RBI ಹೊಸ ಹಣ ವರ್ಗಾವಣೆ ನಿಯಮ 2026; ಏನೆಲ್ಲಾ ಬದಲಾವಣೆ ಹಾಗೂ ಯಾರಿಗೆಲ್ಲ ಪ್ರಯೋಜನ?
ದೇಶೀಯ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಮತ್ತು ಸುರಕ್ಷಿತವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನವೆಂಬರ್ 11, 2026ರಂದು ಈ ನಿಯಮಗಳು ಜಾರಿಗೆ ಬಂದಿದ್ದು, ತಕ್ಷಣದಿಂದಲೇ ಅನ್ವಯವಾಗುವಂತೆ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ವಿಶೇಷವಾಗಿ ಬ್ಯಾಂಕ್ ಖಾತೆ ಹೊಂದಿಲ್ಲದವರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ.
ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು, ಬ್ಯಾಂಕ್ ಖಾತೆ ಇಲ್ಲದ ವ್ಯಕ್ತಿಗಳಿಗೆ ನಗದು ರೂಪದಲ್ಲಿ ಹಣ ತಲುಪುವಂತೆ ವರ್ಗಾವಣೆ ಮಾಡಬಹುದು. ಈ ಸೇವೆಯಡಿ ಒಂದು ವಹಿವಾಟಿನಲ್ಲಿ ಗರಿಷ್ಠ 10,000 ರೂಪಾಯಿ ಕಳುಹಿಸಲು ಅವಕಾಶವಿದ್ದು, ಪ್ರತಿ ಫಲಾನುಭವಿಗೆ ತಿಂಗಳಿಗೆ ಗರಿಷ್ಠ 25,000 ರೂಪಾಯಿ ಮಿತಿ ನಿಗದಿಪಡಿಸಲಾಗಿದೆ.

ಎಟಿಎಂ, ಬಿಸಿನೆಸ್ ಕರೆಸ್ಪಾಂಡೆಂಟ್ ಏಜೆಂಟ್ ಅಥವಾ ಇತರ ಅಧಿಕೃತ ಪಾವತಿ ಕೇಂದ್ರಗಳ ಮೂಲಕ ನಗದು ರೂಪದಲ್ಲಿ ಹಣವನ್ನು ಪಡೆಯಬಹುದು. ಆದರೆ, ಹಣ ಕಳುಹಿಸುವ ಬ್ಯಾಂಕ್ ಗ್ರಾಹಕರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು.
ಬ್ಯಾಂಕ್ ಖಾತೆ ಇಲ್ಲದವರಿಂದ ಹಣ ವರ್ಗಾವಣೆ
ಬ್ಯಾಂಕ್ ಖಾತೆ ಹೊಂದಿಲ್ಲದ ಗ್ರಾಹಕರು ಬಿಸಿನೆಸ್ ಕರೆಸ್ಪಾಂಡೆಂಟ್‌ಗಳು ಅಥವಾ ಎಟಿಎಂ ಮೂಲಕ ಬೇರೆಯವರ ಬ್ಯಾಂಕ್ ಖಾತೆಗೆ ನಗದು ಜಮಾ ಮಾಡಲು ಬಯಸಿದರೆ, ಪ್ರತಿ ವಹಿವಾಟಿಗೆ ಗರಿಷ್ಠ 5,000 ರೂಪಾಯಿ ಹಾಗೂ ತಿಂಗಳಿಗೆ ಗರಿಷ್ಠ 25,000 ರೂಪಾಯಿ ಮಿತಿ ಇರಲಿದೆ. ಇನ್ನೊಂದೆಡೆ ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡುವ ಗ್ರಾಹಕರು ನೆಫ್ಟ್ (NEFT) ಮೂಲಕ ಫಲಾನುಭವಿಯ ಖಾತೆಗೆ ಗರಿಷ್ಠ 50,000 ರೂಪಾಯಿ ವರೆಗೆ ಹಣ ಕಳುಹಿಸಬಹುದು.
ಯಾರಿಗೆ ಹೆಚ್ಚು ಪ್ರಯೋಜನ?
ಈ ಹೊಸ ಮಾರ್ಗಸೂಚಿಗಳು ಬ್ಯಾಂಕ್ ಖಾತೆ ಇಲ್ಲದ ಸಾಮಾನ್ಯ ಜನರಿಗೆ ಹೆಚ್ಚು ನೆರವಾಗಲಿವೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗಿರುವ ವಲಸೆ ಕಾರ್ಮಿಕರು ತಮ್ಮ ಊರಿನಲ್ಲಿರುವ ಕುಟುಂಬ ಸದಸ್ಯರಿಗೆ ಸುಲಭವಾಗಿ ಹಣ ಕಳುಹಿಸಲು ಇದು ಸಹಾಯಕವಾಗಲಿದೆ. ಬ್ಯಾಂಕ್ ಶಾಖೆಗಳಿಲ್ಲದ ಗ್ರಾಮೀಣ ಭಾಗದ ಜನರೂ ಕೂಡ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ಮೂಲಕ ಸುಲಭವಾಗಿ ಹಣ ಪಡೆಯಬಹುದಾಗಿದೆ.
ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ
ಹಣ ವರ್ಗಾವಣೆ ವ್ಯವಸ್ಥೆಯ ದುರುಪಯೋಗವನ್ನು ತಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಸೌಲಭ್ಯದಡಿ ಖಾತೆಗೆ ಹಣ ಜಮೆಯಾದ ತಕ್ಷಣ ಗ್ರಾಹಕರಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಬೇಕು. ಯಾವುದೇ ಒಂದು ಖಾತೆ ಅಥವಾ ನಿರ್ದಿಷ್ಟ ಗ್ರೂಪ್ ಖಾತೆಗಳಿಗೆ ದಿಢೀರ್ ಹೆಚ್ಚಿನ ಹಣ ಜಮೆಯಾಗುತ್ತಿದ್ದರೆ, ಬ್ಯಾಂಕ್‌ಗಳು ತಕ್ಷಣವೇ ತನಿಖೆ ನಡೆಸಬೇಕು ಮತ್ತು ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾಹಿತಿ ನೀಡಬೇಕು. ಅಲ್ಲದೆ ಆದಾಯ ತೆರಿಗೆ ಕಾಯ್ದೆ, 2025ರ ನಿಯಮಗಳನ್ನು ಬ್ಯಾಂಕ್‌ಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಇತರ ಪ್ರಮುಖ ನಿಯಮಗಳು
* ಈ ವಹಿವಾಟುಗಳು ತಕ್ಷಣವೇ ನಡೆಯಬೇಕು ಮತ್ತು ಬೇರೆ ಬೇರೆ ಬ್ಯಾಂಕ್‌ಗಳ ನಡುವೆ ನಡೆಯುವ ಹಣಕಾಸಿನ ವಹಿವಾಟುಗಳಿಗೆ ಆರ್‌ಬಿಐ ಅನುಮೋದನೆ ಪಾವತಿ ವ್ಯವಸ್ಥೆಗಳನ್ನೇ ಬಳಸಬೇಕು.
* ಈ ಸೇವೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಸೂಕ್ತ ಶುಲ್ಕವನ್ನು ನಿಗದಿಪಡಿಸಬಹುದು ಮತ್ತು ಗ್ರಾಹಕರ ಕುಂದುಕೊರತೆ ನಿವಾರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
* ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ನಗರ ಮತ್ತು ರಾಜ್ಯ ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ, 'ಕಾರ್ಡ್-ಟು-ಕಾರ್ಡ್' ವರ್ಗಾವಣೆಗಳನ್ನು ಈ ನಿಯಮದಿಂದ ಹೊರಗಿಡಲಾಗಿದೆ.


Click it and Unblock the Notifications
