ಯುಪಿಯ ಈ ಗ್ರಾಮದಲ್ಲಿ ಮೊಬೈಲ್ ಫೋನ್ ಬಳಸುವ ಮಹಿಳೆಯರಿಗೆ 21,000 ದಂಡ!
ಮಥುರಾದಿಂದ 30 ಕಿಲೋಮಿಟರ್ ದೂರದಲ್ಲಿರುವ ಮದೊರಾ ಎಂಬ ಹಳ್ಳಿಯಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಮೊಬೈಲ್ ಫೋನಿನಲ್ಲಿ ಮಾತನಾಡುವುದು ಕಂಡು ಬಂದರೆ ರೂಪಾಯಿ 21,000 ದಂಡ ವಿಧಿಸಲಾಗುತ್ತದೆ.
ಲಕ್ನೊ, ಮೇ 3: ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಗ್ರಾಮವೊಂದು ವಿಲಕ್ಷಣ ಕಾರಣಕ್ಕೆ ದೇಶದೆಲ್ಲೆಡೆ ಸುದ್ದಿಗೆ ಗ್ರಾಸವಾಗಿದೆ.
ಈ ಗ್ರಾಮದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಮೊಬೈಲ್ ಫೋನಿನಲ್ಲಿ ಮಾತನಾಡುವುದು ಕಂಡು ಬಂದರೆ ರೂಪಾಯಿ 21,000 ದಂಡ ವಿಧಿಸಲಾಗುತ್ತದೆ. ಮದ್ಯಪಾನ, ಜೂಜು, ಗೋ ಹತ್ಯೆ ಜತೆ ಮೊಬೈಲ್ ಫೋನಿನಲ್ಲಿ ಮಾತನಾಡುವುದನ್ನೂ ಇಲ್ಲಿ ಅಪರಾಧದ ಪಟ್ಟಿಗೆ ಸೇರಿಸಲಾಗಿದೆ.
ಮಥುರಾದಿಂದ 30 ಕಿಲೋಮಿಟರ್ ದೂರದಲ್ಲಿರುವ ಮದೊರಾ ಎಂಬ ಹಳ್ಳಿಯ ಗ್ರಾಮ ಪಂಚಾಯತ್ ಈ ಆದೇಶ ಹೊರಡಿಸಿದೆ. ಹಲವು ಅಪರಾಧಗಳಿಗೆ 11,000 ದಿಂದ ಆರಂಭವಾಗಿ 2 ಲಕ್ಷದ ವರೆಗೆ ದಂಡ ವಿಧಿಸುವ ಕಾನೂನನ್ನು ಇಲ್ಲಿನ ಗ್ರಾಮ ಪಜಾಯತ್ ಜಾರಿಗೆ ತಂದಿದೆ.

ಇನ್ನು ಪಂಚಾಯತ್ ನ ನಿರ್ಣಯವನ್ನು ಸಮರ್ಥಿಸಿಕೊಂಡಿರುವ ಸದಸ್ಯ ಗಫರ್ ಖಾನ್, " ಇಲ್ಲಿನ ಹೆಚ್ಚಿನ ಮಹಿಳೆಯರು ಅನಕ್ಷರಸ್ಥರು. ಇವರಿಗೆ ಫೋನ್ ಯಾಕೆ ಬೇಕು?" ಎಂಬ ವಿಚಿತ್ರ ಪ್ರಶ್ನೆ ಮುಂದಿಟ್ಟಿದ್ದಾರೆ.
ಸಂಪ್ರದಾಯದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಅವರು ಇದಕ್ಕೆ ಸಮಜಾಯಿಷಿಯನ್ನು ನೀಡಿದ್ದಾರೆ. ಮೊಬೈಲ್ ಫೋನ್ ಇಟ್ಟುಕೊಂಡರ ಪುರುಷರೊಂದಿಗೆ ಮಹಿಳೆಯರು ಸಂಪರ್ಕ ಬೆಳೆಸುತ್ತಾರೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ.
ಇನ್ನು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮಗಳನ್ನು ಅಲ್ಲಿನ ಜನರೇ ತೆಗೆದುಕೊಂಡಿದ್ದಾರೆ. ಈ ರೀತಿಯ ಕ್ರಮ ತೆಗೆದುಕೊಳ್ಳಲು ನಾವು ಅನುವು ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಪೊಲೀಸ್ ಅಧಿಕಾರಿಗಳೂ ತಿಳಿಸಿದ್ದಾರೆ.
ಮದೊರಾ ಗ್ರಾಮದ ಕ್ರಮಗಳನ್ನು ನಾವು ಬೆಂಬಲಿಸುತ್ತೇವೆ. ಒಂದೊಮ್ಮೆ ಇದು ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾದರೆ ಮಾತ್ರ ಅಂಥಹ ನಿಯಮಗಳ ಬಗ್ಗೆ ಗಮನ ಹರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೀಗೆ ವಿಲಕ್ಷಣ ನಿಯಮದೊಂದಿಗೆ ಮದೊರಾ ಗ್ರಾಮ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೇ ರೀತಿ ಮೂರು ವರ್ಷದ ಹಿಂದೆ ಮುಜಾಫರ್ ನಗರದ ಗ್ರಾಮವೊಂದರಲ್ಲಿ ಮಹಿಳೆಯರು ಜೀನ್ಸ್ ಪ್ಯಾಂಟ್ ಮತ್ತು ಮೊಬೈಕ್ ಫೋನ್ ಬಳಸದಂತೆ ನಿರ್ಬಂಧ ಹೇರಲಾಗಿತ್ತು.












Click it and Unblock the Notifications