Ram Temple: ರಾಮಮಂದಿರ ಉದ್ಘಾಟನೆ ದಿನವೇ ನಮಗೆ ರಾಮನಂಥಹ ಮಗು ಬೇಕು: ಜ.22ರಂದೇ ಡೆಲಿವರಿ ಮಾಡಿ ಎಂದ ಗರ್ಭಿಣಿಯರು
ನವದೆಹಲಿ, ಜನವರಿ 08: ಭಾರತದಲ್ಲಿ ರಾಮಜಪ ಶುರುವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಮರ್ಯಾದಾ ಪರುಷೋತ್ತಮನ ಪ್ರಾಣ ಪ್ರತಿಷ್ಠಾಪನೆ ದಿನವೇ ನಮಗೆ ಹೆರಿಗೆ ಮಾಡಬೇಕೆಂದು ಗರ್ಭೀಣಿ ಮಹಿಳೆಯರು ವೈದ್ಯಾಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಮರ್ಯಾದಾ ಪರುಷೋತ್ತಮ, ಸರ್ವ ಗುಣ ಸಂಪನ್ನ, ದೇವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯು ಇದೇ ಜನವರಿ 22ರಂದು ಅಯೋಧ್ಯ ರಾಮ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ದಿನವೇ ತಮ್ಮ ಮಕ್ಕಳು ಜನಿಸಬೇಕು ಎಂದು ಗರ್ಭಿಣಿಯರು ಆಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವೈದ್ಯಾಧಿಕಾರಿಗಳಿಗೆ ಸಿಸೇರಿಯನ್ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.

ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದೆ ತಮಗೆ ಹೆರಿಗೆ ಮಾಡಿಸಬೇಕೆಂದು ವೈದ್ಯರಿಗೆ ಗರ್ಭಿಣಿಯರು ಒತ್ತಾಯಿಸುತ್ತಿರುವ ಕುತೂಹಲಕರ ಪ್ರಸಂಗಳು ಉತ್ತರ ಪ್ರದೇಶ ರಾಜ್ಯದ ಕಾನ್ಪುರ ನಗರದಲ್ಲಿ ನಡೆದಿವೆ.
35 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಸಕಲ ವ್ಯವಸ್ಥೆ
ಕಾನ್ಪುರದ ಗಾಯತ್ರಿ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಆಸ್ಪತ್ರೆಯಲ್ಲಿ ಜನವರಿ 22ರಂದೇ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಂತೆ ನಮಗೆ 12ರಿಂದ 14 ಗರ್ಭೀಣಿಯರು ಮನವಿ ಮಾಡಿದ್ದಾರೆ. ಅವರ ಮನವಿ ಮೇರೆಗೆ ಜನವರಿ 12ರಂದು ಒಂದೇ ದಿನ 35 ಸಿಸೇರಿಯನ್ ಹೆರಿಗೆ ಮಾಡಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ವೈಧ್ಯೆ, ಸ್ತ್ರೀರೋಗ ಹೆರಿಗೆ ತಜ್ಞೆ ಡಾ.ಸೀಮಾ ದ್ವಿವೇದಿ ಮಾಹಿತಿ ನೀಡಿದ್ದಾರೆ.
ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ನಡೆಯಲಿದೆ. ಅಂದೇ ತಮ್ಮ ಗರ್ಭದಲ್ಲಿ ಮಗು ಜನಿಸುವುದು ಶುಭಕರ ಮತ್ತು ಶ್ರೇಷ್ಠ ಎಂದು ಈ ಗರ್ಭಿಣಿ ಸ್ತ್ರೀಯರು ಭಾವಿಸಿದ್ದಾರೆ. ಈ ಕಾರಣದಿಂದಲೇ ಅವರು ಹೆರಿಗೆ ಮಾಡುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದಾರೆ.

ರಾಮನ ಗುಣ ಮಗುವಿನಲ್ಲಿ ಕಾಣುವ ಆಶಯ
ರಾಮನ ಪ್ರತಿಷ್ಠಾಪನೆ ದಿನದಂದು ಜನಿಸಿದ ಮಗು ಜೀವನದಲ್ಲಿ ಶ್ರೀರಾಮನ ರೀತಿಯಲ್ಲೇ ಸಹನೆ, ಪ್ರೀತಿ ಮತ್ತು ಮಾನವೀಯ ಗುಣಗಳನ್ನು ಹೊಂದಿರುತ್ತಾನೆ. ಈ ದಿವಸ ಹಿಂದೂಗಳ ಪಾಲಿಗೆ ಸ್ಮರಣೀಯ ದಿವಸವಾಗಿದ್ದು, ಅಂದೆ ತಮ್ಮ ಮಗುವಿಗೆ ಜನನ ನೀಡಿದರೆ ಸಾರ್ಥಕ ಭಾವನೆ ಹೊಂದುವುದಾಗಿ ಈ ಗರ್ಭಿಣಿಯರು ಆಶಯ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಕಾನ್ಪುರದಲ್ಲಿ ಗರ್ಭಿಣಿ ಮಹಿಳೆಯರು ಜನವರಿ 22ರಂದು ಸಿಸೇರಿಯನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಜ್ಞೆ ಡಾ.ಸೀಮಾ ದ್ವಿವೇದಿ ತಿಳಿಸಿದ್ದಾರೆ.












Click it and Unblock the Notifications