ತೋಟಗಾರಿಕಾ ಹಬ್: ಕೋಲಾರ, ಚಿಕ್ಕಬಳ್ಳಾಪುರದಿಂದ ರಾಯಲಸೀಮೆವರೆಗೆ ರೈತರಿಗೆ ಅನುಕೂಲ; ಏನಿದರ ವಿಶೇಷತೆ?
ಕೋಲಾರ/ಮದನಪಲ್ಲಿ: ಆಂಧ್ರ ಪ್ರದೇಶ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ಸಮೀಪದ ಮದನಪಲ್ಲಿಯಲ್ಲಿ 01 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 'ಬೃಹತ್ ರಾಯಲಸೀಮೆ ತೋಟಗಾರಿಕಾ ಕೇಂದ್ರ' ಸ್ಥಾಪನೆಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದರಿಂದ ಕರ್ನಾಟಕ, ಆಂಧ್ರ ಗಡಿ ಜಿಲ್ಲೆಗಳ ರೈತರು, ತೋಟಗಾರಿಕಾ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೋಲ್ಡ್ ಸ್ಟೋರೇಜ್ ದೊರೆಯುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಸಿಗದಿದ್ದಾಗ, ಹೆಚ್ಚಿನ ಇಳುವರಿ ಬಂದಾಗ ತೋಟಗಾರಿ ಮತ್ತು ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿ ಇಡಬಹುದಾಗಿದೆ. ಈ ಕೇಂದ್ರದಿಂದ ಕರ್ನಾಟಕದ ಯಾರಿಗೆಲ್ಲ ಲಾಭ ಆಗಲಿದೆ?.
ಈ ಮಹತ್ವಾಕಾಂಕ್ಷೆ ಯೋಜನೆಯು ತೋಟಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಆಂಧ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಕೇವಲ ಆಂಧ್ರ ಜಿಲ್ಲೆಗಳಿಗೆ ಮಾತ್ರವಲ್ಲದೇ, ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೂ ಇದು ಆಸರೆಯಾಗಲಿದೆ. ಕೋಲಾರದಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿ ಈ ಕೇಂದ್ರ ಎಲೆ ಎತ್ತಲಿದೆ.

ಕೋಲಾರ, ಚಿಕ್ಕಬಳ್ಳಾಪುರ ರೈತರಿಗೂ ವರದಾನ
ಕೋಲಾರ, ಮದನಪಲ್ಲಿಯಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಜ್ಯದ ದೊಡ್ಡ ಟೊಮೆಟೋ ಮಾರುಕಟ್ಟೆ ಇಲ್ಲಿದೆ ಎನ್ನಬಹುದು. ಇದರೊಂದಿಗೆ ಮಾವು, ದಾಳಿಂಬೆ, ಅವಕಾಡೋ ಸೇರಿದಂತೆ ವಿವಿಧ ಬಗೆಯ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ತರಕಾರಿಗಳು ಈ ಭಾಗದಲ್ಲಿ ಬೆಳೆಯುವುದು ಹೆಚ್ಚು. ಅವುಗಳನ್ನು ಶೀಥಲೀಕರಣದಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುವ, ಕೆಲವು ದಿನಗಳ ಕಾಲ ರಕ್ಷಿಸುವ ಮೂಲಸೌಕರ್ಯ ಕೊರತೆ ಇತ್ತು. ಆ ಸಮಸ್ಯೆ ಭವಿಷ್ಯದಲ್ಲಿ ಪರಿಹಾರವಾಗಲಿದೆ.
ರೈತರು ಬೆಳೆದ ಬೆಳೆ, ತರಕಾರಿ, ಹಣ್ಣುಗಳನ್ನು ಸಂಸ್ಕರಣಾ ಘಟಕಗಳಿಗೆ ಪೂರೈಸಲು. ಸಂಗ್ರಹಿಸಿಟ್ಟು, ಮಾರುಕಟ್ಟೆಗೆ ತಲುಪಿಸಲು ಸಹಕಾರಿ. ಆಧುನಿಕ ಕೃಷಿ ಪದ್ಧತಿ, ವ್ಯವಸಾಯ, ತೋಟಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕೋಲಾರ ರೈತರು ಇದರ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಕೋಲಾರ, ಚಿಕ್ಕಬಳ್ಳಾಪುರ ಜೊತೆಗೆ ಆಂಧ್ರದ ರಾಯಲಸೀಮಾ ಗುರಿಯಾಗಿಸಿಕೊಂಡು ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಇಲ್ಲಿ ನೀರಿನ ಲಭ್ಯತೆ ಹೇಳಿಕೊಳ್ಳುವಷ್ಟಿಲ್ಲ ಎನ್ನಲಾಗಿದೆ. ಈ ಯೋಜನೆಯು ಮುಖ್ಯವಾಗಿ ಅನಂತಪುರ, ಚಿತ್ತೂರು, ಕರ್ನೂಲ್, ನಂದ್ಯಾಲ್, ಅನ್ನಮಯ್ಯ, ಶ್ರೀ ಸತ್ಯ ಸಾಯಿ, ತಿರುಪತಿ, ಕಡಪ, ಪ್ರಕಾಶಂ ಹಾಗೂ ಮಾರ್ಕಪುರಂ ಜಿಲ್ಲೆಗಳ ರೈತರ ಬೆಳೆಗಳಿಗೆ (ಹೂವುಗಳು, ಹಣ್ಣು, ಮಸಾಲೆ ಪದಾರ್ಥ ಇತರೆ) ಅನುಕೂಲ ಒದಗಿಸಲು ಇದನ್ನು ಸ್ಥಾಪಿಸಲಾಗುತ್ತಿದೆ.
ಈ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಒಂದಷ್ಟು ಚಟುವಟಿಕೆಗಳು ಗರಿಗೆದರುತ್ತವೆ. ರಸ್ತೆ ಸುಧಾರಣೆ ಆಗುತ್ತದೆ. ಮಾರುಕಟ್ಟೆ ವಿಸ್ತರಣೆಗೆ, ರೈತರು ನಿಶ್ಚಿಂತೆಯಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.
ಸುಮಾರು ₹1 ಲಕ್ಷ ಕೋಟಿ ಹೂಡಿಕೆಯ ಯೋಜನೆ
ಮದನಪಲ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ₹1 ಲಕ್ಷ ಕೋಟಿ ರಾಯಲಸೀಮೆ ತೋಟಗಾರಿಕಾ ಹಬ್ ನಿರ್ಮಾಣಕ್ಕೆ ಸಾರ್ವಜನಿಕ ಹೂಡಿಕೆ ಸುಮಾರು ₹40,352 ಕೋಟಿ ಯಷ್ಟಿದೆ, ಖಾಸಗಿ ವಲಯದಿಂದ (ನಿರೀಕ್ಷಿತ) ಸುಮಾರು ₹60,000 ಕೋಟಿ ಹೂಡಿಕೆ ಹರಿದು ಬರಲಿದೆ. ಹಂತ ಹಂತವಾಗಿ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಿಳಿಸಿದ್ದಾರೆ.
ಅಕ್ಟೋಬರ್ 2ರಂದು ಮದನಪಲ್ಲೆಯಲ್ಲಿ ತೋಟಗಾರಿಕಾ ಹಬ್ ಯೋಜನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ. ಅನಂತ್ ಅಂಬಾನಿ ಅವರು ಈ ಕಾರ್ಯಕ್ರಮದಲ್ಲಿದ್ದರು. ಅಂಬಾನಿ ಕಂಪನಿ ಈ ಹಬ್‌ಗೆ ಹೂಡಿಕೆಯ ಪಾಲುದಾರನಾಗಿದೆ.
ಅತ್ಯಾಧುನಿಕ ವ್ಯವಸ್ಥೆ ಇಲ್ಲಿರಲಿದೆ!
ಸಿಎಂ ಚಂದ್ರಬಾಬು ನಾಯ್ಡು ಅವರು ಹೇಳುವ ಪ್ರಕಾರ, 5,860 ಹಳ್ಳಿಗಳನ್ನು 201 ಕ್ಲಸ್ಟರ್‌ಗಳಾಗಿ (ಗುಂಪುಗಳಾಗಿ) ಅಭಿವೃದ್ಧಿಪಡಿಸಲಾಗುವುದು. ಹಾಲಿ ಇರುವ ತೋಟಗಾರಿಕೆ ಬೆಳೆಯನ್ನು ಭವಿಷ್ಯದಲ್ಲಿ ಆರು ಲಕ್ಷ ಎಕರೆ ಪ್ರದೇಶದಲ್ಲಿ ವಿಸ್ತರಣೆ ಂಆಡುವುದು. ಉತ್ಪಾದನೆ ಮತ್ತು ಮಾರುಕಟ್ಟೆಯಿಂದ ಹಿಡಿದು ಸಂಸ್ಕರಣೆ ಮತ್ತು ರಫ್ತಿನವರೆಗಿನ ಪ್ರತಿಯೊಂದು ಹಂತದಲ್ಲೂ ರೈತರಿಗೆ ಸಮಗ್ರ ಬೆಂಬಲ ನೀಡುವ ಉದ್ದೇಶ ಈ ಯೋಜನೆ ಹೊಂದಿದ್ದೇ ಎಂದರು.
ಬೆಳೆ ಉತ್ಪಾದನೆ ಜೊತೆಗೆ ಉತ್ಪನ್ನಗಳಿಗೆ ಬೆಲೆಗಳ ಸ್ಥಿತೆ ಕಾಯ್ದುಕೊಳ್ಳಲಾಗುವುದು. ಸ್ಥಳೀಯ ಮಣ್ಣಿನ ಗುಣಮಟ್ಟ ಹಾಗೂ ಹವಾಮಾನ ಅನುಸಾರವಾಗಿ ಕಿವಿ, ಬಾಳೆ, ಸೇಬು, ಖರ್ಜೂರ, ಅವಕಾಡೋ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆ ಉತ್ತೇಜಿಸಲು ಆಂಧ್ರ ಸರ್ಕಾರ ತೀರ್ಮಾನಿಸಿದೆ. ಧೀರ್ಘ ಕಾಲದ ಗುರಿ, ಉದ್ದೇಶಗಳೊಂದಿಗೆ ಈ ಯೋಜನೆ ಸಾಕಾರಕ್ಕೆ ಮುಂದಾಗಿದ್ದೇವೆ. ಇದರಿಂದ ರೈತರ ಆದಾಯ ಹೆಚ್ಚಳ, ಸ್ಥಿರ ಲಾಭ ದೊರೆಯುವಂತಾಗುತ್ತದೆ.


Click it and Unblock the Notifications
