ಯುಪಿಯ ಜೌನ್‌ಪುರದಲ್ಲಿ ದಾಖಲೆಯ ಕೃತ್ಯ: ಅಪ್ರಾಪ್ತ ದಲಿತ ಬಾಲಕಿಗೆ ಕಿರುಕುಳ, ಆರೋಪಿಗಳು ಅರೆಸ್ಟ್!
ಲಕ್ನೋ ಆಗಸ್ಟ್ 17: ಉತ್ತರಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಅತ್ಯಾಚಾರದಂತಹ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಕಾಮುಕರಿಗೆ ತಕ್ಕ ಪಾಠ ಕಲಿಸುವ ಪ್ರಯತ್ನದಲ್ಲಿ ಉತ್ತರ ಪ್ರದೇಶದ ಪೊಲೀಸರು ಪ್ರಕರಣವೊಂದನ್ನು ಬೇಧಿಸಿದ್ದಾರೆ.
ಆಗಸ್ಟ್ 14 ರಂದು ದಲಿತ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಅಪರಾಧದ ವಿಡಿಯೋ ಚಿತ್ರೀಕರಿಸಿದ್ದ ಆರೋಪದ ಮೇಲೆ ಆರು ಮಂದಿ ಆರೋಪಿಗಳನ್ನು ಉತ್ತರ ಪ್ರದೇಶದ ಜೌನ್‌ಪುರ ಪೊಲೀಸರು ಬಂಧಿಸಿದ್ದಾರೆ. ಮಚ್ಲಿಶಹರ್ ಪ್ರದೇಶದಲ್ಲಿ ಪುರುಷರ ಗುಂಪೊಂದು ಬಾಲಕಿಗೆ ಕಿರುಕುಳ ನೀಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಸಂತ್ರಸ್ತ ಬಾಲಕಿಯ ತಾಯಿ ಅಧಿಕೃತ ದೂರನ್ನು ದಾಖಲಿಸಿದ ನಂತರ, ಸೆಕ್ಷನ್ 147, 354 (ದೌರ್ಜನ್ಯ), 504 (ಕ್ರಿಮಿನಲ್ ಬೆದರಿಕೆ), ಭಾರತೀಯ ದಂಡ ಸಂಹಿತೆಯ 506, SC/ST ಕಾಯಿದೆಯ ಸೆಕ್ಷನ್ 3(2)(VA) ಮತ್ತು ಸೆಕ್ಷನ್ 67 ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಎಲ್ಲಾ ಆರು ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಆಶಿಶ್, ವಿಕ್ಕಿ, ಗೋರ್, ಪ್ರಮೋದ್, ಪಪ್ಪು ಮತ್ತು ಶೇಷಮಣಿ ಎಂದು ಹೆಸರಿಸಲಾಗಿದೆ.
ಏನಿದು ಪ್ರಕರಣ?
ಆರು ಹುಡುಗರು ತನ್ನ ಮನೆಗೆ ನುಗ್ಗಿ ಜೌನ್‌ಪುರದ ಮಚ್ಲಿಶಹರ್ ಪ್ರದೇಶದಿಂದ ತನ್ನನ್ನು ಅಪಹರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತನ್ನನ್ನು ದೂರದ ಸ್ಥಳಕ್ಕೆ ಕರೆದೊಯ್ದು ಪುರುಷರ ಗುಂಪು ಕಿರುಕುಳ ನೀಡಿತು ಎಂದು ಆರೋಪಿಸಿದ್ದಾರೆ. ಸಂತ್ರಸ್ತೆ ಹತ್ತಿರದ ಗ್ರಾಮಸ್ಥರಿಂದ ಸಹಾಯಕ್ಕಾಗಿ ಕೂಗಿದ ನಂತರವೇ ಆರೋಪಿಗಳು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆಂದು ತಿಳೀದು ಬಂದಿದೆ.
ಈ ಘಟನೆ ಮೂರು ದಿನಗಳ ಹಿಂದೆ ಅಂದರೆ ಆಗಸ್ಟ್ 14 ರಂದು ಸಂಜೆ ನಡೆದಿದೆ ಎನ್ನಲಾಗಿದೆ. ಆರೋಪಿಗಳ ಬೆದರಿಕೆಗೆ ಹೆದರಿ ಕುಟುಂಬ ಸದಸ್ಯರು ಘಟನೆಯನ್ನು ಮುಚ್ಚಿಟ್ಟಿದ್ದರು. ಆದರೆ ಆಗಸ್ಟ್ 16 ರಂದು ಬೆಳಿಗ್ಗೆ, ಬಾಲಕಿಯ ಕಿರುಕುಳದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸಂತ್ರಸ್ತೆಯ ತಾಯಿ ಅಧಿಕಾರಿಗಳ ಬಳಿ ಹೋಗಿ ದೂರು ದಾಖಲಿಸಿದ್ದಾರೆ.
ಆಜ್ ತಕ್ ಜೊತೆ ಮಾತನಾಡಿದ ಸಂತ್ರಸ್ತೆ, ಅಧಿಕಾರಿಗಳ ಕೆಲಸದ ವೇಗದಿಂದ ತನಗೆ ಅತೃಪ್ತಿ ಇದೆ ಮತ್ತು ತನಗೆ ತ್ವರಿತ ನ್ಯಾಯ ಬೇಕು ಎಂದು ಹೇಳಿದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಆರೋಪಿಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.
ಯುಪಿ ಅತ್ಯಾಚಾರ ಪ್ರಕರಣ
ಈ ಹಿಂದೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇಬ್ಬರು ದಲಿತ ಅಪ್ರಾಪ್ತ ಸಹೋದರಿಯರು ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ದರು. ಘಟನೆಯಲ್ಲಿ ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮತ್ತು ಆರೀಫ್ ಆರೋಪಿಗಳಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಯಿತು.
ಹುಡುಗಿಯರನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಮುಂದಿನ ಪೀಳಿಗೆಯು ಸಹ ನಡುಗುವಂಥ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಹೇಳಿದರು. ಆದರೆ ಈವರೆಗೂ ಅತ್ಯಾಚಾರ, ದೌರ್ಜನ್ಯ, ಕಿರುಕುಳದಂತಹ ಪ್ರಕರಣಗಳು ನಿಂತಿಲ್ಲ.












Click it and Unblock the Notifications