Haryana: ಹರಿಯಾಣ ಚುನಾವಣೆಗೂ ಕೇಜ್ರಿವಾಲ್ ಬಿಡುಗಡೆಗೂ ನಂಟಿದೆ ಎಂದ ವಾದ್ರಾ
ಹರಿಯಾಣದಲ್ಲಿ ವಿಧಾನಸಭೆ ಚುನಾವಣಾ ತಯಾರಿ ಗರಿಗೆದರಿದೆ. ಈ ಹೊತ್ತಿನಲ್ಲೇ ಬಿಜೆಪಿ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದೆ. ಹರಿಯಾಣ ಚುನಾವಣೆ ಗೆಲ್ಲುವ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ಹಾಗು ಅಪರಾಧಿ ರಾಮ್ ರಹೀಮ್ ಅವರನ್ನು ಬಿಜೆಪಿ ಬಿಡುಗಡೆಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಹರಿಯಾಣ ವಿಧಾನಸಭಾ ಚುನಾವಣೆ ಮೇಲೆ ತಮ್ಮ ಹಿಡಿತ ಸಾಧಿಸಲು ಜೈಲುವಾಸದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಿಂದ ಬಿಡುಗಡೆಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ದೂರಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಆರೋಪಿಯಾಗಿರುವ ರಾಮ್ ರಹೀಮ್ ಅವರನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ತರಲು ಮುಂದಾಗಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಹರಿಯಾಣದಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರಲು ಬಿಜೆಪಿ ರೂಪಿಸಿರುವ ತಂತ್ರ ಎಂದು ಹೇಳಿದ್ದಾರೆ.
ಇತ್ತ ಅತ್ಯಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಜೆಪಿಯು ಚುನಾವಣೆ ಮುನ್ನವೇ ಪೆರೋಲ್ ಮೇಲೆ ಹೊರಗೆ ಕರೆಸಿಕೊಳ್ಳುತ್ತಿದೆ. ಕೇಜ್ರಿವಾಲ್ ಕೂಡ ಸೂಕ್ತ ಸಮಯಕ್ಕೆ ಬಂದು ಹರಿಯಾಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ಮಾಡಿದ್ದ ಪ್ರೀಪ್ಲ್ಯಾನ್ ಎಂದು ದೂರಿದ್ದಾರೆ.

ಬಿಜೆಪಿಯು ನನ್ನ ಉದ್ಯಮ ಹಾಗೂ ವ್ಯವಹಾರಗಳಿಗೆ ಅಡ್ಡಿಪಡಿಸುತ್ತಲೇ ಇದೆ. ಹಾಗಾಗಿ ಹರಿಯಾಣದಲ್ಲೂ ಉದ್ಯೋಗಗಳನ್ನು ಸೃಷ್ಟಿಸುವುದು ಬಹಳ ಕಷ್ಟವಾಗಿದೆ. ನಾನು ಹರಿಯಾಣದಲ್ಲಿ ಉದ್ಯೋಗಗಳನ್ನು ನೀಡಬಹುದಿತ್ತು. ಆದರೆ ಅಲ್ಲಿದ್ದ ಬಿಜೆಪಿ ಸರ್ಕಾರ ನನ್ನ ಸಹಚರರನ್ನು ಬೆದರಿಸುವ ಕೆಲಸ ಮಾಡಿದೆ. ಹಾಗಾಗಿಯೇ ಅಲ್ಲಿನ ಎಲ್ಲವೂ ವಿಫಲವಾಯಿತು ಎಂದಿದ್ದಾರೆ.
ಆರ್‌ಎಸ್‌ಎಸ್‌ಗೆ ಬಿಜೆಪಿ ಆದ್ಯತೆ: ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಸೈನಿಕರು, ರೈತರ ಅಗತ್ಯಗಳನ್ನು ಕಡೆಗಣಿಸಿದ್ದಾರೆ. ಪಕ್ಷವು ಜನರ ಕಲ್ಯಾಣಕ್ಕಿಂತ ಆರ್‌ಎಸ್‌ಎಸ್ ಕಾರ್ಯಸೂಚಿಗೆ ಆದ್ಯತೆ ನೀಡುತ್ತಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು ಹರಿಯಾಣದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ನಮ್ಮ ಕಾಂಗ್ರೆಸ್ ಪ್ರಧಾನಿಗಳೆಲ್ಲ ದೇಶಕ್ಕಾಗಿ ಸದಾ ದುಡಿದಿದ್ದಾರೆ. ಶಾಸ್ತ್ರೀಜಿಯವರು 'ಜೈ ಜವಾನ್ ಜೈ ಕಿಸಾನ್' ಎಂದು ಹೇಳುವ ಮೂಲಕ ಸಂದೇಶ ರವಾನಿಸಿದ್ದಾರೆ. ಇದು ಕಾಂಗ್ರೆಸ್‌ನ ಧ್ಯೇಯ. ಆದರೆ ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಆರ್‌ಎಸ್‌ಎಸ್ ಅಥವಾ ಬಿಜೆಪಿಯಲ್ಲಿ ರೈತರು ಎನ್ನುವ ಮಾತೇ ಇಲ್ಲ.
ಹೀಗಾಗಿ ಅವರು ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ರೈತರ ಕಷ್ಟ ಅರ್ಥ ಮಾಡಿಕೊಳ್ಳದ ಅವರು ಅಂಬಾನಿ-ಅದಾನಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ, ರೈತರಿಗಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಅಕ್ಟೋಬರ್ 5ರಂದು ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.











Click it and Unblock the Notifications