ಶಬರಿಮಲೆ ಭಕ್ತರಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ ನಿತ್ಯ 400 ಕೊಠಡಿಗಳು ಆನ್ಲೈನ್ ಬುಕಿಂಗ್ಗೆ ಲಭ್ಯ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಸುದೀರ್ಘ ಕಾಡಿನ ಹಾದಿಯನ್ನ ಸವೆಸಿ ಸ್ವಾಮಿಯ ಸನ್ನಿಧಾನಕ್ಕೆ ತಲುಪುವ ಭಕ್ತರಿಗೆ ಸುಸ್ತು ನಿವಾರಿಸಿಕೊಳ್ಳಲು ಹಾಗೂ ಮುಂಜಾನೆಯ ಪೂಜೆಗಳಲ್ಲಿ ಪಾಲ್ಗೊಳ್ಳಲು ವಸತಿ ತುಂಬ ಮುಖ್ಯ. ಇದು ತಿರುವಾಂಕೂರು ದೇವಸ್ವಂ ಮಂಡಳಿಗೆ (TDB) ದೊಡ್ಡ ಸವಾಲಾಗಿತ್ತು.
ಆದರೆ ಇದೀಗ, ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಮಂಡಳಿ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಭಕ್ತರ ಅನುಕೂಲಕ್ಕಾಗಿ ಶಬರಿಮಲೆ ಸನ್ನಿಧಾನದಲ್ಲಿ ಲಭ್ಯವಿರುವ ಕೊಠಡಿಗಳ ಆನ್ಲೈನ್ ಬುಕಿಂಗ್ ಸಂಖ್ಯೆಯನ್ನ ಈ ಹಿಂದಿನ 190ರಿಂದ ಬರೋಬ್ಬರಿ 400ಕ್ಕೆ ಹೆಚ್ಚಿಸಲಾಗಿದೆ.

ಶಬರಿಮಲೆ ತುಲಾ ಮಾಸದ ಪೂಜೆ ಹಾಗೂ ಭಕ್ತರ ದಟ್ಟಣೆ
ಶಬರಿಮಲೆಯಲ್ಲಿ ಪ್ರತಿ ತಿಂಗಳು ಮಾಸಿಕ ಪೂಜೆಗಳು ನಡೆಯುತ್ತವೆ. ಮುಂಬರುವ ತುಲಾ ಮಾಸದ ಪೂಜೆಗಳಿಗಾಗಿ ಅಕ್ಟೋಬರ್ ತಿಂಗಳಿನಲ್ಲಿ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಶಬರಿಮಲೆಗೆ ಬರುತ್ತಾರೆ. ಈ ಹಿಂದೆ ಆನ್ಲೈನ್ನಲ್ಲಿ ಕೇವಲ 190 ಕೊಠಡಿಗಳನ್ನು ಮಾತ್ರ ಕಾಯ್ದಿರಿಸಲು ಅವಕಾಶ ನೀಡಲಾಗುತ್ತಿತ್ತು. ಉಳಿದ ಕೊಠಡಿಗಳನ್ನು ಸನ್ನಿಧಾನದ ಅಕಾಮಡೇಷನ್ (ವಸತಿ) ಕೌಂಟರ್ನಲ್ಲಿ ನೇರವಾಗಿ ಭಕ್ತರಿಗೆ ಹಂಚಿಕೆ ಮಾಡಲಾಗುತ್ತಿತ್ತು.
ಇದರಿಂದಾಗಿ ಮೊದಲು ಬಂದವರಿಗೆ ಮಾತ್ರ ಕೊಠಡಿಗಳು ಸಿಗುತ್ತಿದ್ದವು ಹಾಗೂ ತಡವಾಗಿ ಬಂದವರು ಕೊಠಡಿಗಳಿಲ್ಲದೆ ಪರದಾಡುವ ಪರಿಸ್ಥಿತಿ ಇತ್ತು. ಈ ಸಮಸ್ಯೆಗಳನ್ನ ಬಗ್ಗೆ ಅರಿತ ದೇವಸ್ವಂ ಮಂಡಳಿಯು ಇದೀಗ ಪ್ರತಿ ದಿನ 400 ಕೋಣೆಗಳನ್ನ ಆನ್ಲೈನ್ ಮೂಲಕವೇ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ.
ಸನ್ನಿಧಾನ ವಸತಿ ವ್ಯವಸ್ಥೆ ಮತ್ತು ಶಬರಿ ಗೇಸ್ಟ್ ಹೌಸ್
ಭಕ್ತರ ಸುಗಮ ದರ್ಶನ ಮತ್ತು ತಂಗುವಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ, ಸನ್ನಿಧಾನದಲ್ಲಿ ಲಭ್ಯವಿರುವ ವಸತಿ ಸೌಕರ್ಯಗಳನ್ನ ಹಂತಹಂತವಾಗಿ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ವಿಶೇಷವೆಂದರೆ, ಸದ್ಯ ಪ್ರೊಟೊಕಾಲ್ ಗೇಸ್ಟ್ ಹೌಸ್ ಆಗಿ (ಗಣ್ಯರ ವಸತಿಗಾಗಿ) ಬಳಸಲಾಗುತ್ತಿರುವ 'ಶಬರಿ ಗೇಸ್ಟ್ ಹೌಸ್'ನ 10 ವಿಐಪಿ ಕೊಠಡಿಗಳನ್ನ ಸಹ ಇನ್ಮುಂದೆ ಸಾಮಾನ್ಯ ಭಕ್ತರ ಆನ್ಲೈನ್ ಬುಕಿಂಗ್ಗೆ ಮುಕ್ತಗೊಳಿಸಲಾಗಿದೆ.
ಇದರಿಂದಾಗಿ ಭಕ್ತರು ತಮ್ಮ ಮನೆಗಳಿಂದಲೇ ಕೊಠಡಿಗಳನ್ನ ಕಾಯ್ದಿರಿಸಿ, ಯಾವುದೇ ಆತಂಕವಿಲ್ಲದೆ ನೆಮ್ಮದಿಯಾಗಿ ತಮ್ಮ ಯಾತ್ರೆಯನ್ನ ಕೈಗೊಳ್ಳಬಹುದಾಗಿದೆ.
ಶಬರಿಮಲೆ ಆನ್ಲೈನ್ ಬುಕಿಂಗ್ ವೆಬ್ಸೈಟ್ ಮೂಲಕ ಕಾಯ್ದಿರಿಸುವಿಕೆ
ತುಲಾ ಮಾಸದ ವಿಶೇಷ ಪೂಜೆಗಳಿಗಾಗಿ ಈ ಆನ್ಲೈನ್ ಕೊಠಡಿ ಬುಕಿಂಗ್ ಪ್ರಕ್ರಿಯೆಯು ಅಕ್ಟೋಬರ್ 7 (ಇಂದು) ಬೆಳಿಗ್ಗೆ 7 ಗಂಟೆಯಿಂದಲೇ ಅಧಿಕೃತವಾಗಿ ಪ್ರಾರಂಭವಾಗಿದೆ. ಶಬರಿಮಲೆಗೆ ಭೇಟಿ ನೀಡಲು ಇಚ್ಛಿಸುವ ಭಕ್ತರು ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್ಸೈಟ್ www.onlinetdb.com ಗೆ ಭೇಟಿ ನೀಡಿ ತಮ್ಮ ಕೊಠಡಿಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.
ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು, ಲಭ್ಯವಿರುವ ದಿನಾಂಕ ಮತ್ತು ಕೊಠಡಿಯ ಪ್ರಕಾರವನ್ನು ಆಯ್ಕೆ ಮಾಡಿ ಹಣ ಪಾವತಿಸುವ ಮೂಲಕ ತಮ್ಮ ವಸತಿಯನ್ನ ಖಚಿತಪಡಿಸಿಕೊಳ್ಳಬಹುದು.
ಶಬರಿಮಲೆ ಕೊಠಡಿ ಬುಕಿಂಗ್ ಮರುಪಾವತಿ
ಸಾಕಷ್ಟು ಭಕ್ತರು ಏಕಕಾಲದಲ್ಲಿ ವೆಬ್ಸೈಟ್ಗೆ ಭೇಟಿ ನೀಡುವುದರಿಂದ, ತಾಂತ್ರಿಕ ದೋಷಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಬುಕಿಂಗ್ ವಿಫಲವಾಗಿ, ಭಕ್ತರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡರೆ (ಡೆಬಿಟ್ ಆದರೆ) ಭಕ್ತರು ಆತಂಕಪಡುವ ಅಗತ್ಯವಿಲ್ಲ.
ಈ ಕುರಿತು ಮಂಡಳಿಯು ಸ್ಪಷ್ಟನೆ ನೀಡಿದ್ದು, ಹಣ ಕಡಿತಗೊಂಡ ಪೂರಕ ದಾಖಲೆಗಳು ಹಾಗೂ ವಹಿವಾಟಿನ ವಿವರಗಳೊಂದಿಗೆ ಭಕ್ತರು [email protected] ಎಂಬ ಅಧಿಕೃತ ಇಮೇಲ್ ವಿಳಾಸಕ್ಕೆ ದೂರು ಸಲ್ಲಿಸಬಹುದು. ದೂರು ಪರಿಶೀಲಿಸಿ, ಕಡಿತಗೊಂಡ ಮೊತ್ತವನ್ನ ಶೀಘ್ರದಲ್ಲೇ ಮರುಪಾವತಿ ಮಾಡಲಾಗುವುದು.
ದೇವಾಲಯದ ಆಡಳಿತ ಮಂಡಳಿಯ ಈ ನಿರ್ಧಾರದಿಂದಾಗಿ ದಲ್ಲಾಳಿಗಳ ಹಾವಳಿ ಹಾಗೂ ಕೊಠಡಿಗಳಿಗಾಗಿ ಸನ್ನಿಧಾನದಲ್ಲಿ ಸರದಿಯಲ್ಲಿ ನಿಲ್ಲುವ ಕಿರಿಕಿರಿ ತಪ್ಪಿದಂತಾಗಿದೆ. ಶಬರಿಮಲೆಗೆ ಬರುವ ಪ್ರತಿಯೊಬ್ಬ ಭಕ್ತನಿಗೂ ಸಮಾನವಾದ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಈ ಪಾರದರ್ಶಕ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.


Click it and Unblock the Notifications
