ಕಿವಿ ಕೇಳದ, ಮಾತು ಬಾರದ ರೇಣು ಹನ್ಸ್ 45ರ ವಯಸ್ಸಿನಲ್ಲಿ 10ನೇ ತರಗತಿ ಪಾಸ್! ಮಗನೇ ಶಿಕ್ಷಕ!

ಆಕೆಗೆ ಈಗ ವಯಸ್ಸು 45. ಮಾತು ಬರೋಲ್ಲ. ಕಿವಿ ಕೇಳೋಲ್ಲ. ಗಂಡ, ಮಗ, ಸಂಸಾರ ಎಲ್ಲ ಇದೆ. 10ನೇ ತರಗತಿಯನ್ನು ಅರ್ಧದಲ್ಲೇ ಕಲಿಕೆ ನಿಲ್ಲಿಸಿದ್ದರು. ಈ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆಗೆ ಕೂತರೆ ಎಷ್ಟು ಮಾರ್ಕ್ ಪಡೆಯಬಹುದು? ಶೇ. 40? 50? ಊಹೂಂ. ಜಮ್ಮುವಿನ ರೇಣು ಹನ್ಸ್ ಛಲ ಹಿಡಿದು ಪರೀಕ್ಷೆ ಬರೆದು ಶೇ.82ರಷ್ಟು ಅಂಕ ಗಳಿಸಿದರು!

ಜೀವನದಲ್ಲಿ ಕೆಲವು ಕನಸುಗಳು ಈಡೇರುವುದು ಕಷ್ಟವೆಂದು ಕಾಣಬಹುದು. ಆದರೆ ಹಠ ಕಟ್ಟಿದರೆ ಅವುಗಳನ್ನು ನನಸು ಮಾಡಿಕೊಳ್ಳಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ 45 ವರ್ಷದ ರೇಣು ಹನ್ಸ್ ಕಥೆ ಉತ್ತಮ ಉದಾಹರಣೆ. ಮಾತು ಮತ್ತು ಶ್ರವಣದ ತೊಂದರೆ ಹೊಂದಿರುವ ರೇಣು, ಬರೋಬ್ಬರಿ 22 ವರ್ಷಗಳ ಬಳಿಕ ಮತ್ತೆ 10ನೇ ತರಗತಿ ಪರೀಕ್ಷೆ ಬರೆದು ಶೇ.82ರಷ್ಟು ಅಂಕ ಗಳಿಸಿದ್ದಾರೆ.

Renu Hans Inspiring Journey 45 Year Old Renu Hans Clears Class 10 After 22 Years With 82 Marks

ರೇಣು ಅವರ ಶಿಕ್ಷಣದ ಪಯಣ ಸುಲಭವಾಗಿರಲಿಲ್ಲ. ಮದುವೆಯಾಗುವ ಮೊದಲು ಅವರು 10ನೇ ತರಗತಿ ಪರೀಕ್ಷೆ ಬರೆದಿದ್ದರು. ಆದರೆ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ನಂತರ ಮದುವೆ, ಕುಟುಂಬದ ಜವಾಬ್ದಾರಿಗಳು ಸೇರಿದಂತೆ ಹಲವು ಕಾರಣಗಳಿಂದ ಅವರ ಶಿಕ್ಷಣ ಅಲ್ಲಿಗೇ ನಿಂತುಹೋಯಿತು. ಆದರೆ ಓದಬೇಕು, ಮುಂದೆ ಸಾಗಬೇಕು ಎಂಬ ಆಸೆ ಮಾತ್ರ ಅವರ ಮನಸ್ಸಿನಿಂದ ದೂರವಾಗಲಿಲ್ಲ.

22 ವರ್ಷಗಳ ಬಳಿಕ ಮತ್ತೆ ಪುಸ್ತಕ ಹಿಡಿದರು

ವರ್ಷಗಳು ಕಳೆದವು. ರೇಣು 45ನೇ ವಯಸ್ಸಿನಲ್ಲಿ ತಮ್ಮ ಅಪೂರ್ಣವಾಗಿದ್ದ ಶಿಕ್ಷಣವನ್ನು ಮತ್ತೆ ಮುಂದುವರಿಸಲು ನಿರ್ಧರಿಸಿದರು. 22 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್‌ನ 10ನೇ ತರಗತಿ ಪರೀಕ್ಷೆಗೆ ಹಾಜರಾದರು. ಏಪ್ರಿಲ್‌ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 10ರಂದು ಪ್ರಕಟವಾಯಿತು. ರೇಣು 500ರಲ್ಲಿ 406 ಅಂಕಗಳನ್ನು ಪಡೆದು ಶೇ.82ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದರು.

ಅವರ ಸಾಧನೆಯ ಹಿಂದೆ ಮತ್ತೊಂದು ಭಾವುಕವಾದ ಕಥೆಯಿದೆ. ಅವರ ಸ್ವಂತ ಮಗನೇ ಅವರಿಗೆ ಶಿಕ್ಷಕನಾದ. ರೇಣು ಅವರ ಏಕೈಕ ಮಗ ನಮನ್ ಕೌಲ್ 12ನೇ ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿ. ತನ್ನದೇ ವಿದ್ಯಾಭ್ಯಾಸದ ನಡುವೆ ಆತ ತಾಯಿಯ ಓದಿಗೂ ಸಮಯ ಮೀಸಲಿಟ್ಟ.

ಹಗಲಿನಲ್ಲಿ ತನ್ನ ವಿದ್ಯಾಭ್ಯಾಸ ಮಾಡುತ್ತಿದ್ದ ನಮನ್, ಸಂಜೆ ತಾಯಿಗೆ ಪಾಠ ಹೇಳಿಕೊಡುತ್ತಿದ್ದ. ತಾಯಿಯ ಸಂದೇಹಗಳನ್ನು ನಿವಾರಿಸುತ್ತಿದ್ದ. ರಾತ್ರಿ ಕೂಡ ಅವರ ಓದಿಗೆ ಸಹಾಯ ಮಾಡುತ್ತಿದ್ದ. ತಾಯಿಯ ಕನಸನ್ನು ನನಸು ಮಾಡಬೇಕೆಂಬುದು ನಮನ್ ಅವರ ಬಯಕೆಯಾಗಿತ್ತು.

ನನ್ನ ತಾಯಿ ಮನೆಯಲ್ಲೇ ಸೀಮಿತವಾಗಿರಬಾರದು. ಅವರು ಓದಿದರೆ ಜೀವನದಲ್ಲಿ ಮುಂದೆ ಸಾಗಬಹುದು. ಅವರಿಗೆ ಯಾವಾಗಲೂ ಓದಿ, ಒಳ್ಳೆಯ ಕೆಲಸ ಪಡೆಯಬೇಕು ಎಂಬ ಕನಸಿತ್ತು. 10ನೇ ತರಗತಿ ಪೂರ್ಣಗೊಳಿಸುವುದು ಆ ಕನಸಿನತ್ತ ಮೊದಲ ಹೆಜ್ಜೆ, ಎಂದು ನಮನ್ ಹೇಳಿದ್ದಾನೆ.

ಪರೀಕ್ಷಾ ಕೇಂದ್ರಕ್ಕೆ ಹೋದಾಗ ಆತಂಕ

22 ವರ್ಷಗಳ ನಂತರ ಮತ್ತೆ ಪರೀಕ್ಷೆ ಬರೆಯುವುದು ರೇಣುಗೆ ಕಷ್ಟವೇ ಆಯಿತು. ಪರೀಕ್ಷಾ ಕೇಂದ್ರಕ್ಕೆ ಹೋದಾಗ ತಮ್ಮ ಸುತ್ತಲೂ ತಮಗಿಂತ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನು ಕಂಡು ಆರಂಭದಲ್ಲಿ ಅವರು ಆತಂಕಗೊಂಡಿದ್ದರು. ಆದರೆ ನಿಧಾನವಾಗಿ ಆತ್ಮವಿಶ್ವಾಸ ಪಡೆದುಕೊಂಡು ಪರೀಕ್ಷೆ ಬರೆದರು. ಕೊನೆಗೆ ಫಲಿತಾಂಶ ಬಂದಾಗ ಶೇ.82ರ ಸಾಧನೆ ಅವರ ಪಾಲಾಯಿತು.

ರೇಣು ಅವರಿಗೆ ಪರೀಕ್ಷೆ ಬರೆಯಲು ನೋಂದಣಿ ಮಾಡಿಸುವುದೂ ಸುಲಭವಾಗಿರಲಿಲ್ಲ. ವಯಸ್ಕರಾಗಿ ಮತ್ತೆ ಪರೀಕ್ಷೆಗೆ ನೋಂದಣಿ ಮಾಡಿಸುವ ಪ್ರಕ್ರಿಯೆಯ ಬಗ್ಗೆ ಆರಂಭದಲ್ಲಿ ಮಾಹಿತಿ ಇರಲಿಲ್ಲ. ಅವರು ಬೋರ್ಡ್ ಕಚೇರಿಗೆ ತೆರಳಿ ವಿಚಾರಿಸಿದಾಗ, ಹಿಂದಿನ ವ್ಯವಸ್ಥೆ ಸ್ಥಗಿತಗೊಂಡಿದೆ ಎಂಬ ಮಾಹಿತಿ ದೊರೆಯಿತು. ಆದರೆ ನಂತರದ ಬೆಳವಣಿಗೆಗಳನ್ನು ಗಮನಿಸಿ ಕುಟುಂಬವು ರೇಣು ಅವರನ್ನು ಪರೀಕ್ಷೆಗೆ ನೋಂದಾಯಿಸಲು ಸಾಧ್ಯವಾಯಿತು.

ಸಂಕಷ್ಟಗಳ ನಡುವೆಯೂ ಕುಟುಂಬದ ಬೆಂಬಲ

ರೇಣು ಅವರ ಕುಟುಂಬವು 1990ರ ದಶಕದ ಆರಂಭದಲ್ಲಿ ಕಾಶ್ಮೀರ ಕಣಿವೆಯಿಂದ ಜಮ್ಮುವಿಗೆ ವಲಸೆ ಬಂದಿತ್ತು. ಪ್ರಸ್ತುತ ಕುಟುಂಬವು ಜಮ್ಮುವಿನ ಲೋವರ್ ರೂಪ್ ನಗರದಲ್ಲಿರುವ ಸರ್ಕಾರಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದೆ. ರೇಣು ಅವರ ಪತಿ ಬಾಬ್ಲು ಕೌಲ್ ಅವರಿಗೂ ಮಾತು ಮತ್ತು ಶ್ರವಣದ ತೊಂದರೆ ಇದೆ. ಅವರು ಮನೆಯಿಂದಲೇ ಟೈಲರಿಂಗ್ ಕೆಲಸ ಮಾಡುತ್ತಾರೆ. ಸೀಮಿತ ಸೌಲಭ್ಯಗಳ ನಡುವೆಯೂ ರೇಣು ಮತ್ತು ಅವರ ಪತಿ ತಮ್ಮ ಮಗನ ಶಿಕ್ಷಣಕ್ಕೆ ಬೆಂಬಲ ನೀಡಿದರು. ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದ್ದ ತಾಯಿ-ತಂದೆಗೆ, ವರ್ಷಗಳ ಬಳಿಕ ಮಗನೇ ಅವರ ಕನಸಿನ ಶಿಕ್ಷಣವನ್ನು ಪೂರ್ಣಗೊಳಿಸಲು ನೆರವಾದರು.

ರೇಣು ಅವರಿಗೆ ಚಿತ್ರಕಲೆಯಲ್ಲೂ ಆಸಕ್ತಿ ಇದೆ. ಈ ಸಾಧನೆಯ ನಂತರವೂ ರೇಣು ಮುಂದೆ ಓದಲು ಬಯಸಿದ್ದಾರೆ. ಅವರ ಮಗ ನಮನ್ ಕೂಡ ತಾಯಿಗೆ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಕೌಶಲ್ಯಗಳನ್ನು ಕಲಿಸಲು ಬಯಸಿದ್ದಾನಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+