ರಾಜಧಾನಿಗೆ ಬಂದು ಅತ್ತೆ ಸುಧಾ ಮೂರ್ತಿ ಜೊತೆ ಸ್ವೀಟ್ ಸವಿದ ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್: ಭಾರಿ ವೈರಲ್
Rishi Sunak: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಅತ್ತೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ರಾಷ್ಟ್ರ ರಾಜಧಾನಿಯ ಪ್ರಸಿದ್ಧ 'ಬೆಂಗಾಲಿ ಸ್ವೀಟ್ ಹೌಸ್'ಗೆ ಆಗಮಿಸಿ ಗಮನಸೆಳೆದಿದ್ದಾರೆ. ಸದ್ಯ ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿವೆ.
ದೆಹಲಿಯ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ 'ಬೆಂಗಾಲಿ ಸ್ವೀಟ್ ಹೌಸ್' ತನ್ನ ಸಾಂಪ್ರದಾಯಿಕ ಸಿಹಿ ತಿಂಡಿಗಳು ಮತ್ತು ಖಾರವಾದ ಚಾಟ್ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಆಗಮಿಸಿದ ರಿಷಿ ಸುನಕ್, ಸುಧಾ ಮೂರ್ತಿ ಮತ್ತು ಸ್ವಾತಿ ಮಾಲಿವಾಲ್ ಅವರು ದೆಹಲಿ ಶೈಲಿಯ ಖಾರ-ಖಾರವಾದ ಚಾಟ್, ಮೃದುವಾದ ಸ್ವೀಟ್ಸ್ ಹಾಗೂ ವಿವಿಧ ರೀತಿಯ ಲಡ್ಡುಗಳನ್ನು ಸವಿದು ಸಖತ್ ಎಂಜಾಯ್ ಮಾಡಿದರು.

ಭಾರತದ ಆಹಾರಕ್ಕೆ ಮಾರುಹೋದ ರಿಷಿ ಸುನಕ್
ಸಾಮಾನ್ಯ ಗ್ರಾಹಕರಂತೆ ಸರಳವಾಗಿ ಆಗಮಿಸಿದ ಇವರನ್ನು ಕಂಡು ಸ್ವೀಟ್ ಹೌಸ್‌ನ ಸಿಬ್ಬಂದಿ ಹಾಗೂ ಅಲ್ಲಿದ್ದ ಸಾರ್ವಜನಿಕರು ಆಶ್ಚರ್ಯಗೊಂಡರು. ಸುಧಾ ಮೂರ್ತಿ ಅವರು ಸರಳತೆಗೆ ಹೆಸರಾಗಿದ್ದು, ರಿಷಿ ಸುನಕ್ ಕೂಡ ಭಾರತೀಯ ಸಾಂಪ್ರದಾಯಿಕ ಆಹಾರದ ಬಗ್ಗೆ ಹೊಂದಿರುವ ಅಪಾರ ಪ್ರೀತಿಯನ್ನು ಈ ಭೇಟಿಯ ಮೂಲಕ ಮತ್ತೊಮ್ಮೆ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್
ಸ್ವಾತಿ ಮಾಲಿವಾಲ್ ಅವರು ಈ ಭೇಟಿಯ ಸುಂದರ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ರಿಷಿ ಸುನಕ್ ಮತ್ತು ಸುಧಾ ಮೂರ್ತಿ ಅವರೊಂದಿಗೆ ದೆಹಲಿ ಚಾಟ್ ಹಾಗೂ ಸಿಹಿ ತಿಂಡಿಗಳನ್ನು ಸವಿಯುವುದು ಅತ್ಯಂತ ಸಂತೋಷದ ಕ್ಷಣವಾಗಿತ್ತು,' ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಸರಳತೆಗೆ ಹಾಗೂ ಭಾರತೀಯ ಆಹಾರ ಸಂಸ್ಕೃತಿಯ ಮೇಲಿರುವ ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ರಿಷಿ ಸುನಕ್ ಅವರು ಭಾರತಕ್ಕೆ ನೀಡುತ್ತಿರುವ ಭೇಟಿ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತವೆ. ತಮ್ಮ ಕುಟುಂಬದೊಂದಿಗೆ ಭಾರತೀಯ ಸಂಸ್ಕೃತಿ, ದೇವಾಲಯಗಳು ಹಾಗೂ ಸ್ಥಳೀಯ ಆಹಾರ ತಾಣಗಳಿಗೆ ಭೇಟಿ ನೀಡುವುದು ಅವರ ದಿನಚರಿಯ ಭಾಗವಾಗಿದೆ. ದೆಹಲಿಯ ಸಾಂಪ್ರದಾಯಿಕ ತಿಂಡಿಗಳ ರುಚಿ ಸವಿದ ಈ ಗಣ್ಯರ ಚಿತ್ರಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಚಾಟ್, ಸಿಹಿ ತಿಂಡಿ ಸೇವನೆ
ಈ ಸ್ವೀಟ್ ಹೌಟ್‌ನಲ್ಲಿ ರಿಷಿ ಸುನಕ್ ಮತ್ತು ಸುಧಾ ಮೂರ್ತಿ ಅವರು ದೆಹಲಿ ಶೈಲಿಯ ಆಲೂ ಟಿಕ್ಕಿ, ಪಾಪ್ಡಿ ಚಾಟ್, ಕುಲ್ಹಡ್ ಲಸ್ಸಿ ಹಾಗೂ ರಸಮಲೈ ಅನ್ನು ಸವಿದರು. ಬಳಿಕ ಸುನಕ್ ಅವರು ಕಳೆದ ವರ್ಷ ತಾವು ಸವಿದಿದ್ದ ಕೇಸರ್ ಲಡ್ಡುಗಳನ್ನು ನೀಡುವಂತೆ ಕೇಳಿದರು. ಬಳಿಕ ಅವರಿಗೆ ಬಿಸಿಯಾದ ಮಸಾಲ ಚಾಯ್ (ಮಸಾಲಾ ಟೀ) ಕುಡಿಯುವ ಆಸೆಯಾಯಿತು.
ರೆಸ್ಟೋರೆಂಟ್ ಮಾಲೀಕ ಹೇಳಿದ್ದೇನು?
ಸುನಕ್ ಅವರು ಮಸಾಲಾ ಟೀ ಕೇಳಿದ ಸಮಯದಲ್ಲಿ, ರೆಸ್ಟೋರೆಂಟ್‌ನಲ್ಲಿ ಅದು ಲಭ್ಯವಿರಲಿಲ್ಲ. ಈ ಕುರಿತು ಮಾಹಿತಿ ಹಂಚಿಕೊಂಡ ರೆಸ್ಟೋರೆಂಟ್ ಮಾಲೀಕ ವರ್ಜೇಶ್ ಅಗರ್‌ವಾಲ್, 'ಅವರು ವಿಶೇಷವಾಗಿ ಮಸಾಲ ಟೀ ಕೇಳಿದಾಗ ನಮ್ಮಲ್ಲಿ ಸಿದ್ಧವಿರಲಿಲ್ಲ. ಆದರೆ ಅವರನ್ನು ನಿರಾಶೆಗೊಳಿಸಲು ಇಷ್ಟವಿಲ್ಲದೆ, ರಸ್ತೆಯ ಎದುರು ಬದಿಯಲ್ಲೇ ಇದ್ದ ನನ್ನ ಮನೆಗೆ ವಿಷಯ ತಿಳಿಸಿದೆ. ನನ್ನ ಪತ್ನಿ ಮನೆಯಲ್ಲೇ ಸ್ವತಃ ಮಸಾಲ ಚಾಯ್ ತಯಾರಿಸಿ, ರೆಸ್ಟೋರೆಂಟ್‌ಗೆ ಕಳುಹಿಸಿಕೊಟ್ಟರು,' ಎಂದು ಆ ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ನವರಾತ್ರಿಯ ಶುಭಾಶಯ ಕೋರಿ ನಿರ್ಗಮನ
ಮನೆಯಿಂದ ಬಂದ ಮಸಾಲ ಚಾಯ್ ಅನ್ನು ಸವಿದ ಸುನಕ್ ಹಾಗೂ ಸುಧಾ ಮೂರ್ತಿ ಅವರು ಅತ್ಯಂತ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ರೆಸ್ಟೋರೆಂಟ್ ಮಾಲೀಕರು ಹಾಗೂ ಸಿಬ್ಬಂದಿಗೆ 'ನವರಾತ್ರಿ ಹಬ್ಬದ ಶುಭಾಶಯಗಳನ್ನು' ಕೋರಿ ಅಲ್ಲಿಂದ ತೆರಳಿದರು ಎಂದು ಮಾಲೀಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಬರೀ ಭಾರತದ ಸಂಸ್ಕೃತಿಗೆ ಅಷ್ಟೇ ಅಲ್ಲದೆ, ಇಲ್ಲಿನ ಆಹಾರಕ್ಕೂ ಸುನಕ್ ಅವರು ಫಿದಾ ಆಗಿದ್ದಾರೆ ಎಂದು ಇಂದರಿಂದಲೇ ತಿಳಿಯಬಹುದು.


Click it and Unblock the Notifications
