Government Employees; ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆಗೆ ಒತ್ತಾಯ
ನವದೆಹಲಿ, ಜೂನ್ 25: ಕರ್ನಾಟಕ ಮಾತ್ರವಲ್ಲ ಕೇಂದ್ರ ಸರ್ಕಾರಿ ನೌಕರರು ಸಹ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈಗ 2024-25ನೇ ಸಾಲಿನ ಬಜೆಟ್ ಮಂಡನೆ ಸಮಯದಲ್ಲಿ ಮತ್ತೆ ಬೇಡಿಕೆ ಕೇಳಿ ಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಪೂರ್ವಭಾವಿಯಾಗಿ ಅವರು ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ವಿಚಾರಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ.

8ನೇ ವೇತನ ಆಯೋಗ ರಚನೆ ಮಾಡಬೇಕು. ವೇತನ ಪಡೆಯುವ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸಬೇಕು. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವರ ಮುಂದೆ ಬೇಡಿಕೆ ಇಡಲಾಗಿದೆ.
ಈಗಿರುವ ನಿಯಮವೇನು?; ಕೇಂದ್ರ ಸರ್ಕಾರಿ ನೌಕರರು ಸಹ ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ಇಲಾಖೆಗಳ ನೌಕರರು ಹೊಸ ಪಿಂಚಣಿ ವ್ಯವಸ್ಥೆ ವಿರೋಧಿಸುತ್ತಿದ್ದರು. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ.
ಸರ್ಕಾರ ದಿನಾಂಕ 11/12/2023ರ ಮೊದಲು ನೇಮಕಾತಿ/ ನೇಮಕಾತಿಗಾಗಿ ಜಾಹೀರಾತು/ ಅಧಿಸೂಚಿಸಲಾದ ಹುದ್ದೆ ಅಥವಾ ರಿಕ್ತ ಸ್ಥಾನದ ಎದುರಾಗಿ ನೇಮಕಾತಿ ಹೊಂದಿ ದಿನಾಂಕ 01/01/2004ರಂದು ಅಥವಾ ತದನಂತರ ಸೇವೆಗೆ ಸೇರಿದ ನೌಕರರಿಗೆ ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಮರಳಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿದೆ.
ಆದರೆ ಎಲ್ಲಾ ಸರ್ಕಾರಿ ನೌಕರರಿಗೆ ಈ ಆಯ್ಕೆ ಲಭ್ಯವಿಲ್ಲ. ರೈಲ್ವೆ, ಅಂಚೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ನೌಕರರು ಎಲ್ಲಾ ನೌಕರರನ್ನು ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರ ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ಕಾರ್ಮಿಕ ಸಂಘಟನೆಗಳ ಮುಖಂಡರು, ಕೇಂದ್ರ ಸರ್ಕಾರದ ಮಾಲೀಕತ್ವದ ಉದ್ದಿಮೆಗಳ ಖಾಸಗೀಕರಣವನ್ನು ಸ್ಥಗಿತಗೊಳಿಸಬೇಕು. ಕಾರ್ಪೊರೇಟ್ ತೆರಿಗೆ, ಸಂಪತ್ತಿನ ಮೇಲೆ ತೆರಿಗೆ ಹಾಗೂ ಪಿತ್ರಾರ್ಜಿತ ಆಸ್ತಿ ತೆರಿಗೆಯ ಮೂಲಕ ಹಣಕಾಸಿನ ಸಂಪನ್ಮೂಲ ಒಗ್ಗೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್ ಜುಲೈನಲ್ಲಿ ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಗೊಳಿಸುವ ಕುರಿತು ಘೋಷಣೆ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರಿ ನೌಕರರು ಬಜೆಟ್‌ನಲ್ಲಿ 8ನೇ ವೇತನ ಆಯೋಗ ರಚನೆಯ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಿ, ವರದಿ ಪಡೆದು ಅನುಷ್ಠಾನ ಮಾಡುತ್ತದೆ. ಸದ್ಯ 7ನೇ ವೇತನ ಆಯೋಗದ ವರದಿ ಅನ್ವಯ ನೌಕರರು ವೇತನ ಪಡೆಯುತ್ತಿದ್ದಾರೆ. 2016ರ ಜನವರಿಯಲ್ಲಿ 7ನೇ ವೇತನ ಆಯೋಗ ವರದಿ ನೀಡಿತ್ತು. ಈಗ 2026ರ ಜನವರಿಗೆ 8ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಈ ಬಗ್ಗೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications