Breaking; ಕೊಲೆ ಪ್ರಕರಣ, ರಾಮ್ ರಹೀಮ್ ಸಿಂಗ್‌ಗೆ ಜೀವಾವಧಿ ಶಿಕ್ಷೆ
ನವದೆಹಲಿ, ಅಕ್ಟೋಬರ್ 18; ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್‌ಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ 20 ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಅಕ್ಟೋಬರ್ 8ರಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡಿತ್ತು. ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ರಂಜಿತ್ ಸಿಂಗ್ ಕೊಲೆ ಪ್ರಕರಣದ ದೋಷಿಗಳಾದ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಡೇರಾ ಸಚ್ಚಾ ಸೌಧದ ಅನುಯಾಯಿಯಾಗಿದ್ದ ರಂಜಿತ್ ಸಿಂಗ್ 2002ರ ಜುಲೈ 10ರಂದು ಕೊಲೆಯಾಗಿದ್ದರು.

ರಂಜಿತ್ ಸಿಂಗ್ ಪುತ್ರ ನೀಡಿದ ದೂರಿನ ಅನ್ವಯ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಜೈಲಿನಲ್ಲೇ ಇರುವ ರಾಮ್ ರಹೀಮ್ ಸಿಂಗ್; ಜಗ್ ಸೀರ್ ಸಿಂಗ್ ತಮ್ಮ ತಂದೆ ರಂಜಿತ್ ಸಿಂಗ್ ಕೊಲೆಯಾಗಿದೆ ಎಂದು ದೂರು ನೀಡಿದ್ದರು. 2003ರ ಡಿಸೆಂಬರ್ 3ರಂದು ಸಿಬಿಐ ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶ ನೀಡಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಂಡು ಈಗ ಶಿಕ್ಷೆ ಪ್ರಕಟವಾಗಿದೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿಯೇ ಇದ್ದಾರೆ. ಡೇರಾ ಸಚ್ಚಾ ಸೌಧದಲ್ಲಿ ಭಕ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಆರೋಪ ಸಾಬೀತಾಗಿದ್ದು, 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿಯೂ ರಾಮ್ ರಹೀಮ್ ಸಿಂಗ್ ದೋಷಿಯಾಗಿದ್ದಾರೆ.
ಪತ್ರಕರ್ತನ ಹತ್ಯೆ ಪ್ರಕರಣ; ರಾಮ್ ರಹೀಮ್ ಸಿಂಗ್ ಪತ್ರಕರ್ತ ರಾಮಚಂದ್ರ ಛತ್ರಪತಿ ಕೊಲೆ ಪ್ರಕರಣದಲ್ಲಿಯೂ ಅಪರಾಧಿ. ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರು ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ 2019ರ ಜನವರಿಯಲ್ಲಿ ತೀರ್ಪು ಪ್ರಕಟಿಸಿದೆ.
2002ರ ಅಕ್ಟೋಬರ್‌ನಲ್ಲಿ ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ನಡೆದಿತ್ತು. 2003ರಲ್ಲಿ ಪ್ರಕರಣ ದಾಖಲಾಗಿತ್ತು. 2006ರಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ವಿವಿಧ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸಿಂಗ್‌ಗೆ ಈಗ ಜೀವಾವಧಿ ಶಿಕ್ಷೆ ಘೋಷಣೆ ಮಾಡಲಾಗಿದೆ.












Click it and Unblock the Notifications