ಮೂರನೇ ಅಲೆಯಲ್ಲಿ ಕೊರೊನಾ ವಕ್ರದೃಷ್ಟಿ ಮಕ್ಕಳ ಮೇಲೇಕೆ? ತಜ್ಞರು ನೀಡಿದ ಕಾರಣ...
ನವದೆಹಲಿ, ಮೇ 21: ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಕೊರೊನಾ ಎರಡನೇ ಅಲೆ ಬುಡಮೇಲು ಮಾಡಿದೆ. ಈ ಎರಡನೇ ಅಲೆ ಕೊನೆಯಾಗುವುದು ಯಾವಾಗ ಎಂದು ದಿನಗಳನ್ನು ಎಣಿಸುತ್ತಿರುವಾಗಲೇ ಮೂರನೇ ಅಲೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಎರಡನೇ ಅಲೆ ತೀವ್ರತೆ ತಗ್ಗಿ ಈ ವರ್ಷದ ಕೊನೆಗೆ ಮೂರನೇ ಅಲೆ ಆರಂಭವಾಗಬಹುದು ಎಂದು ಹೇಳಿರುವುದಲ್ಲದೇ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಬೀರಬಹುದು ಎಂದು ಹೇಳಿರುವುದು ಆತಂಕವನ್ನು ಕೊಂಚ ಹೆಚ್ಚಿಸಿದೆ. ಪ್ರಧಾನಿ ಮೋದಿ ಕೂಡ ಕೊರೊನಾ ಪ್ರಕರಣಗಳು ಹೆಚ್ಚಿರುವ ಹತ್ತು ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮಕ್ಕಳಲ್ಲಿ ಕೊರೊನಾ ಕಂಡುಬಂದಿರುವ ಕುರಿತು ಅಂಕಿಅಂಶಗಳ ವರದಿ ನೀಡುವಂತೆ ಹೇಳಿದ್ದಾರೆ. ಆದರೆ ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಮಕ್ಕಳ ಮೇಲೆ ಪರಿಣಾಮ ಏಕೆ ಬೀರಬಹುದು? ಈ ಪ್ರಶ್ನೆಗೆ ಕೆಲವು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಮುಂದೆ ಓದಿ...

ರೋಗನಿರೋಧಕ ಶಕ್ತಿ ಕಡಿಮೆ ಇರುವುದೇ ಕಾರಣವೇ?
ಭಾರತದಲ್ಲಿ B.1.617 ಕೊರೊನಾ ರೂಪಾಂತರ ಸೋಂಕು ಎರಡನೇ ಅಲೆಗೆ ಕಾರಣ ಎನ್ನಲಾಗಿದೆ. ಈ ಅಲೆಯಲ್ಲಿ ಮಕ್ಕಳಿಗೂ ಸೋಂಕು ತಗುಲಿರುವುದು ವರದಿಯಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದ ಪ್ರಕರಣಗಳು ಹೆಚ್ಚಿರಲಿಲ್ಲ. ಆದರೆ ಈಗ ಮಕ್ಕಳ ಮೇಲೂ ಕೊರೊನಾ ವಕ್ರದೃಷ್ಟಿ ಬೀರಿರುವುದು ಕಂಡುಬರುತ್ತಿದೆ. "ಹಿಂದೂಸ್ತಾನ್ ಟೈಮ್ಸ್"ಗೆ ಈ ಕುರಿತು ಸಾಂಕ್ರಾಮಿಕ ಸೋಂಕು ತಜ್ಞ ಡಾ. ವಿ. ರವಿ ವಿವರಣೆ ನೀಡಿದ್ದು, "ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಸೋಂಕು ತಗುಲುತ್ತದೆ ಎಂಬುದು ಸಾಮಾನ್ಯ ಜ್ಞಾನ. ಲಸಿಕೆಯಿಂದ ಈ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇಲ್ಲವೆಂದರೆ ಈ ಸೋಂಕಿಗೆ ತುತ್ತಾಗುವುದು ಖಚಿತ. ಸದ್ಯಕ್ಕೆ ಈ ಸಾಲಿನಲ್ಲಿ ಮಕ್ಕಳಿದ್ದಾರೆ" ಎಂದಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ದೊಡ್ಡವರೇ ಸೋಂಕಿಗೆ ಹೆಚ್ಚಿನ ಮಟ್ಟದಲ್ಲಿ ತುತ್ತಾಗುತ್ತಿದ್ದರು. ಆದರೆ ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗುತ್ತಿದೆ. ಮಕ್ಕಳಿಗೆ ಲಸಿಕೆ ಇನ್ನೂ ಆರಂಭವಾಗಿಲ್ಲ ಎಂದಿದ್ದಾರೆ.

"ಮಕ್ಕಳಿಗೆ ಲಸಿಕೆ ಆರಂಭವಾಗಿಲ್ಲ"
ಕೊರೊನಾ ಮೊದಲ ಅಲೆಯಲ್ಲಿ 4% ಮಕ್ಕಳು ಮಾತ್ರ ಸೋಂಕಿಗೆ ತುತ್ತಾಗಿದ್ದರು. ಆದರೆ ಎರಡನೇ ಅಲೆಯಲ್ಲಿ ಈ ಸಂಖ್ಯೆ 10-15 %ಗೆ ಏರಿಕೆಯಾಗಿದೆ. ಮೂರನೇ ಅಲೆಯಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಭಾರತದಲ್ಲಿ ಮಕ್ಕಳಿಗೆ ಇನ್ನೂ ಲಸಿಕೆ ನೀಡುತ್ತಿಲ್ಲವಾದ್ದರಿಂದ ಅವರಿಗೆ ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚಿದೆ. ಇದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಯಾವ ವಯಸ್ಸಿನ ಮಕ್ಕಳು ಸೋಂಕಿಗೆ ತುತ್ತಾಗಬಹುದು ಎಂಬುದನ್ನು ಉಲ್ಲೇಖಿಸಿಲ್ಲ.

ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಏನೇನು ಸಿದ್ಧತೆಗಳಾಗುತ್ತಿವೆ?
ಮಕ್ಕಳಿಗೆ ಸೋಂಕು ತಗುಲುವ ಕುರಿತು ತಜ್ಞರ ಎಚ್ಚರಿಕೆ ಹಾಗೂ ಕೊರೊನಾ ಎರಡನೇ ಅಲೆ ಭೀಕರತೆಯ ಅನುಭವದ ಹಿನ್ನೆಲೆಯಲ್ಲಿ ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಬಹುಪಾಲು ರಾಜ್ಯಗಳು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಎರಡನೇ ಅಲೆಯ ಭೀಕರತೆಯನ್ನು ಕಂಡ ದೆಹಲಿ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೀಡಿಯಾಟ್ರಿಕ್ ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆಗೆ ಈ ರಾಜ್ಯಗಳು ಮುಂದಾಗಿವೆ. ಭಾರತದಲ್ಲಿ ಮಕ್ಕಳ ಮೇಲೆ ಕೊರೊನಾ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ.

ಆರು ಲಕ್ಷ ಮಕ್ಕಳಿಗೆ ಲಸಿಕೆ ನೀಡಿದ ಅಮೆರಿಕ
ಸಿಂಗಪುರದಲ್ಲಿ ಶಾಲಾ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿದ್ದು, ಶಾಲೆಗಳನ್ನು ಬಂದ್ ಮಾಡಲಾಗಿದೆ. ಅಲ್ಲಿಯೂ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಸೋಂಕಿನ ಅಪಾಯದ ಕುರಿತು ಎಚ್ಚೆತ್ತುಕೊಂಡಿರುವ ಅಮೆರಿಕ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದೆ. ಈಗಾಗಲೇ 12-15 ವಯೋಮಾನದ ಆರು ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ಭಾರತದಲ್ಲಿ 2-18 ವಯಸ್ಸಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.












Click it and Unblock the Notifications