು ಖಂಡನೀಯ (ಜೋ ಹುವಾ ವೋ ಬುರಾ ಹುವಾ) ಎಂದು. ಆದರೆ, ನನಗೆ ಬುರಾ (ಕೆಟ್ಟದ್ದು) ಅನ್ನು ಸರಿಯಾಗಿ ಅನುವಾದಿಸಲು ಬಂದಿರಲಿಲ್ಲ' ಎಂದು ಹೇಳಿದ್ದಾರೆ.

'ನಾನು ಹೇಳಿದ್ದು ಇದನ್ನು ಬಿಟ್ಟು ನಾವು ಮುಂದೆ ಹೋಗಬೇಕು ಎಂದು. ಬಿಜೆಪಿ ಸರ್ಕಾರ ಏನು ಹೇಳಿತ್ತು, ಏನು ನೀಡುತ್ತಿದೆ ಮುಂತಾದ ಇತರೆ ಚರ್ಚಾಸ್ಪದ ವಿಚಾರಗಳಿವೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ಬೇಸರವಾಗುತ್ತಿದೆ. ನಾನು ಕ್ಷಮೆ ಕೋರುತ್ತೇನೆ' ಎಂದು ಪಿತ್ರೋಡಾ ಸ್ಪಷ್ಟನೆ ನೀಡಿದ್ದಾರೆ.
ಸಿಖ್ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದ ಪಿತ್ರೋಡಾ, 'ಹುವಾ ತೋ ಹುವಾ' ಎಂದು ಹೇಳಿದ್ದರು ಎಂದು ಆರೋಪಿಸಲಾಗಿತ್ತು.












Click it and Unblock the Notifications