Actress Rashmika Mandanna: ಅಂದು ರಶ್ಮಿಕಾಗೆ 'ಡೀಪ್‌ಫೇಕ್ ವಿಡಿಯೋ' ಶಾಕ್, ಇಂದು 'ಬ್ರ್ಯಾಂಡ್ ಅಂಬಾಸಿಡರ್' ಪಟ್ಟ
ನವದೆಹಲಿ, ಅಕ್ಟೋಬರ್ 15: ಕರ್ನಾಟಕ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ, ವಿಡಿಯೋಗಳನ್ನು AI ತಂತ್ರಜ್ಞಾನ ಸಹಾಯದಿಂದ ಡೀಪ್‌ಫೇಕ್ ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಇದು ಸಖತ್ ವೈರಲ್ ಆಗಿತ್ತು. ಡಿಫ್ ಪೇಕ್‌ಗೆ ಬಲಿಪಶು ಆಗಿದ್ದ ಅವರು ಸೈಬರ್ ಸುರಕ್ಷತೆ ಬಗ್ಗೆ ಮಾತನಾಡಿದ್ದರು. ಇಂದು ಅವರನ್ನೇ ಸರ್ಕಾರ ಸೈಬರ್ ಸುರಕ್ಷತೆಯ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಹೌದು, ಈ ಕುರಿತು ನಟಿ ರಶ್ಮಿಕಾ ಮಂದಣ್ಣಾ ಅವರೇ ಸ್ವತಃ ವಿಡಿಯೋ ಹಂಚಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವಾಲಯದ 'ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (I4C) ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ, ಸುರಕ್ಷತೆ ಉತ್ತೇಜಿಸುವ 'ರಾಷ್ಟ್ರೀಯ ರಾಯಭಾರಿ'ಆಗಿ ನೇಮಕ ಮಾಡಲಾಗಿದೆ.

ರಾಷ್ಟ್ರವ್ಯಾಪಿ ಸೈಬರ್ ಸುರಕ್ಷತೆ ಅಭಿಯಾನ
ಅನಿಮಲ್ ಸಿನಿಮಾದ ನಟಿ ರಶ್ಮಿಕಾ ಇನ್ನುಮುಂದೆ ಸೈಬರ್ ಬೆದರಿಕೆಗಳ ವಿರುದ್ಧ ಜನರಲ್ಲಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಆನ್‌ಲೈನ್ ಸುರಕ್ಷತೆ ಉತ್ತೇಜಿಸುವ ನಿಟ್ಟಿನಲ್ಲಿ ಅವರು ರಾಷ್ಟ್ರವ್ಯಾಪಿ ಅಭಿಯಾನ ಮುನ್ನಡೆಸಲಿದ್ದಾರೆ. ರಾಯಭಾರಿ ಆಗುತ್ತಿದ್ದಂತೆ ಈ ಕುರಿತ ಅವರು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು I4C ಯ ರಾಷ್ಟ್ರೀಯ ರಾಯಭಾರಿ ಆಗಿ ನೇಮಕಗೊಂಡಿದ್ದು, ಅದನ್ನು ತಿಳಿಸಲು ಇಚ್ಛಿಸುತ್ತೇನೆ. ''ನಾವು ಮತ್ತು ಭವಿಷ್ಯದ ಪೀಳಿಗೆಗೆ ಸುರಕ್ಷಿತತೆ ಆದ್ಯತೆ ಕೊಡೋಣ. ಸೈಬರ್ ಅಪರಾಧದ ವಿರುದ್ಧ ಒಂದಾಗೋಣ. I4C ಗಾಗಿ ಬ್ರ್ಯಾಂಡ್ ಅಂಬಾಸಿಡರ್ ಪಾತ್ರವನ್ನು ಸಮರ್ಥವಾಗಿ ನಿರ್ವಃಹಿಸುವುದು, ಸೈಬರ್‌ಕ್ರೈಮ್‌ಗಳ ಬಗ್ಗೆ ಸಾಧ್ಯವಾದಷ್ಟು ನಿಮ್ಮಲ್ಲಿ ಜಾಗೃತಿ ಮೂಡಿಸಲು, ನಿಮ್ಮನ್ನು ಆ ಜಾಲದಿಂದ ರಕ್ಷಿಸಲು ಬಯಸುತ್ತೇನೆ'' ಎಂದು ಅವರು ಹೇಳಿಕೊಂಡಿದ್ದಾರೆ.
ಈ ಹಿಂದೆ ಡೀಪ್‌ಪೇಕ್ ವಿಡಿಯೋಗೆ ನಟಿ ರಶ್ಮಿಕಾ ಬಲಿಪಶು ಆಗಿದ್ದರು. ಅವರ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡಿತ್ತು. ಈ ಬಗ್ಗೆ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ನಟಿ ಪರ ನಿಂತಿದ್ದರು. ಡೀಪ್ ಫೇಕ್ ವಿರುದ್ಧ ಮಾತನಾಡಿದ್ದರು. ಪ್ರಕರಣ ದಾಖಲಾಗಿತ್ತು. ಈ ಪೈಕಿ ಒಂದಷ್ಟು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ರಾಯಭಾರಿಗೆ ನಟಿ ರಶ್ಮಿಕಾ ಸೂಕ್ತ
ಸೈಬರ್ ಅಪರಾಧದ ಬಲಿಪಶುವಾಗಿದ್ದ ರಶ್ಮಿಕಾ ಅವರಿಗೆ ಈ ಬಗ್ಗೆ ಒಂದಷ್ಟು ಅನುಭವವಾಗಿದೆ. ಅವರೇ ಈ ಸೈಬರ್ ಸುರಕ್ಷತೆ ರಾಯಭಾರಿ ಪಾತ್ರ ಸೂಕ್ತವಾದವರು ಎಂದು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ತನಗೂ ಇಂತಹ ಅನುಭವ ಆಗಿದ್ದನ್ನು ವಿಡಿಯೋದಲ್ಲಿ ವಿವರಿಸಿದ ಅವರು, ಸುರಕ್ಷತೆ ಬಗ್ಗೆ ಒತ್ತಿ ಹೇಳಿದ್ದಾರೆ.
ಆನ್‌ಲೈನ್ ಯುಗದಲ್ಲಿ ಈ ಸೈಬರ್ ಅಪರಾಧ ಅತ್ಯಂತ ಅಪಾಯಕಾರಿ ಹಾಗೂ ಪರಿಣಾಮಕಾರಿ ಸಂಗತಿಯಾಗಿದೆ. ಇದು ಇಂದಿನ ಯುವ ಸಮೂಹ, ಮಹಿಳೆ, ಮಕ್ಕಳ ಮೇಲೆ, ಅನೇಕ ಸಮುದಾಯಗಳು, ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಇಂತಹ ಸೈಬರ್ ಸಮಸ್ಯೆಗಳ ವಿರುದ್ಧ ಹೋರಾಡಲು, ಸಮರ್ಪಕ ಜಾಗೃತಿ ಮೂಡಿಸಲು ಸೈಬರ್ ಸುರಕ್ಷತೆಯ ಕಾಳಜಿ ವಹಿಸಲು ನಾನು ಸಮರ್ಪಿತವಾಗಿದ್ದೇನೆ. ಇದಕ್ಕಾಗಿ ನಾವೆಲ್ಲರು ಒಗ್ಗೂಡುವುದು, ನಮ್ಮೊಂದಿಗೆ ನೀವೆಲ್ಲರು ಕೈ ಜೋಡಿಸುವುದು ಮುಖ್ಯ ಎಂದು ನಟಿ ರಶ್ಮಿಕಾ ಮಂದಣ್ಣಾ ತಿಳಿಸಿದ್ದಾರೆ.












Click it and Unblock the Notifications